

ಸೊರಬ: ತಾಲೂಕಿನಾದ್ಯಂತ ಮಳೆ ಅಬ್ಬರಿಸುತ್ತಿದೆ. ಸೋಮವಾರ ಹಲವಡೆ ಮರಗಳು ಧರೆಗೆ ಉರುಳಿದ್ದು, ಹಲವು ಮನೆಗಳಿಗೆ ಭಾಗಶಃ ಹಾನಿಯದ ವರದಿಯಾಗಿದೆ.
ಬಾಡದಬೈಲು ಗ್ರಾಮದಲ್ಲಿ ಬಿರುಸಿನ ಗಾಳಿ ಸಹಿತ ಮಳೆಗೆ ಅಂಗನವಾಡಿ ಕೇಂದ್ರದ ಮೇಲೆ ಮರವೊಂದು ಉರುಳಿದೆ. ಆಗ ಕೇಂದ್ರದಲ್ಲಿ 9 ಮಕ್ಕಳಿದ್ದರು. ಅದೃಷ್ಟವಶಾತ್ ಯಾವುದೇ ತೊಂದರೆಯಾಗಿಲ್ಲ.
ಹಾಲಗಳಲೆ- ಇಂಡುವಳ್ಳಿ ಮಾರ್ಗದ ಕೊಳುವಳ್ಳಿ ಸಮೀಪ ರಸ್ತೆಗೆ ಮರ ಬಿದ್ದ ಹಿನ್ನೆಲೆಯಲ್ಲಿ ರಸ್ತೆಯಲ್ಲಿ ಕೆಲ ಸಮಯ ಸಂಚಾರವಿಲ್ಲದೆ ಇಂಡವಳ್ಳಿ- ಹಾಲಗಳಲೆ ಮಾರ್ಗವಾಗಿ ಸಂಚರಿಸುವ ಗ್ರಾಮೀಣ ಬಸ್, ಶಾಲಾ ಕಾಲೇಜು ಮಕ್ಕಳು ಶಾಲೆಗೆ ಹೋಗಲು ಪರದಾಡುವಂತಾಗಿತ್ತು. ಬಸ್ ಬೇರೆ ಮಾರ್ಗ ಹಿಡಿದು ಹೋದರೂ ಹರೂರು ಗ್ರಾಮದ ಬಳಿ ಮರ ಬಿದ್ದು ಮತ್ತೆ ವಾಪಸ್ ಮಾವಲಿ ಮಾರ್ಗವಾಗಿ ತಡವಾಗಿ ಸೊರಬ ಸೇರಬೇಕಾಯಿತು.
ಮಳೆಗೆ ಆನವಟ್ಟಿ ಹೋಬಳಿಯ ವಡ್ಡಿಗೇರಿ ಗ್ರಾಮದ ನಾಗಮ್ಮ ಎಂಬವರ ಮನೆಗೆ ಮತ್ತು ಹಿರೇಕಬ್ಬೂರು ಗ್ರಾಮದ ಹನುಮಂತಪ್ಪ ಎಂಬವರ ಮನೆಗೆ ಹಾನಿ ಸೇರಿದಂತೆ 8 ಮನೆಗಳು ಭಾಗಶಃ ಹಾನಿಯಾಗಿದ್ದರೆ ಒಂದು ಕೊಟ್ಟಿಗೆ ಮನೆಗೆ ಹಾನಿಯಾಗಿದೆ. ಅಲ್ಲದೆ ಮತ್ತೊಮ್ಮೆ ವರದಾ ಮತ್ತು ದಂಡಾವತಿ ನದಿಗಳ ನೀರಿನ ಮಟ್ಟ ಹೆಚ್ಚುತ್ತಿದೆ.