ಸೊರಬ ಪುರಸಭೆ ಬಜೆಟ್: ಹಸರೀಕರಣ, ಕುಡಿಯುವ ನೀರು, ಸ್ವಚ್ಛತೆಗೆ ಆದ್ಯತೆ

SOR WEBBB
Published on

ಸೊರಬ: ಸೊರಬ ಪುರಸಭೆಯ 2023-24ನೇ ಸಾಲಿನ 18.79 ಕೋಟಿ ರೂ. ಗಾತ್ರದ ಬಜೆಟ್‌ನ್ನು ಅಧ್ಯಕ್ಷ ಈರೇಶ್ ಮೇಸ್ತ್ರಿ ಸೋಮವಾರ ಮಂಡಿಸಿದರು.

ಪುರಸಭೆಯಾಗಿ ಮೇಲ್ದರ್ಜೆಗೇರಿದ ನಂತರ 2ನೇ ಬಜೆಟ್ ಇದಾಗಿದೆ. ಇದೇ ಮೊದಲ ಬಾರಿಗೆ ದೊಡ್ಡ ಗಾತ್ರ ಬಜೆಟ್ ಮಂಡಿಸಲಾಗಿದೆ. 18.26 ಕೋಟಿ ರೂ. ವೆಚ್ಚವನ್ನು ಹೊಂದಿದ್ದು 63 ಲಕ್ಷ ರೂ. ಉಳಿತಾಯ ನಿರೀಕ್ಷಿಸುವ ಬಜೆಟ್ ಮಂಡಿಸಲಾಗಿದೆ. ಸಮಗ್ರ ಅಭಿವೃದ್ಧಿ ಕಲ್ಪನೆ ಹೊಂದಿದ್ದು ಕುಡಿಯುವ ನೀರು, ವಿದ್ಯುತ್, ಕಟ್ಟಡಗಳ ನಿರ್ಮಾಣ, ಹಸಿರೀಕರಣ, ಸ್ವಚ್ಛತೆ, ಉದ್ಯಾನ ನಿರ್ಮಾಣ ಸೇರಿದಂತೆ ಹಲವು ಪ್ರಮುಖ ವಿಷಯಗಳಿಗೆ ಆದ್ಯತೆ ನೀಡಲಾಗಿದೆ.

ಕಟ್ಟಡ ಮತ್ತು ಭೂ ಕಂದಾಯ, ಅಂಗಡಿ ಬಾಡಿಗೆ, ಮಾರುಕಟ್ಟೆ ಹರಾಜು, ಜಾಹೀರಾತು ಕರ, ಕಟ್ಟಡಗಳ ಲೈಸೆನ್ಸ್, ಅಭಿವೃದ್ಧಿ ಶುಲ್ಕ, ಉದ್ಯಮ ಲೈಸೆನ್ಸ್, ಕಂದಾಯ ವಸೂಲಿ, ಖಾತೆ ಬದಲಾವಣೆ, ನೀರಿನ ಕಂದಾಯ, ಬ್ಯಾಂಕ್ ಖಾತೆಯಿಂದ ಬಂದ ಬಡ್ಡಿ, ಆಸ್ತಿ ತೆರಿಗೆಯಿಂದ ಬಂದ ದಂಡ, 14ನೇ ಹಣಕಾಸಿನ ಅನುದಾನ ಎನ್‌ಎಫ್‌ಸಿ ಮುಕ್ತ ನಿಧಿ ಅನುದಾನ, ಕುಡಿಯುವ ನೀರಿನ ಪೂರೈಕೆ ಕಾಮಗಾರಿಗಳಿಗೆ ಅನುದಾನ, ಎಸ್‌ಬಿಎಂ ಅನುದಾನ, ವಿಶೇಷ ಅನುದಾನವನ್ನು ಸೇರಿದಂತೆ 14.89 ಕೋಟಿ ರೂ. ಆದಾಯವನ್ನು ನಿರೀಕ್ಷಿಸಲಾಗಿದೆ.

ಪಟ್ಟಣ ಸೇರಿದಂತೆ, ಪಟ್ಟಣದ ವ್ಯಾಪ್ತಿಗೆ ಒಳಪಟ್ಟ ಗ್ರಾಮಗಳ ಅಭಿವೃದ್ಧಿಗೆ ಆದ್ಯತೆ ನೀಡುವುದು. ಬೀದಿದೀಪ ಅಳವಡಿಕೆ, ಬಿಡಾಡಿ ದನಗಳನ್ನು ಹಿಡಿಯುವುದು, ಬೀದಿ ನಾಯಿಗಳ ಸಂತಾನ ನಿಯಂತ್ರಣ, ಚಿಕಿತ್ಸೆ ಸೇರಿದಂತೆ ಮಾನವ ಸಂಪನ್ಮೂಲಗಳ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ.

ಪಟ್ಟಣ ಪಂಚಾಯಿತಿಯಿಂದ ಪುರಸಭೆಯಾಗಿ ಮೇಲ್ದರ್ಜೆಗೆ ಏರಿದ ಬಳಿಕ, ಪುರಸಭಾ ವ್ಯಾಪ್ತಿ ಹೆಚ್ಚಿದ್ದು ಅದಕ್ಕನುಗುಣವಾಗಿ ಸಾರ್ವಜನಿಕರಿಗೆ ಅನುಕೂಲವಾಗುವಂತೆ ಹಾಗೂ ಎಲ್ಲ ವರ್ಗವನ್ನು ಗಮನದಲ್ಲಿಟ್ಟುಕೊಂಡು 2023-24ನೇ ಸಾಲಿನ ಬಜೆಟ್ ಮಂಡನೆ ಮಾಡಲಾಗಿದೆ. ಈ ಬಾರಿ ದೊಡ್ಡ ಗಾತ್ರದ ಬಜೆಟ್ ಆಗಿದ್ದರೂ ಆದಾಯದ ನಿರೀಕ್ಷೆಯೊಂದಿಗೆ 63.61 ಲಕ್ಷ ಉಳಿತಾಯ ನಿರೀಕ್ಷಿಸಲಾಗಿದೆ ಎಂದು ಈರೇಶ್ ಮೇಸ್ತ್ರಿ ತಿಳಿಸಿದರು.

ಮರೂನ್ ಬ್ಯಾಗನಲ್ಲಿತ್ತು ಗುಟ್ಟು: ಬಜೆಟ್ ಮಂಡನೆಗೆ ಪುರಸಭಾಧ್ಯಕ್ಷ ಈರೇಶ್ ಮೇಸ್ತ್ರಿ ಕೈಯಲ್ಲಿ ಮರೂನ್ ಬಣ್ಣದ ಬ್ಯಾಗಿನೊಂದಿಗೆ ಆಗಮಿಸಿದ್ದು, ಎಲ್ಲರ ಗಮನ ಸೆಳೆಯಿತು.

ಯಾವುದಕ್ಕೆ ಎಷ್ಟು ಅನುದಾನ?: ನೀರು ಸರಬರಾಜಿಗಾಗಿ 35 ಲಕ್ಷ ರೂ., ರಸ್ತೆಗೆ ನಾಮಫಲಕ ಅಳವಡಿಸಲು 25 ಲಕ್ಷ ರೂ., ಮೀನು ಮಾರುಟಕಟ್ಟೆ ನಿರ್ಮಾಣಕ್ಕೆ 77 ಲಕ್ಷ ರೂ., ನಗರದಲ್ಲಿ ಸಿಸಿ ಕ್ಯಾಮರಾ ಮತ್ತು ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಲು 39.67 ಲಕ್ಷ ರೂ., ಹೂ-ಹಣ್ಣು ಮಾರುಕಟ್ಟೆ ನಿರ್ಮಾಣಕ್ಕೆ 80.50 ಲಕ್ಷ ರೂ., ಪುರಸಭೆ ವ್ಯಾಪ್ತಿಯಲ್ಲಿ ಹಸಿರೀಕರಣಕ್ಕೆ 5.75 ಲಕ್ಷ ರೂ., ಲಘು ವಾಹನಗಳ ಖರೀದಿಗೆ 23 ಲಕ್ಷ ರೂ., ನಗರ ವಿನ್ಯಾಸಕ್ಕೆ 21.16 ಲಕ್ಷ ರೂ., ರಸ್ತೆ ಇಕ್ಕೆಲಗಳಲ್ಲಿ ಬಾಕ್ಸ್ ಚರಂಡಿ ಅಳವಡಿಸಲು 5.95 ಕೋಟಿ ರೂ., ಸ್ಮಶಾನ ಅಭಿವೃದ್ಧಿಗೆ 35 ಲಕ್ಷ ರೂ., ಕುಡಿಯುವ ನೀರು ಸರಬರಾಜಿಗೆ 60.17 ಲಕ್ಷ ರೂ., ಪ್ರಕೃತಿ ವಿಕೋಪ ನಿರ್ವಹಣೆಗೆ 28.75 ಲಕ್ಷ ರೂ., ಉದ್ಯಾನ ನಿರ್ಮಾಣಕ್ಕೆ 20 ಲಕ್ಷ ರೂ., ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಅಭಿವೃದ್ಧಿ ಯೋಜನೆಗೆ ಶೇ.24.10, ಬಡವರ ಕಲ್ಯಾಣಕ್ಕಾಗಿ ಶೇ 7.25, ಅಂಗವಿಕಲರ ಕಲ್ಯಾಣಕ್ಕೆ ಶೇ.5 ಅನುದಾನ ಮೀಸಲಿರಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net