ಸೊರಬ: ತೆರವು ಕಾರ್ಯಾಚರಣೆ ತಾತ್ಕಾಲಿಕ ಸ್ಥಗಿತ

SOR WEB
Published on

ಸೊರಬ: ಪಟ್ಟಣದ ಸೊರಬ- ಸಾಗರ ರಸ್ತೆಯ ಪಕ್ಕದ ಹಿರೇಶಕುನ ಕೆರೆಯ ಸಮೀಪ ಸರ್ವೇ ನಂ.114ರ 1.4 ಎಕರೆ ಜಾಗದಲ್ಲಿನ ಮನೆ, ಅಂಗಡಿ ಮುಂಗಟ್ಟುಗಳು ತೆರವು ಕಾರ್ಯಾಚರಣೆಯನ್ನು ತಾಲೂಕು ಆಡಳಿತ ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದೆ.

ಬುಧವಾರ ಕಾರ್ಯಾಚರಣೆಗೆ ಸ್ಥಳೀಯರಿಂದ ತೀವ್ರ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ನಾಳೆ ತೆರವುಗೊಳಿಸಲಾಗುವುದು. ಕಟ್ಟಡದ ಒಳಗಡೆ ಇರುವ ಸಾಮಗ್ರಿಗಳನ್ನು ತಗೆದುಕೊಳ್ಳುವಂತೆ ಹೇಳಿ ಹೋದ ಅಧಿಕಾರಿಗಳು ಗುರುವಾರ ಅತ್ತ ಸುಳಿದಿಲ್ಲ. ನಿವಾಸಿಗಳು ಮತ್ತು ದಲಿತ ಸಂರ್ಘಷ ಸಮಿತಿಯವರು ಅಂಗಡಿ ಮುಂದೆ ಗುರುವಾರವೂ ಹೋರಾಟ ಮುಂದುವರಿಸಿದ್ದಾರೆ. ಇಲ್ಲಿನ ಕೆಲ ಅಂಗಡಿಗಳಲ್ಲಿ ಎಂದಿನಂತೆ ವ್ಯಾಪಾರ, ವಹಿವಾಟು ನಡೆದವು. ತಾಲೂಕು ಆಡಳಿತಕ್ಕೆ ಶುಕ್ರವಾರ ಮತ್ತು ಶನಿವಾರ ಸರ್ಕಾರಿ ರಜೆ ಹಾಗೂ ಭಾನುವಾರ ರಜೆ ಇರುವುದರಿಂದ ಈ ದಿನಗಳಲ್ಲಿ ತೆರವು ಕಾರ್ಯಾಚರಣೆ ನಡೆಯುವುದು ಅನುಮಾನ. ಇತ್ತ ನಿವಾಸಿಗಳು ತಹಸೀಲ್ದಾರ್ ಹಾಗೂ ಜಿಲ್ಲಾಧಿಕಾರಿ ಆದೇಶದ ವಿರುದ್ಧ ಸೊರಬ ನ್ಯಾಯಾಲಯದಲ್ಲಿ ತಾತ್ಕಾಲಿಕ ಪ್ರತಿಬಂಧಕಾಜ್ಞೆಗೆ ಅರ್ಜಿ ಸಲ್ಲಿಸಿದ್ದು ಆದೇಶಕ್ಕೆ ಕಾಯುತ್ತಿದ್ದಾರೆ.

ಮತದಾರರ ಪಟ್ಟಿ ಬಗ್ಗೆ ವಿವಿಧ ಸಂಘಸಂಸ್ಥೆಗಳ ಜತೆ ಸಭೆ ಹಾಗೂ ಹೆಚ್ಚಿನ ಪೊಲೀಸ್ ಸಿಬ್ಬಂದಿ ಅಗತ್ಯವಿದೆ. ಆದ ಕಾರಣ ಗುರುವಾರ ತೆರವು ಸಾಧ್ಯವಾಗಿಲ್ಲ. ಕಾನೂನು ಬದ್ಧವಾಗಿ ಇದು ಮುಂದುವರಿಯುತ್ತದೆ. ಒಂದೆರಡು ದಿನ ತಡವಾಗಬಹುದು ಎಂದು ತಹಸೀಲ್ದಾರ್ ಡಾ. ಮೋಹನ್ ಭಸ್ಮೆ ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net