

ಕೆಂಭಾವಿ: ರೈತರ ಪ್ರಮುಖ ನೀರಾವರಿ ಮೂಲಗಳಲ್ಲಿ ಒಂದಾದ ಪಟ್ಟಣದ ನಾರಾಯಣಪುರ ಎಡದಂಡೆ ಕಾಲುವೆಯ ಗುತ್ತಿ ಬಸವಣ್ಣ (ಇಂಡಿ) ಏತ ನೀರಾವರಿ ಜಾಕ್‌ವೆಲ್ ಸರಿಯಾದ ನಿರ್ವಹಣೆ ಇಲ್ಲದೆ ದಿನದಿಂದ ಸೊರಗುತ್ತಿದೆ.
ಯಾದಗಿರಿ ಜಿಲ್ಲೆ ಸೇರಿ ವಿಜಯಪುರ ಹಾಗೂ ಕಲಬುರಗಿ ಜಿಲ್ಲೆಯ ಸಾವಿರಾರು ಹೆಕ್ಟೇರ್ ಜಮೀನುಗಳಿಗೆ ನೀರಾವರಿ ಸೌಲಭ್ಯ ಕಲ್ಪಿಸುವ ಈ ಜಾಕೆವೆಲ್ ಮುಖ್ಯ ಘಟ್ಟದಲ್ಲಿ ಜಾಲಿಗಿಡ ಬೆಳೆದು ಎಲ್ಲೆಂದರಲ್ಲಿ ಕಸದ ತಾಣವಾಗಿ ಮಾರ್ಪಟ್ಟಿದೆ.
ಪ್ರತಿ ವರ್ಷ ಈ ನೀರಾವರಿ ಘಟಕದಲ್ಲಿ ಬೃಹತ್ ಯಂತ್ರಗಳಿಗೆ ಹಲವು ರೀತಿಯ ತಾಂತ್ರಿಕ ತೊಂದರೆ ಬರುತ್ತಿದ್ದು, ಇದಕ್ಕೆ ನಿರ್ವಹಣೆಯ ಪ್ರಮುಖ ಕೊರತೆಯೂ ಕಾರಣ ಎಂಬುದು ತಜ್ಞರ ಅಭಿಪ್ರಾಯವಾಗಿದೆ. ಒಟ್ಟು ಎಂಟು ಬೃಹತ್ ಯಂತ್ರಗಳ ಮೂಲಕ ವಿಜಯಪುರ ಜಿಲ್ಲೆಯ ಕೊನೇ ಭಾಗದ ರೈತರಿಗೂ ನೀರುಣಿಸುವ ಪ್ರಮುಖ ಏತ ನೀರಾವರಿ ಘಟಕ ಇದಾಗಿದ್ದು, ನೀರು ಮೇಲೆತ್ತುವ ಪ್ರದೇಶ ಸಂಪೂರ್ಣ ಮುಳ್ಳುಕಂಟಿಯಿAದ ಕೂಡಿ ಮುಖ್ಯ ಕಾಲುವೆಗಳಿಗೆ ನೀರು ಪೂರೈಸುವ ದೊಡ್ಡ ಗಾತ್ರದ ಕೊಳವೆಗಳಲ್ಲಿ ಬಂದು ಸೇರುತ್ತಿದ್ದು ಇದರಿಂದ ನೀರು ಕಾಲುವೆಗೆ ಹರಿಯುವಲ್ಲಿ ಅನೇಕ ತೊಂದರೆಯಾಗುತ್ತಿದೆ.
ಈ ನೀರಾವರಿ ಪ್ರದೇಶ ಸಿಂದಗಿ ತಾಲೂಕಿನ ರಾಂಪುರ ವ್ಯಾಪ್ತಿಗೆ ಒಳಪಡುತ್ತಿದ್ದು, ಪಟ್ಟಣದಲ್ಲಿ ಈ ಕಚೇರಿಯ ಉಪವಿಭಾಗ ಕೆಲಸ ಮಾಡುತ್ತಿದೆ. ಇಲ್ಲಿರುವ ಅಧಿಕಾರಿಗಳ ಬೇಜವಾಬ್ದಾರಿಯಿಂದ ಪ್ರತಿವರ್ಷ ಸಮಸ್ಯೆ ಎದುರಾಗುತ್ತಿದ್ದು, ಇದರ ನಿರ್ವಹಣೆಗೆಂದೆ ಪ್ರತಿ ಮಾರ್ಚ್ ತಿಂಗಳಿನಲ್ಲಿ ಹಣ ಖರ್ಚು ಮಾಡುತ್ತಿದ್ದರೂ ನಿರ್ವಹಣೆ ಮಾತ್ರ ಶೂನ್ಯವಾಗಿದೆ ಎಂಬುದು ರೈತರ ಆರೋಪವಾಗಿದೆ.
ಕಾಲುವೆಗಳಲ್ಲಿ ಸರಿಯಾದ ನೀರು ಹರಿಯದ ವೇಳೆ ಪ್ರತಿವರ್ಷ ನೂರಾರು ರೈತರು ಇಲ್ಲಿ ಪ್ರತಿಭಟನೆ ಮಾಡುತ್ತಿರುವುದು ಸರ್ವೇ ಸಾಮಾನ್ಯ. ಒಳ ಮತ್ತು ಹೊರ ಹೋಗುವ ಕಾಲುವೆಗಳ ದುರಸ್ತಿ, ಇಲ್ಲಿನ ವಿದ್ಯುತ್, ಮೋಟಾರ ಘಟಕ, ಪೈಪ್‌ಲೈನ್ ಪ್ರದೇಶ ಸೇರಿ ಹಲವು ವಿಭಾಗಗಳಲ್ಲಿ ಪರಿಸ್ಥಿತಿ ಹದಗೆಟ್ಟಿದ್ದು, ಇಲಾಖೆ ವಿಶೇಷ ನಿಗಾವಹಿಸಿ ಈ ಬೃಹತ್ ಏತ ನೀರಾವರಿ ಸರಿಯಾದ ರೀತಿ ನಿರ್ವಹಣೆ ಮಾಡಿ ರೈತತರಿಗೆ ಅನುಕೂಲ ಮಾಡಿಕೊಡಬೇಕು ಎಂಬುದು ಹಲವು ರೈತರ ಒತ್ತಾಯವಾಗಿದೆ.