ಸೈಬರ್ ಪ್ರಕರಣ: 3 ಲಕ್ಷ ರೂ. ಕಳೆದುಕೊಂಡ ಇಬ್ಬರು ವ್ಯಕ್ತಿಗಳು

Online Fraud
Published on

ಹಾಸನ: ಹಣ ದುಪ್ಪಟ್ಟು ಮಾಡುವುದಾಗಿ ಹೇಳಿ ಸೈಬರ್ ವಂಚಕರು ಹೇಳಿದ ಮಾತು ನಂಬಿ ನಗರದ ನಂದಿನಿ ಲೇಔಟ್ ಹಾಗೂ ವಲ್ಲಬಾಯಿ ರಸ್ತೆಯ ಇಬ್ಬರು ನಿವಾಸಿಗಳು 3 ಲಕ್ಷ ರೂ. ಕಳೆದುಕೊಂಡಿದ್ದಾರೆ.

ನಂದಿನಿ ಲೇಔಟ್ ನಿವಾಸಿಯ ಮೊಬೈಲ್‌ಗೆ ಅ.17ರಂದು ವಂಚಕರು ಮೆಸೇಜ್ ಮಾಡಿದ್ದು ವೀಬಿ ಎಂಬ ಆನ್‌ಲೈನ್ ಕಂಪನಿಯಿಂದ ಇನ್‌ಸ್ಟಾ ಗ್ರಾಂ ಸಾಮಾಜಿಕ ಜಾಲತಾಣದಲ್ಲಿ ಬ್ಲಾಗರ್ಸ್ ಹಾಗು ಕಂಟೆಂಟ್ ಕ್ರಿಯೇಟರ್ಸ್‌ಗಳನ್ನು ಫಾಲೋ ಮಾಡಿದರೆ ಹಣ ಹಾಕುವುದಾಗಿ ತಿಳಿಸಿದ್ದಾರೆ. ಅದರಂತೆ ಫಾಲೋ ಮಾಡಿದಾಗ ಸಂತ್ರಸ್ತ ವ್ಯಕ್ತಿಯ ಬ್ಯಾಂಕ್ ಖಾತೆಯಿಂದ ಒಟ್ಟು 1,74,000 ಹಣವನ್ನು ಅಪರಿಚಿತನು ಆನ್‌ಲೈನ್ ಮೂಲಕ ವರ್ಗಾಯಿಸಿಕೊಂಡಿದ್ದಾರೆ. ಈ ಸಂಬಂಧ ಅಪರಿತನನ್ನು ಪತ್ತೆ ಮಾಡಿ, ಕಾನೂನು ಕ್ರಮ ಜರುಗಿಸಬೇಕೆಂದು ಸಂತ್ರಸ್ತ ವ್ಯಕ್ತಿ ನಗರದ ಅ.19ರಂದು ಸಿಇಎನ್ ಠಾಣೆಗೆ ದೂರು ನೀಡಿದ್ದಾರೆ.

ವಲ್ಲಬಾಯಿ ರಸ್ತೆ ನಿವಾಸಿಯ ಮೊಬೈಲ್‌ಗೆ ಅಪರಿಚಿತ ವ್ಯಕ್ತಿ 8511406158 ಸಂಖ್ಯೆಯಿಂದ ಅ.17ರಂದು ವಾಟ್ಸಪ್ ಮೆಸೇಜ್ ಮಾಡಿ, ಟೆಲಿಗ್ರಾಂ ಗ್ರೂಪ್‌ಗೆ ಸೇರಿಸಿ, ಅದರಲ್ಲಿ ತಾವು ಹೇಳುವಂತೆ ಇಂತಿಷ್ಟು ಹಣ ಹೂಡಿಕೆ ಮಾಡಿ ಗೂಗಲ್ ರಿವ್ಯೆ ಮಾಡಿದರೆ ಹಣ ಬರುವುದಾಗಿ ಹೇಳಿದ್ದಾರೆ. ಅದರಂತೆ ಮೂರು ಬಾರಿ ರಿವ್ಯೆ ಮಾಡಿದಾಗ ಸಂತ್ರಸ್ತ ವ್ಯಕ್ತಿಯ ಖಾತೆಗೆ ಹೂಡಿಕೆ ಮಾಡಿದ ಹಣಕ್ಕೆ ದುಪ್ಪಟ್ಟು ಹಣ ವರ್ಗಾವಣೆಯಾಗಿದೆ. ಇನ್ನೂ ಹೆಚ್ಚಿನ ಹಣವನ್ನು ಪಡೆಯಲು ಕ್ರಿಪ್ಟೋ ಇನ್ವೆಸ್ಟ್ ಮಾಡುವಂತೆ ತಿಳಿಸಿದ್ದರಿಂದ ತಮ್ಮ ಖಾತೆಯಿಂದ ಅಪರಿಚಿತ ವ್ಯಕ್ತಿ ನೀಡಿದ ಖಾತೆಗಳಿಗೆ ಒಟ್ಟು 1,34,600 ಹಣವನ್ನು ವರ್ಗಾಯಿಸಿಕೊಂಡಿದ್ದಾರೆ. ಆನಂತರ ಯಾವುದೇ ಹಣ ವಾಪಸ್ ಬಾರದಿದ್ದಾಗ ತಾವು ಮೋಸ ಹೋಗಿರುವುದು ತಿಳಿದುಬಂದಿದೆ. ಮೋಸ ಮಾಡಿರುವ ಅಪರಿಚಿತ ವ್ಯಕ್ತಿಯನ್ನು ಪತ್ತೆ ಮಾಡಿ, ಕಾನೂನು ಕ್ರಮ ಜರುಗಿಸಬೇಕೆಂದು ಸಂತ್ರಸ್ತ ವ್ಯಕ್ತಿ ಸಿಇಎನ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಎರಡೂ ಪ್ರತ್ಯೇಕ ಪ್ರಕರಣಗಳನ್ನು ದಾಖಲಿಸಿಕೊಂಡ ಪೊಲೀಸರು ತನಿಖೆ ಆರಂಭಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net