

ಮೈಸೂರು: ಕೃತಕ ಬುದ್ಧಿಮತ್ತೆ ತಂತ್ರಜ್ಞಾನವನ್ನು ಬಳಸಿಕೊಂಡು ಎಸಗುವ ಸೈಬರ್ ಅಪರಾಧಗಳು ಹೆಚ್ಚಾಗಿವೆ. ಆದ್ದರಿಂದ ಸಾರ್ವಜನಿಕರು ಎಚ್ಚರಿಕೆ ವಹಿಸಬೇಕು ಎಂದು ಸಿಐಡಿ ಡಿಎಸ್‌ಪಿ ಲಿಂಗರಾಜ್ ತಿಳಿಸಿದರು.
ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ನಿರ್ವಹಣಾ ಅಭಿವೃದ್ಧಿ ಸಂಸ್ಥೆಯ(ಎಸ್‌ಡಿಎಂ ಐಎಂಡಿ) ವಿದ್ಯಾರ್ಥಿಗಳ ಲೈಫ್ ಕಮಿಟಿ, ರೋಟರಿ ಪಂಚಶೀಲ್ ಸಂಸ್ಥೆಯ ಸಹಯೋಗದಲ್ಲಿ ವಾಸವಿ ಶಾಂತಿಧಾಮದಲ್ಲಿ ಆಯೋಜಿಸಿದ್ದ ಸೈಬರ್ ಬೆದರಿಕೆಗಳ ಬಗ್ಗೆ ಅರಿವು ಕಾರ್ಯಕ್ರಮದಲ್ಲಿ ಮಾತನಾಡಿದರು.
ಇಡೀ ಪ್ರಪಂಚವೇ ಸೈಬರ್ ಅಪರಾಧ ಬಗ್ಗೆ ಯೋಚಿಸುತ್ತಿದೆ. ಸೈಬರ್ ಅಪರಾಧಗಳನ್ನು ಎಸಗುವುದು ಸಂಪೂರ್ಣವಾಗಿ ಬದಲಾಗಿದೆ. ಸೈಬರ್ ಅಪರಾಧಿಗಳು ಹೆಚ್ಚು ಪ್ರತಿಭಾವಂತರು, ಸುಶಿಕ್ಷಿತರು, ತಾಂತ್ರಿಕವಾಗಿ ನಿಪುಣರಾಗಿದ್ದಾರೆ. ಹೊಸ ರೀತಿಯಲ್ಲಿ ಸೈಬರ್ ಅಪರಾಧ ಮಾಡುತ್ತಿದ್ದಾರೆ ಎಂದರು.
ಆಧುನಿಕ ಕೃತಕ ಬುದ್ಧಿಮತ್ತೆ ತಂತ್ರಗಳಿಂದ ಈಗ ಭಾವಚಿತ್ರ, ವಿಡಿಯೋ, ಧ್ವನಿಯನ್ನು ಬದಲಾಯಿಸುವುದು ಸುಲಭವಾಗಿದೆ. ಕುಟುಂಬದ ಸದಸ್ಯರ ಹಾಗೂ ಸ್ನೇಹಿತರ ಧ್ವನಿಯಂತೆ ಮಾತನಾಡಿ ಮೋಸ ಮಾಡುತ್ತಿದ್ದಾರೆ. ಈ ವರ್ಷದಲ್ಲಿ ಆಧುನಿಕ ಬುದ್ಧಿಮತ್ತೆಗೆ ಸಂಬಂಧಿಸಿದ ಅಪರಾಧಗಳು ಹೆಚ್ಚಾಗಿವೆ. ಶೇ.83ರಷ್ಟು ಜನ ಈ ರೀತಿಯ ಅಪರಾಧಗಳಿಂದ ಹಣ ಕಳೆದುಕೊಂಡಿದ್ದಾರೆ ಎಂದರು.
ಸೈಬರ್ ಅಪರಾಧಿಗಳಿಂದ ಮೋಸ ಹೋದರೆ, ಕೂಡಲೇ ಸೈಬರ್ ಪೋಲಿಸ್ ಠಾಣೆಗೆ ಮಾಹಿತಿ ನೀಡಬೇಕು. ಸೈಬರ್ ಅಪರಾಧ ನಡೆದ 15 ನಿಮಿಷಗಳ ಒಳಗೆ ಮಾಹಿತಿಯನ್ನು ನೀಡಿದರೆ, ಕಳೆದುಕೊಂಡ ಹಣವನ್ನು ಹಿಂಪಡೆಯುವ ಅವಕಾಶ ಹೆಚ್ಚಾಗಿರುತ್ತವೆ. ಆ ಸಮಯ ಕಳೆದುಹೋದರೆ, ಹಣ ವಾಪಸ್ ಪಡೆಯುವುದು ತುಂಬ ಕಷ್ಟವಾಗುತ್ತದೆ. ಸೈಬರ್ ಅಪರಾಧಿಗಳಿಂದ ಅಥವಾ ಸುಳ್ಳು ದೂರವಾಣಿ ಕರೆಯಿಂದ ಮೋಸ ಹೋದರೆ ಕೂಡಲೇ ಸೈಬರ್ ಸಹಾಯವಾಣಿ 1930 ಅಥವಾ 112ಕ್ಕೆ ಕರೆ ಮಾಡಿ ದೂರು ನೀಡಬೇಕು ಎಂದು ತಿಳಿಸಿದರು.
ನಿವೃತ್ತ ಡಿಐಜಿ ರಾಜೇಂದ್ರ ಪ್ರಸಾದ್ ಮಾತನಾಡಿ, ಅನಕ್ಷರಸ್ಥರಲ್ಲ, ತಿಳವಳಿಕೆ ಇರುವ ವ್ಯಕ್ತಿಗಳು ಸಹ ಸೈಬರ್ ಅಪರಾಧಿಗಳ ಜಾಲಕ್ಕೆ ಸಿಲುಕುತ್ತಿದ್ದಾರೆ. ಆದ್ದರಿಂದ ಅಂತರ್ಜಾಲದಿಂದ ದೊರೆಯುವ ಸೇವೆಗಳನ್ನು ಕಂಪ್ಯೂಟರ್‌ನಲ್ಲಿ ಅಥವಾ ಸ್ಮಾರ್ಟ್ ಫೋನ್‌ಗಳಲ್ಲಿ ಉಪಯೋಗಿಸುವಾಗ ತುಂಬ ಎಚ್ಚರಿಕೆಯಿಂದ ಇರಬೇಕು. ಹಾಗೆಯೇ ಅನುಮಾನಾಸ್ಪದವಾದ ಲಿಂಕ್‌ಗಳು ಬಂದರೆ, ಕ್ಲಿಕ್ ಮಾಡಬಾರದು ಎಂದು ಎಚ್ಚರಿಸಿದರು.
ಎಸ್‌ಡಿಎಂಐಎಂಡಿ ಸಂಸ್ಥೆಯ ನಿರ್ದೇಶಕ ಡಾ.ಎಸ್.ಎನ್.ಪ್ರಸಾದ್ ಮಾತನಾಡಿ, ಸೈಬರ್ ಅಪರಾಧಗಳನ್ನು ಮಾಡುವವರ ಮಾನಸಿಕ ಸ್ಥಿತಿಯು ಸೈಬರ್ ಅಪರಾಧದಲ್ಲಿ ಮುಖ್ಯ ಪಾತ್ರ ವಹಿಸುತ್ತವೆ. ಬಲಿಯಾಗುವ ವ್ಯಕ್ತಿಯ ಹಣ, ಗೌರವ ಕಳೆದುಕೊಳ್ಳುವ ಪರಿಸ್ಥಿತಿಯನ್ನು ಅಪರಾಧಿಗಳು ಗಮನಿಸುತ್ತಾರೆ. ಬೇಕಾದ ಮಾಹಿತಿ ಕಲೆಹಾಕಿಕೊಂಡು ಪರದೆಯ ಹಿಂದೆ ಇದ್ದು, ಅಪರಾಧವನ್ನು ಎಸಗುತ್ತಿದ್ದಾರೆ. ಈ ಸಂದರ್ಭದಲ್ಲಿ ಜವಾಬ್ದಾರಿಯುತ ನಾಗರಿಕರು ಇತರರಿಗೆ ಸೈಬರ್ ಪ್ರಪಂಚದ ಬಗ್ಗೆ ಹಾಗೂ ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕೆಗಳ ಬಗ್ಗೆ ತಿಳಿಸಬೇಕು ಎಂದರು.
ಉನ್ನತ್ ಭಾರತ್ ಅಭಿಯಾನದ ನೋಡಲ್ ಅಧಿಕಾರಿ ಡಾ.ಎಂ.ವಿ.ಸುನಿಲ್, ರೋಟರಿ ಪಂಚಶೀಲ್ ಸಂಸ್ಥೆಯ ಅಧ್ಯಕ್ಷ ಕಿರಣ್ ರಾಬರ್ಟ್, ವಾಸವಿ ಶಾಂತಿಧಾಮದ ನಿರ್ವಾಹಕ ಮೋಹನ್ ರಾಜು, ಗೌರವ ಕಾರ್ಯದರ್ಶಿ ಬಿ.ವಿ.ಶ್ರೀನಿವಾಸ್ ಗುಪ್ತ ಇನ್ನಿತರರಿದ್ದರು.