

ಬಾಗಲಕೋಟೆ: ಆಧುನಿಕತೆ ಮುಂದುವರೆದಂತೆ ತಂತ್ರಜ್ಞಾನ ಬಳಕೆ ಹೆಚ್ಚಾಗಿದೆ. ಅಷ್ಟೇ ಪ್ರಮಾಣದಲ್ಲಿ ಸೈಬರ ಅಪರಾಧಗಳು ಹೆಚ್ಚುತ್ತಿರುವುದು ಖೇದಕರ ಸಂಗತಿ. ಆನ್‌ಲೈನ ವ್ಯವಸ್ಥೆ ಬಗ್ಗೆ ಎಚ್ಚರವಿರಬೇಕು ಎಂದು ಬಾಗಲಕೋಟೆ ಸಿಇಎನ್ ಕ್ರೈಂ ಪೊಲೀಸ್ ಠಾಣೆ ಡಿವೈಎಸ್‌ಪಿ ಎಂ.ಕೆ.ಗಂಗಲ್ ಹೇಳಿದರು.
ಇಲ್ಲಿನ ಸಿಮಿಕೇರಿ ಸಮೀಪದ ವಾಗ್ದಾದೇವಿ ಪದವಿ ಪೂರ್ವ ಕಾಲೇಜಿನಲ್ಲಿ ಈಚೆಗೆ ಹಮ್ಮಿಕೊಂಡಿದ್ದ ಸೈಬರ ಅಪರಾಧಗಳ ಕುರಿತು ಜಾಗೃತಿ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಅವರು ಮಾತನಾಡಿದರು.
ನಿತ್ಯ ಬಳಸುವ ನಿಮ್ಮ ಕೈಯಲ್ಲಿರುವ ಮೊಬೈಲನಿಂದಲೇ ಸೈಬರ ಅಪರಾಧ ಆಗುತ್ತಿದೆ. ಆನ್‌ಲೈನ ಗೇಮ್, ವಸ್ತುಗಳ ಖರೀದಿ, ಪಾಸ್‌ವರ್ಡ ಕೇಳುವಂತಹದ್ದು, ಬ್ಯಾಂಕ್, ಪೊಲೀಸ್ ಹೆಸರಿನಲ್ಲಿ ನಂಬಲಾರ್ಹದ ಕರೆಗಳು ಬರುತ್ತವೆ. ಅವುಗಳ ಬಗ್ಗೆ ತೀವ್ರ ಜಾಗೃತರಾಗಬೇಕು. ತಮಗೆ ಸಂಬಂಧವಿರದ ಪೋಸ್ಟ್, ಮೊಬೈಲ ಕರೆ ಸ್ವೀಕರಿಸಬಾರದು ಎಂದರು.
ಪೆಟ್ರೋಲ್ ಬಂಕ್, ಗ್ಯಾಸ್ ಎಜೆನ್ಸಿ, ಮಾದಕ ವಸ್ತುಗಳ ಸರಬರಾಜು, ಉದ್ಯೋಗ ನೀಡುವ ಆಫರ್, ವಾಹನ ಖರೀದಿ ಸೇರಿದಂತೆ ನಾನಾ ಆಸೆ, ಆಮೇಷಗಳು ಬರುತ್ತವೆ. ಆ್ಯಪ್, ಫೆಸ್‌ಬುಕ್, ವಾಟ್ಸಪ್ ಮೂಲಕವು ತಮ್ಮನ್ನು ಸಂಪರ್ಕ ಮಾಡುತ್ತಾರೆ. ಯಾವುದೇ ಕಾರಣಕ್ಕೂ ಸುಳ್ಳುಗಳಿಗೆ ಮಾರು ಹೋಗಬಾರದು. ಹಾಗೇ ಸಂದರ್ಭ ಬಂದಲ್ಲಿ ಕೂಡಲೇ ಸಮೀಪದ ಪೊಲೀಸ್ ಠಾಣೆಗೆ ದೂರು ನೀಡಬೇಕು. ಯಾವುದೇ ಕಾರಣಕ್ಕೂ ಬೆದರಿಕೆಗಳಿಗೆ ಜಗ್ಗಬಾರದು. ಹಣ ಹಾಕಬಾರದು. ಕೂಡಲೇ ೧೯೩೦ ಸಹಾಯವಾಣಿಗೆ ಕರೆ ಮಾಡಬೇಕು ಎಂದು ತಿಳಿಸಿದರು.
ಸಿಪಿಐ ಎಂ.ನಾಗರೆಡ್ಡಿ, ಪಿಎಸ್‌ಐ ನಿತಿನ್‌ಕುಮಾರ, ವಾಗ್ದೇವಿ ಪದವಿ ಪೂರ್ವ ಕಾಲೇಜಿನ ನಿರ್ದೇಶಕ ಎಸ್.ಎಸ್.ಅಂಗಡಿ, ಪ್ರಾಚಾರ್ಯ ಬಾಲಾಕೃಷ್ಣ ನಾಯಕ, ಉಪನ್ಯಾಸಕ ಎಲ್.ಕೆ.ಕಾಮಾ ಇತರರು ಇದ್ದರು.