ಸೈನ್ಯದ ಅನುಭವವೇ ರೋಚಕ

22 vikram 10
Published on

ವಿಜಯವಾಣಿ ಸುದ್ದಿಜಾಲ ಧಾರವಾಡ
ಭಾರತೀಯ ಸೈನ್ಯದಲ್ಲಿನ ಅನುಭವಗಳೇ ಒಂದು ರೀತಿ ರೋಮಾಂಚನ. ಸೈನ್ಯದ ಚಟುವಟಿಕೆಗಳನ್ನು ಕೇಳಲು ಎಲ್ಲರಲ್ಲೂ ಕುತೂಹಲ ಸಮಾನ್ಯ. ಇಂತಹ ಅನುಭವಗಳಲ್ಲಿ ಅದರೂ ಕಾರ್ಗಿಕ್ ಯದ್ಧದ ಸನ್ನಿವೇಶವನ್ನು ಸೈನಿಕರು ಎಳೆಎಳೆಯಾಗಿ ಬಿಚ್ಚಿಡುತ್ತಿದ್ದಂತೆ ಸಭಿಕರು ಕರತಾಡನದ ಮೂಲಕ ಯೋಧರಿಗೆ ಸಲಾಂ ಹೇಳಿದರು.
ಧಾರವಾಡದ ಜೆಎಸ್‌ಎಸ್ ಕಾಲೇಜಿನ ಸನ್ನಿಧಿ ಕಲಾಕ್ಷೇತ್ರದಲ್ಲಿ ಜನತಾ ಶಿಕ್ಷಣ ಸಮಿತಿ, ಕರ್ನಾಟಕ ಸೈನಿಕ ಕಲ್ಯಾಣ ಸಮಿತಿ, ಶ್ರೀ ಶಿವಕೃಪಾ ಟ್ರಸ್ಟ್ ಹಾಗೂ ಗ್ರಾಮ ವಿಕಾಸ ಸಂಸ್ಥೆ ಸಹಯೋಗದಲ್ಲಿ ಭಾನುವಾರ ಆಯೋಜಿಸಿದ್ದ ‘ಪರಮ ವೀರ ವಂದನ’ ಕಾರ್ಯಕ್ರಮದಲ್ಲಿ ಕಂಡು ಬಂದ ದೃಶ್ಯವಿದು.
ಕ್ಯಾಪ್ಟನ್ ನವೀನ್ ನಾಗಪ್ಪ ಮಾತನಾಡಿ, ಭಾರತೀಯ ಸೇನೆಗೆ ಆಯ್ಕೆಯಾಗುವ ಪ್ರತಿಯೊಬ್ಬ ಯೋಧ ಗಡಿಯೊಳಗೆ ನುಗ್ಗುವ ಶತ್ರುಗಳನ್ನು ಹೊಡೆದುರುಳಿಸಿ ಭಾರತಮಾತೆ ಸೇವೆ ಮಾಡುವ ಅವಕಾಶ ನಿರೀಕ್ಷಿಸುತ್ತಾನೆ. ಸೈನ್ಯಕ್ಕೆ ಸೇರಿ 6 ತಿಂಗಳಲ್ಲೇ ಕಾರ್ಗಿಲ್ ಯುದ್ಧದಲ್ಲಿ ಪಾಲ್ಗೊಳ್ಳುವ ಅವಕಾಶ ಸಿಕ್ಕಿತ್ತು. ಹಿರಿಯ ಸೇನಾಧಿಕಾರಿ ಜೋಶಿ ಅವರಿಗೆ ಕಾಡಿ ಬೇಡಿ 120 ಯೋಧರ ತಂಡದ ನಾಯಕತ್ವ ವಹಿಸಿಕೊಳ್ಳುವ ಅವಕಾಶ ಪಡೆದುಕೊಂಡೆ. ಅನುಭವದ ಕೊರತೆಯಿದ್ದರೂ ಉತ್ಸಾಹಕ್ಕೆ ಕೊರತೆ ಇರಲಿಲ್ಲ. 48 ಗಂಟೆಗಳ ಕಾಲ ಉಪವಾಸವಿದ್ದರೂ ದೇಶದ ಪರ್ವತಗಳನ್ನು ವಶಪಡಿಸಿಕೊಂಡಿದ್ದ ಪಾಕಿಸ್ತಾನದ ಬಂಕರ್‌ಗಳನ್ನು ಧ್ವಂಸ ಮಾಡುತ್ತ ಹಿಮದ ಬೆಟ್ಟಗಳನ್ನೇರುತ್ತ ನಮಗೆ ನೀಡಿದ ಗುರಿಯತ್ತ ಸಾಗುವುದನ್ನು ಸಾಮಾನ್ಯರು ಊಹಿಸಿಕೊಳ್ಳಲು ಸಾಧ್ಯವಿಲ್ಲ ಎಂದು ತಮ್ಮ ಅನುಭವ ಹಂಚಿಕೊಂಡರು.
ಗುರಿ ಮುಟ್ಟುವ ಹಂತದಲ್ಲಿ ಪಾಕ್ ಸೈನಿಕರು ಎಸೆದ ಹ್ಯಾಂಡ್ ಗ್ರಾನೈಡ್‌ನಿಂದ ನನ್ನ ಎರಡೂ ಕಾಲುಗಳು ಛಿದ್ರವಾದ ಕಾರಣ ತೆವಳುತ್ತ ಸುರಕ್ಷಿತ ತಾಣಕ್ಕೆ ಬರಬೇಕಾಯಿತು. ಸಹ ಸೈನಿಕರ ನೆರವಿನಿಂದ ಸೇನಾನೆಲೆಗೆ ಬಂದೆ. ಮುಂದೆ ಕ್ಯಾಪ್ಟನ್ ವಿಜಯ ಬಾತ್ರಾ ತಂಡದ ನಾಯಕತ್ವ ವಹಿಸಿಕೊಂಡರು. 2 ದಿನಗಳ ನಂತರ ಆಸ್ಪತ್ರೆಗೆ ದಾಖಲಿಸಲು ಹೆಲಿಕ್ಯಾಪ್ಟರ್‌ನಲ್ಲಿ ಕಾಶ್ಮೀರಕ್ಕೆ ಕರೆದೊಯ್ಯುವಾಗ ನನಗೆ ನೀಡಿದ ಪರ್ವತದ ತುದಿಯಲ್ಲಿ ತ್ರಿವರ್ಣ ಧ್ವಜ ಹಾರಾಡುತ್ತಿತ್ತು. ಆದರೆ ಈ ಹೋರಾಟದಲ್ಲಿ ನಮ್ಮ ವಿಜಯ ಬಾತ್ರಾ ಹುತಾತ್ಮರಾದರು ಎಂದು ಹೇಳುತ್ತಿದ್ದಂತೆ ಸಭಿಕರನ ಕಣ್ಣು ತೇವದಿಂದ ಕೂಡಿದ್ದವು.
ಅಂಗವಿಕಲತೆ ಕಾರಣ ನಿವೃತ್ತಿ ನೀಡಲಾಯಿತು. ಜೀವನಪೂರ್ತಿ ಊರುಗೋಲಿನ ಸಹಾಯದಿಂದ ಇರಬೇಕು ಎಂದು ಹೇಳಿದ್ದರು. ಆದರೆ ಎಷ್ಟೇ ಕಷ್ಟವಾದರೂ ಸಾಮಾನ್ಯರಂತೆ ಬದುಕಬೇಕೆಂದು ದೃಢಸಂಕಲ್ಪ ಮಾಡಿ ಫಿಸಿಯೋಥೇರಪಿ, ವ್ಯಾಯಾಮ ಮಾಡುತ್ತ ಸಹಜವಾಗಿ ಎಲ್ಲರಂತೆ ಓಡಾಡುತ್ತಿದ್ದೇನೆ ಎಂದರು.
ಜೆಎಸ್‌ಎಸ್ ಸಂಸ್ಥೆ ಕಾರ್ಯದರ್ಶಿ ಅಜಿತಪ್ರಸಾದ, ಗುಣವಂತಸಿಂಗ್ ಕೊಠಾರಿ ಮಾತನಾಡಿದರು. ಪರಮವೀರಚಕ್ರ ಪ್ರಶಸ್ತಿಗೆ ಭಾಜನರಾದ ಯೋಧರಿಗೆ ಗೌರವ ಸಲ್ಲಿಸಲಾಯಿತು. ಸಂಘಟಕರಾದ ಮಹಾವೀರ ಉಪಾಧ್ಯೆ, ವಿನಾಯಕ ಜೋಶಿ, ಚಂದ್ರಶೇಖರ ಅಮೀನಗಡ, ಶ್ರೀನಿವಾಸ ನಾಡಗೀರ, ಜಗದೀಶ ಶೇಖರ ನಾಯಿಕ, ಅಮರನಾಥ ಟಿಕಾರೆ, ಶಿವಯೋಗಿ ಅಮೀನಗಡ, ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net