

ಬೇಲೂರು: ಪಹಲ್ಗಾಮ್ ದಾಳಿಗೆ ಪ್ರತಿಯಾಗಿ ಭಾರತವು ಆಪರೇಷನ್ ಸಿಂಧೂರ ಮೂಲಕ ಪ್ರತ್ಯುತ್ತರ ನೀಡಿದ ನಮ್ಮ ಹೆಮ್ಮೆಯ ಸೈನಿಕರಿಗೆ ಆತ್ಮಸ್ಥೈರ್ಯ ತುಂಬುವುದಕ್ಕಾಗಿ ಶ್ರೀಚನ್ನಕೇಶವಸ್ವಾಮಿ ದೇವಸ್ಥಾನದ ಮುಂಭಾಗದಿಂದ ಬಸವೇಶ್ವರ ವೃತ್ತದವರೆಗೂ ಮಂಗಳವಾರ ಶಾಸಕ ಎಚ್.ಕೆ.ಸುರೇಶ್ ಅವರ ನೇತೃತ್ವದಲ್ಲಿ ರಾಷ್ಟ್ರ ರಕ್ಷಣೆಗಾಗಿ ನಾವೆಲ್ಲರೂ ಎಂಬ ಘೋಷವಾಕ್ಯದಡಿ ತಿರಂಗಾ ಯಾತ್ರೆ ಮೂಲಕ ಬಸವೇಶ್ವರ ವೃತ್ತದಲ್ಲಿ ಪ್ರತಿಭಟಿಸಲಾಯಿತು.
ಶಾಸಕ ಎಚ್.ಕೆ.ಸುರೇಶ್ ಮಾತನಾಡಿ, ಪಹಲ್ಗಾಮ್‌ನಲ್ಲಿ ಉಗ್ರರು ದಾಳಿಗೆ 28 ಪ್ರವಾಸಿಗರನ್ನು ಧರ್ಮದ ಹೆಸರಿನಲ್ಲಿ ಗುಂಡಿಕ್ಕಿ ಕೊಂದಿದ್ದರು. ಇದಕ್ಕೆ ಪ್ರತಿಯಾಗಿ ನಮ್ಮ ಸೈನಿಕರು ಆಪರೇಷನ್ ಸಿಂಧೂರ ಮೂಲಕ ಪಾಕಿಸ್ತಾನದ ಮೇಲೆ ದಾಳಿ ನಡೆಸಿ ಉಗ್ರರ ನೆಲೆಗಳನ್ನು ಧ್ವಂಸಗೊಳಿಸಿ ತಕ್ಕ ಉತ್ತರ ನೀಡಿದ್ದಾರೆ. ಹೆಣ್ಣು ಮಕ್ಕಳ ಹಣೆಯ ಮೇಲಿನ ಸಿಂಧೂರ ಹಿಂದು ಸಂಸ್ಕೃತಿಯಲ್ಲಿ ಪ್ರಮುಖವಾಗಿದೆ. ಆದ್ದರಿಂದಲೇ ಪ್ರಧಾನಿ ನರೇಂದ್ರ ಮೋದಿ ಅವರು ನಮ್ಮ ಹೆಣ್ಣುಮಕ್ಕಳ ಸಿಂಧೂರ ಅಳಿಸಿದ್ದಕ್ಕೆ ಪ್ರತಿಯಾಗಿ ಪ್ರತಿಕಾರ ತೀರಿಸಿದ್ದಾರೆ.
ನಮ್ಮ ದೇಶದಲ್ಲಿ ಶಾಂತಿಗೆ ಮೊದಲು ಪ್ರಾಮುಖ್ಯ ಕೊಡುತ್ತೇವೆ. ಆದರೆ ನಮ್ಮ ತಂಟೆಗೆ ಬಂದರೆ ಮಾತ್ರ ಯಾರನ್ನು ಸುಮ್ಮನೆ ಬಿಡುವುದಿಲ್ಲ ಎಂದು ಎಚ್ಚರಿಕೆ ನೀಡಿದ ಅವರು, ಈ ಮೂಲಕ ನಮ್ಮ ಸೈನಿಕರಿಗೆ ಸ್ಫೂರ್ತಿ ತುಂಬುವುದಲ್ಲದೆ ದೇವರ ಆಶೀರ್ವಾದ ಸದಾ ಇರಲಿ ಎಂದು ತಾಲೂಕಿನ ಜನರು ಎಲ್ಲ ದೇವಾಲಯಗಳಲ್ಲೂ ವಿಶೇಷ ಪೂಜೆ ಸಲ್ಲಿಸಿದ್ದು, ನಮ್ಮ ಸೈನಿಕರೊಂದಿಗೆ ಇರುವುದಲ್ಲದೆ, ಅವರ ಕುಟುಂಬ ಸದಸ್ಯರ ಜತೆ ನಾವಿದ್ದೇವೆ ಎಂಬುದನ್ನು ತಿಳಿಸಲು ಪಕ್ಷಾತೀತವಾಗಿ ಶಾಂತಿಯುತವಾಗಿ ಪ್ರತಿಭಟಿಸಿ ಮೋದಿಯವರಿಗೆ ಬೆಂಬಲ ಘೋಷಿಸಿದ್ದೇವೆ ಎಂದರು.
ಬಿಜೆಪಿ ತಾಲೂಕು ಅಧ್ಯಕ್ಷ ಕೌರಿ ಸಂಜು ಮಾತನಾಡಿ, ಭಾರತದ ಮಕ್ಕಳನ್ನು ಕೆಣಕಿದರೆ ಏನಾಗುತ್ತದೆ ಎಂದು ಪಾಪಿ ಪಾಕಿಸ್ತಾನಕ್ಕೆ ನಮ್ಮ ಸೈನಿಕರು ತಕ್ಕ ಉತ್ತರ ನೀಡಿದ್ದಾರೆ. ಹೇಡಿಗಳಂತೆ ಬಂದು ಪ್ರವಾಸಿಗರನ್ನು ಹತ್ಯೆ ಮಾಡಿ ಆ ಹೆಣ್ಣುಮಕ್ಕಳ ಸಿಂಧೂರ ಅಳಿಸಿದ್ದಕ್ಕೆ ಪ್ರತಿಯಾಗಿ ನಮ್ಮ ಪ್ರಧಾನಿಯವರು ಆಪರೇಷನ್ ಸಿಂಧೂರ ಹೆಸರಲ್ಲಿ ತಕ್ಕ ಪಾಠ ಕಲಿಸಿದ್ದಾರೆ. ಮುಂದಿನ ದಿನಗಳಲ್ಲಿ ಇದೇ ರೀತಿ ನರಿ ಬುದ್ಧಿ ತೋರಿಸಿದರೆ ವಿಶ್ವದ ಭೂಪಟದಲ್ಲಿ ಪಾಕಿಸ್ತಾನದ ಹೆಸರಿಲ್ಲದಂತೆ ನಮ್ಮ ಸೈನಿಕರು ಅಳಿಸಿ ಹಾಕುತ್ತಾರೆ ಎಂದು ಎಚ್ಚರಿಸಿದರು.
ಬಿಜೆಪಿ ಮಂಡಲದ ಮಾಜಿ ಅಧ್ಯಕ್ಷ ಜಿ.ಕೆ.ಕುಮಾರ್, ನಗರಾಧ್ಯಕ್ಷ ವಿನಯ್, ವೀಶ್, ಬಜರಂಗದಳದ ಸಂಚಾಲಕ ನಾಗೇಶ್, ಕೋಟೆ ಶ್ರೀನಿವಾಸ್, ವೆಂಕಟೇಶ್, ಮಂಜುನಾಥ್, ರಾಘ, ಭರತ್, ಪೂರ್ಣೇಶ್ ಮತ್ತಿತರರು ಹಾಜರಿದ್ದರು.