

ಕಾನಹೊಸಹಳ್ಳಿ: ಸೈನಿಕರು ಗಡಿಯಲ್ಲಿ ಹಗಲಿರುಳು ದೇಶ ಕಾಯುತ್ತಿರುವುದರಿಂದ ನಾವು ನೆಮ್ಮದಿಯಿಂದ ಇರಲು ಸಾಧ್ಯವಾಗಿದೆ. ಸೈನಿಕರ ಪರಿಶ್ರಮ ಮತ್ತು ಅತ್ಮಸ್ಥೈರ್ಯ ಮತ್ತು ಮನೋಬಲ ಈ ದೇಶದ ದೊಡ್ಡ ಶಕ್ತಿಯಾಗಿದೆ ಎಂದು ಕಾನಾಮಡುಗು ದಾಸೋಹ ಮಠದ ಧರ್ಮಧಿಕಾರಿ ಐಮಡಿ ಶರಣಾರ್ಯರು ಹೇಳಿದರು.
ಕಾನಮಡುಗಿನ ಶರಣಬಸವೇಶ್ವರ ಶಿಕ್ಷಕರ ತರಬೇತಿ ಕೇಂದ್ರದಲ್ಲಿ 1999-2000 ಸಾಲಿನ ಪಿಯುಸಿ ವಿದ್ಯಾರ್ಥಿಗಳ ಸ್ನೇಹಸಾಗರ ಬಳಗದಿಂದ ಆಯೋಜಿಸಿದ್ದ ನಿವೃತ್ತ ಯೋಧ ಶರಣೇಶ್‌ಯಾದವ್ ಸನ್ಮಾನ ಸಮಾರಂಭದಲ್ಲಿ ಮಂಗಳವಾರ ಮಾತನಾಡಿದರು. ಕುಟುಂಬದಿಂದ ದೂರ ಉಳಿದು ದೇಶ ಸೇವೆಗಾಗಿ ಸರ್ವಸ್ವವನ್ನು ತ್ಯಾಗ ಮಾಡುವ ಪ್ರತಿಯೊಬ್ಬ ಯೋಧನ ಸೇವೆ ಸ್ಮರಣಿಯವಾಗಿದೆ. ಆಪರೇಷನ್ ಸಿಂಧೂರ ಮೂಲಕ ಜಗತ್ತಿಗೆ ದೇಶದ ಸೈನ್ಯ ಶಕ್ತಿ ಗೊತ್ತಾಗಿದ್ದು, ಪಾಕಿಸ್ತಾನದಂತಹ ಇಬ್ಬಗೆ ನೀತಿಯ ದೇಶವನ್ನು ಎದುರಿಸುವಂತಹ ಸೈನಿಕರ ಹೋರಾಟ ನಮಗೆ ಸ್ಫೂರ್ತಿಯಾಗಿದೆ ಎಂದರು.
ಪ್ರಾಚಾರ್ಯ ನಾಗಲಿಂಗಪ್ಪ ಮಾತನಾಡಿ, ಸೈನ್ಯಕ್ಕೆ ಸೇರುವುದು ಪುಣ್ಯದ ಕೆಲಸವಾಗಿದ್ದು, ಯುವಕರು ಸೇನೆಗೆ ಸೇರಲು ಆಸಕ್ತಿ ವಹಿಸಬೇಕು. 10ನೇತರಗತಿಯಿಂದ ಡಿಪ್ಲೊಮಾ, ಪದವಿ ಹಂತದ ವಿದ್ಯಾರ್ಥಿಗಳಿಗೆ ಸೇನೆಗೆ ಪೂರಕವಾದ ಪರೀಕ್ಷೆ ಬರೆಯಲು ಅವಕಾಶ ಇರುತ್ತದೆ. ಈ ದಿಸೆಯಲ್ಲಿ ಸೇನೆ ಸೇರುವಂತೆ ಮಕ್ಕಳನ್ನು ಪಾಲಕರು ಪ್ರೋತ್ಸಾಹಿಸಬೇಕೆಂದರು.
ಸ್ನೇಹಬಳಗದ ಶರಣಬಸಪ್ಪ, ಬಸೆಟಪ್ಪ, ಮಂಜುಳಾ, ಪರಿಮಳಾ, ಆಶಾ, ನೂರ್ ಜಾನ್, ಗಿರಿಜಮ್ಮ, ಗೀತಾ, ಫಕೀರಪ್ಪ, ಬಸವಕುಮಾರ್, ತಿಪ್ಪೇರುದ್ರಪ್ಪ, ಯಾಹಿಯಾ, ವಿಜಯಕುಮಾರ್, ಮಂಜು, ಓಮೇಶ, ಸುರೇಶ್, ಸಂತೋಷ್, ಪ್ರತಾಪ್‌ಸಿಂಹ, ಹೇಮಗಿರಿ ಇದ್ದರು.