ಸೈನಿಕರ ಸಮರ್ಪಣಾಭಾವಕ್ಕಾಗಿ ಅಮೃತ ವನ

Minister
Published on

ಚಿತ್ರದುರ್ಗ: ಭಾರತ ಅಮೃತ ಮಹೋತ್ಸವದ ಅಂಗವಾಗಿ ಸ್ವಾತಂತ್ರ್ಯ ಹೋರಾಟಗಾರರು, ಸೇನಾನಿಗಳ ಸ್ಮರಣೆಗಾಗಿ ಕೇಂದ್ರ ಸರ್ಕಾರದಿಂದ ದೆಹಲಿಯಲ್ಲಿ ‘ಅಮೃತ ವನ’ ನಿರ್ಮಿಸಲಾಗುತ್ತಿದೆ ಎಂದು ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ರಾಜ್ಯ ಸಚಿವ ಎ.ನಾರಾಯಣಸ್ವಾಮಿ ಹೇಳಿದರು.


ಜೆಸಿಆರ್ ಬಡಾವಣೆಯ ಗಣಪತಿ ದೇಗುಲದಲ್ಲಿ ಸೋಮವಾರ ‘ನನ್ನ ಮಣ್ಣು ನನ್ನ ದೇಶ’ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿ, ರಾಷ್ಟ್ರಭಕ್ತಿ ಮೂಲೆಮೂಲೆಗೆ ಪಸರಿಸುವ ವಿಶೇಷ ಕಾರ್ಯಕ್ರಮವಾಗಿದೆ ಎಂದರು.


ದೇಶದ ಪ್ರತಿ ಮೂಲೆಯ ಭೂ ತಾಯಿ ಮಣ್ಣನ್ನು ಅತ್ಯಂತ ಗೌರವದಿಂದ ದೆಹಲಿಗೆ ಕೊಂಡೊಯ್ದು, ಆ ಮಣ್ಣಿನ ರಾಶಿಯಿಂದ ವೀರ ಯೋಧರ ಅಮೃತ ವನ ನಿರ್ಮಿಸಿ ವಿಶ್ವಕ್ಕೆ ಸಮರ್ಪಿಸುವ ಕಾರ್ಯಕ್ರಮ ಇದಾಗಿದೆ ಎಂದು ಹೇಳಿದರು.


ಪ್ರಧಾನಿ ನರೇಂದ್ರ ಮೋದಿ ಅವರ ಅಪೇಕ್ಷೆಯಂತೆ ಅಭಿಯಾನದ ಮೂಲಕ ಯುವ ಪೀಳಿಗೆಗೆ ಭಾರತದ ಭವ್ಯ ಪರಂಪರೆ, ಮಣ್ಣಿನ ಸತ್ವದ ಕುರಿತು ಅರಿವು ಮೂಡಿಸುವುದು ಮುಖ್ಯ ಉದ್ದೇಶ. ಇದರ ಜತೆಗೆ ದೇಶಕ್ಕಾಗಿ ತ್ಯಾಗ ಮಾಡಿದ ಸ್ವಾತಂತ್ರೃ ಹೋರಾಟಗಾರರು, ಸೈನಿಕರನ್ನು ಪ್ರತಿಯೊಬ್ಬ ಪ್ರಜೆ ಸ್ಮರಿಸಬೇಕು ಎಂದು ಹೇಳಿದರು.


ದೇಶದ ರಕ್ಷಣೆಯಲ್ಲಿ ಪಾಲ್ಗೊಂಡ ಸೈನಿಕರು, ಪೊಲೀಸರು, ಪ್ಯಾರಾ ಮಿಲಿಟರಿ ಸೇರಿ ಇಡೀ ಜಿಲ್ಲೆಯ ಸೇನಾನಿಗಳ ಮನೆಗಳಿಗೆ ಭೇಟಿ ನೀಡಿ, ಅವರ ಅನುಭವ ಹಂಚಿಕೊಳ್ಳಲಾಗುವುದು. ರಾಷ್ಟ್ರಪ್ರೇಮವನ್ನು ಮೈಗೂಡಿಸಿಕೊಳ್ಳಲು ಯುವಸಮೂಹ ತಲುಪುವ ನಿಟ್ಟಿನಲ್ಲಿ ಇದೊಂದು ವಿಭಿನ್ನ ಕಾರ್ಯಕ್ರಮವಾಗಲಿದೆ ಎಂದು ಅಭಿಪ್ರಾಯಪಟ್ಟರು.


ಎಂಎಲ್ಸಿ ಕೆ.ಎಸ್.ನವೀನ್ ಮಾತನಾಡಿ, ಕೋಟೆನಾಡಿನ ಪವಿತ್ರ ಮಣ್ಣನ್ನು ಜಿಲ್ಲೆಯ ಹಳ್ಳಿ-ಹಳ್ಳಿಗಳಿಂದ, ದೇಗುಲಗಳಿಂದ ಸಂಗ್ರಹಿಸಲಾಗುವುದು. 45 ದಿನ ಜಿಲ್ಲೆಯಲ್ಲಿ ನಡೆಯಲಿದೆ. ಅಕ್ಟೋಬರ್ 3ನೇ ವಾರದಲ್ಲಿ ಬೆಂಗಳೂರಿಗೆ ತಲುಪಿಸಲಾಗುವುದು. 25ಕ್ಕೆ ನವದೆಹಲಿಗೆ ತಲುಪಲಿದ್ದು, ಪ್ರಧಾನಿ ಅವರು 30ರಂದು ಕರ್ತವ್ಯ ಪಥದಲ್ಲಿ ಅಮೃತ ವನವನ್ನು ದೇಶಕ್ಕೆ ಸಮರ್ಪಿಸಲಿದ್ದಾರೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net