

ಮಂಡ್ಯ: ಕಾರ್ಗಿಲ್ ವಿಜಯೋತ್ಸವ ಆಚರಿಸುತ್ತಿರುವ ನಮಗೆ ಸೈನಿಕರ ಬಲಿದಾನ ಅರ್ಥ ಮಾಡಿಕೊಳ್ಳಬೇಕಿದೆ. ದೇಶ ರಕ್ಷಣೆಗೆಂದು ಯುವ ಸಮೂಹವು ಸೇನೆಗೆ ಸೇರ್ಪಡೆ ಆಗುವ ಮನೋಭಾವ ಹೆಚ್ಚಿಸಿಕೊಳ್ಳಬೇಕೆಂದು ಮಾಜಿ ಸೈನಿಕ ಸುಬೇದಾರ್ ಮೇಜರ್ ಉದಯ್ ಕುಮಾರ್ ಸಲಹೆ ನೀಡಿದರು.
ತಾಲೂಕಿನ ಬೇಲೂರು ಸರ್ಕಾರಿ ಪ್ರೌಢಶಾಲೆಯಲ್ಲಿ ಕೇಂದ್ರ ಸರ್ಕಾರದ ಯುವ ಕಾರ್ಯ ಹಾಗೂ ಕ್ರೀಡಾ ಸಚಿವಾಲಯ, ಮೇರಾ ಯುವ ಭಾರತ್(ಮಂಡ್ಯ ಘಟಕ), ಅನನ್ಯ ಆರ್ಟ್ಸ್ ಸಂಸ್ಥೆ, ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್(ಅಕ್ಕಮಹಾದೇವಿ ಗೈಡ್) ಸಹಯೋಗದಲ್ಲಿ ಸೋಮವಾರ ಆಯೋಜಿಸಿದ್ದ ಕಾರ್ಗಿಲ್ ವಿಜಯ್ ದಿವಸ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಪಾಕಿಸ್ತಾನದ ಕುತಂತ್ರಕ್ಕೆ ನಮ್ಮ ನೂರಾರು ಸೈನಿಕರ ಬಲಿದಾನವು ಕಾರ್ಗಿಲ್ ಯುದ್ಧದಲ್ಲಿ ನಡೆದು ಹೋಯಿತು. ಆದರೆ ನಮ್ಮ ಸೈನಿಕರು ಎಲ್ಲಿಯೂ ಎದೆಗುಂದದೆ ಕಾರ್ಗಿಲ್ ಪ್ರದೇಶವನ್ನು ಮತ್ತೆ ಕೈವಶ ಮಾಡಿಕೊಳ್ಳುವಲ್ಲಿ ಯಶಸ್ವಿಯಾದರು. ನಮ್ಮ ಧ್ಯೇಯ ತಾಯ್ನಡಿನ ರಕ್ಷಣೆ ನಮ್ಮ ಜವಾಬ್ದಾರಿ ಎನ್ನುವುದೊಂದೇ ಆಗಿತ್ತು. ಆ ಯುದ್ಧ ಸಮಯದಲ್ಲಿ 18 ತಿಂಗಳ ಕಾಲ ನಾವು ರಜೆಯನ್ನೇ ಪಡೆಯದೇ ಗಡಿ ಕಾಯುತ್ತಿದ್ದೆವು ಎಂದು ಹೇಳಿದರು.
ಅನನ್ಯ ಆರ್ಟ್ಸ್ ಸಂಸ್ಥೆ ಅಧ್ಯಕ್ಷೆ ಬಿ.ಎಸ್.ಅನುಪಮಾ ಮಾತನಾಡಿ, ದೇಶ ಪ್ರೇಮ ಅಂತ ಬಂದಾಗ ನಾವು ಕಾರ್ಗಿಲ್ ವಿಜಯ ದಿವಸವನ್ನು ನಾವು ಮರೆಯುವುದಕ್ಕೆ ಆಗಲ್ಲ. ಸೈನಿಕರೆಂದರೆ ನಮಗೆ ಗೌರವ ಭಾವನೆ ಮೂಡುತ್ತದೆ ಎಂದರು.
ಮುಖ್ಯ ಶಿಕ್ಷಕಿ ಕೆ.ಎಂ.ಪವಿತ್ರಾ, ಎಸ್‌ಡಿಎಂಸಿ ಅಧ್ಯಕ್ಷ ಕೃಷ್ಣ, ಮಾಜಿ ಅಧ್ಯಕ್ಷ ಬಿ.ಕೆ.ಉಮೇಶ್, ಶ್ರೀನಿಧಿ ಸೌಹಾರ್ದ ಸಹಕಾರ ಬ್ಯಾಂಕ್‌ನ ಕಿರಿಯ ಸಹಾಯಕಿ ಎಂ.ಪಿ.ಪೂಜಾ, ದೈಹಿಕ ಶಿಕ್ಷಣ ಶಿಕ್ಷಕಿ ಉಷಾರಾಣಿ, ಜಿಲ್ಲಾ ಯುವ ಅಧಿಕಾರಿ ಪಿ.ಅಖಿಲ್, ಕಾರ್ಯಕ್ರಮ ಸಂಯೋಜಕ ಹರ್ಷಾ ಇತರರು ಇದ್ದರು.