ಸೈನಿಕರ ತ್ಯಾಗ ನಮಗೆಲ್ಲ ಸ್ಫೂರ್ತಿ: ಚೈತನ್ಯಾನಂದ ಸ್ವಾಮೀಜಿ ಅಭಿಮತ

2607-Kpl-Ravi-2
Published on

ಕೊಪ್ಪಳ: ನಮ್ಮ ಸೈನಿಕರ ತ್ಯಾಗ, ಬಲಿದಾನ ನಮಗೆಲ್ಲ ಸ್ಫೂರ್ತಿ ಎಂದು ರಾಮಕೃಷ್ಣ ಆಶ್ರಮದ ಶ್ರೀ ಚೈತನ್ಯಾನಂದ ಸ್ವಾಮೀಜಿ ಹೇಳಿದರು.

ನಗರದ ಕೆಎಸ್ ಆಸ್ಪತ್ರೆಯಲ್ಲಿ ಕಾರ್ಗಿಲ್ ವಿಜಯ ದಿವಸ್ ಅಂಗವಾಗಿ ಬುಧವಾರ ಹಮ್ಮಿಕೊಂಡಿದ್ದ ಮಾಜಿ ಸೈನಿಕರಿಗೆ ಸನ್ಮಾನ ಹಾಗೂ ಉಚಿತ ಆರೋಗ್ಯ ತಪಾಸಣಾ ಶಿಬಿರ ಉದ್ಘಾಟಿಸಿ ಮಾತನಾಡಿದರು.


ಸೈನಿಕರಿಗೆ ಭಗವಂತನ ಆಶೀರ್ವಾದವಿದೆ. ಕಾಗಿಲ್ ಯುದ್ಧದಲ್ಲಿ ಅವರು ದೇಹತ್ಯಾಗ ಮಾಡಿರಬಹುದು. ಆದರೆ, ಅವರ ತ್ಯಾಗ, ಬಲಿದಾನ, ದೇಶಕ್ಕೆ ಸಲ್ಲಿಸಿದ ಸೇವೆ ನಮಗೆ ಯಾವಾಗಲ ಪ್ರೇರಣಾದಾಯಕವಾಗಿವೆ. ಅವರೆಲ್ಲರನ್ನು ನೆನೆಯುವುದು ನಮ್ಮ ಕರ್ತವ್ಯ ಎಂದರು.


ಕೆ.ಎಸ್.ಆಸ್ಪತ್ರೆ ಮುಖ್ಯಸ್ಥ ಡಾ.ಕೆ.ಬಸವರಾಜ ಮಾತನಾಡಿ, ನಾವು ಯುದ್ಧ ಮಾಡುವವರಲ್ಲ. ನಮ್ಮ ಸೈನಿಕರು ಹೋರಾಡಿ ನಮ್ಮ ರಕ್ಷಣೆ ಮಾಡುತ್ತಾರೆ. ನಾವೆಲ್ಲ ಅವರ ಶ್ರಮದ ಫಲಾನುಭವಿಗಳು. ಸೈನಿಕರ ಸೇವೆ ಅಮರ. ಅಜರಾಮರ. ಅವರು ಹುತಾತ್ಮರಾದರೂ ನಮ್ಮ ಮನದಲ್ಲಿ ಸದಾ ನೆಲೆಸಿರುತ್ತಾರೆ ಎಂದರು.


ನಿವೃತ್ತ ಸೈನಿಕ ಶಿವಾನಂದ ಪೂಜಾರ್ ಮಾತನಾಡಿ, ಸೈನಿಕರ ಜೀವನ ಸದಾ ದೇಶಕ್ಕಾಗಿ ಮುಡಿಪಾಗಿರುತ್ತದೆ ಎಂದರು. ಡಾ.ಡಿ.ಆರ್.ಬೆಳ್ಳಟ್ಟಿ ಮಾತನಾಡಿದರು. ಮಾಜಿ ಸೈನಿಕರಾದ ಕುಮಾರಸ್ವಾಮಿ, ಗುರು ಬಸಯ್ಯ ಹಿರೇಮಠ, ಶ್ರೀಧರಗೌಡ ಸುಭಾಷ್ಚಂದ್ರ ಯುದ್ಧ ಅನುಭವ ಹಂಚಿಕೊಂಡರು. ವೀರ ಯೋಧ ಹವಾಲ್ದಾರ್ ಮಲ್ಲಪ್ಪ ಚನ್ನಳ್ಳಿ ಪತ್ನಿ ಜಯಶ್ರೀ ಚನ್ನಳ್ಳಿ ಹಾಗೂ ಮತ್ತೋರ್ವ ವೀರ ಯೋಧ ಬಸವರಾಜ ಕೊಂಡಿಕೊಪ್ಪ ಪತ್ನಿ ಮಲ್ಲಮ್ಮ ಅವರನ್ನು ಸನ್ಮಾನಿಸಲಾಯಿತು.

ನೂರಕ್ಕು ಹೆಚ್ಚು ಮಾಜಿ ಸೈನಿಕರು ಮತ್ತವರ ಕುಟುಂಬದವರಿಗೆ ಆರೋಗ್ಯ ತಪಾಸಣೆ ನಡೆಸಲಾಯಿತು. ಕೆ.ಎಸ್.ಆಸ್ಪತ್ರೆ ಸಿಬ್ಬಂದಿ ರಕ್ತದಾನ ಮಾಡಿದರು. ಮಾರುತಿ ಗೊಂಬೆ, ಶಿವನಗೌಡ ಪೊಲೀಸ್ ಪಾಟೀಲ್, ಪ್ರದೀಪ್, ಮನೋಹರ ಕುಷ್ಟಗಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net