

ಗೋಣಿಕೊಪ್ಪ: ಸೈನಿಕರ ಕೃಷಿ ಭೂಮಿ ರಕ್ಷಣೆಗೆ ಸರ್ಕಾರ ವಿಶೇಷ ನಿಯಮ ರೂಪಿಸುವ ಅನಿವಾರ್ಯತೆ ಇದೆ ಎಂದು ಕಾವೇರಿ ಎಜುಕೇಷನ್ ಸೊಸೈಟಿ ಅಧ್ಯಕ್ಷ ಇಟ್ಟೀರ ಕೆ.ಬಿದ್ದಪ್ಪ ಹೇಳಿದರು
.
ಅಖಿಲ ಕರ್ನಾಟಕ ಮಾಜಿ ಸೈನಿಕರ ಸಂಘದ ಜಿಲ್ಲಾ ಘಟಕದ ವತಿಯಿಂದ ಕಾವೇರಿ ಕಾಲೇಜಿನಲ್ಲಿ ಭಾನುವಾರ ಆಯೋಜಿಸಿದ್ದ ಸೇನಾ ದಿನಾಚರಣೆಯಲ್ಲಿ ಮಾತನಾಡಿದರು. ದೇಶಕ್ಕಾಗಿ ನಿತ್ಯ ಸಾವು-ಬದುಕಿನ ನಡುವೆ ಹೋರಾಟ ನಡೆಸುವ ಸೈನಿಕರು ನಿವೃತ್ತಿ ಬಳಿಕ ಜೀವನದಲ್ಲಿ ಸಂಕಷ್ಟ ಎದುರಿಸುವುದು ಹೆಚ್ಚಾಗುತ್ತಿದೆ. ವೃತ್ತಿ ಜೀವನ ಸಂದರ್ಭ ಅವರ ಆಸ್ತಿಯನ್ನು ಪರರು ಅತಿಕ್ರಮಣಗೊಳಿಸುವ ಕೃತ್ಯಗಳು ಹೆಚ್ಚಾಗುತ್ತಿರುವ ಬಗ್ಗೆ ಸಾಕಷ್ಟು ದೂರುಗಳಿವೆ ಎಂದರು.
ಅಖಿಲ ಕರ್ನಾಟಕ ಮಾಜಿ ಸೈನಿಕರ ಸಂಘದ ಪ್ರಧಾನ ಕಾರ್ಯದರ್ಶಿ ರಮೇಶ್ ಮಾತನಾಡಿ, ಫೀ.ಮಾ.ಕೊಡಂದೇರ ಕಾರ್ಯಪ್ಪ ಮಾತನಾಡಿ, ದೇಶಕ್ಕೆ ಸೇವೆ ನೀಡಲು ಅಗ್ನಿಪಥ್‌ನಲ್ಲಿ ಯುವ ಸಮೂಹಕ್ಕೆ ಉತ್ತಮ ಅವಕಾಶವಿದೆ. ಮಹಿಳೆಯರು ಕೂಡ ಕಮಾಂಡಿಂಗ್ ಅಧಿಕಾರಿಯಾಗಿ ಸೇವೆ ಸಲ್ಲಿಸಲು ಅವಕಾಶ ನೀಡಲಾಗಿದೆ. ಹಾಗಾಗಿ ಎಲ್ಲರೂ ಇದರ ಸದುಪಯೋಗ ಪಡೆದುಕೊಳ್ಳಬೇಕಿದೆ. ರಕ್ಷಣೆಯ ವಿಚಾರದಲ್ಲಿ ಭಾರತ ವಿಶ್ವ ಗುರು ಸ್ಥಾನ ಅಲಂಕರಿಸುವ ಸಾಧ್ಯತೆ ಹೆಚ್ಚಿದೆ ಎಂದರು.
ಸಾಧಕರಾದ ಸೋಮೇಂಗಡ ಗಣೇಶ್ ತಿಮ್ಮಯ್ಯ, ಹೊಸೊಕ್ಲು ಚಿಣ್ಣಪ್ಪ, ತಂಬಂಡ ಜಿ. ನಾಣಯ್ಯ, ಕೊಟ್ಟ್‌ಕತ್ತೀರ ಪ್ರಕಾಶ್ ಕಾರ್ಯಪ್ಪ ಅವರಿಗೆ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಕಾಲೇಜು ಆವರಣದಲ್ಲಿರುವ ಫೀ. ಮಾ. ಕೊಡಂದೇರ ಕಾರ್ಯಪ್ಪ, ಜನರಲ್ ತಿಮ್ಮಯ್ಯ ಪ್ರತಿಮೆಗೆ ಮೆರವಣಿಗೆ ಮೂಲಕ ಆಗಮಿಸಿ ಪುಷ್ಪಾರ್ಚನೆ ಸಲ್ಲಿಸಲಾಯಿತು.