ಸೈನಿಕರ ಕಲ್ಯಾಣಕ್ಕೆ ಹೆಚ್ಚು ನೆರವು ಸಂಗ್ರಹ -ಜಿಲ್ಲಾಧಿಕಾರಿ ವೆಂಕಟೇಶ್ ಹೇಳಿಕೆ - ಕಲ್ಯಾಣ ನಿಧಿ ಸಂಗ್ರಹಕ್ಕಾಗಿ ಧ್ವಜ ಬಿಡುಗಡೆ

flog.jpg
Published on

ದಾವಣಗೆರೆ: ದಾವಣಗೆರೆ ಜಿಲ್ಲೆಯಿಂದ ಈ ಬಾರಿ ಸೈನಿಕರ ಕಲ್ಯಾಣ ನಿಧಿಯನ್ನು ಹೆಚ್ಚು ಸಂಗ್ರಹಿಸಲಾಗುವುದು ಎಂದು ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್ ತಿಳಿಸಿದರು.

ಸಶಸ್ತ್ರ ಪಡೆಗಳ ಧ್ವಜ ದಿನಾಚರಣೆ ಅಂಗವಾಗಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ಶುಕ್ರವಾರ ಸೈನಿಕರ ಕಲ್ಯಾಣ ನಿಧಿ ಸಂಗ್ರಹಿಸುವ ಸಂಬಂಧ ಧ್ವಜ ಬಿಡುಗಡೆ ಮಾಡಿ ಮಾತನಾಡಿದರು.

ಸೈನಿಕರು ದೇಶ ರಕ್ಷಣೆಯಲ್ಲಿ ನಿಸ್ವಾರ್ಥ ಸೇವೆ ಸಲ್ಲಿಸುತ್ತಾರೆ. ಆಗ ಮರಣ ಅಥವಾ ಗಾಯಾಳು ಕೂಡ ಆಗಬಹುಸು. ಸೈನಿಕರು ಮತ್ತು ಅವರ ಕುಟುಂಬದವರಿಗೆ ಸೈನಿಕರ ಕಲ್ಯಾಣ ನಿಧಿ ಸಹಕಾರಿಯಾಗಲಿದೆ ಎಂದು ಹೇಳಿದರು.

ಸೈನಿಕರ ಕಲ್ಯಾಣ ಮಂಡಳಿಯು ದೇಶದ ಯೋಧರ ಅಭ್ಯುದಯಕ್ಕೆ ರಚನೆಯಾದ ವಿಶೇಷ ಘಟಕವಾಗಿದೆ. ಕಳೆದ ವರ್ಷ ಸೈನಿಕರ ಕಲ್ಯಾಣ ನಿಧಿಗೆ ಹೆಚ್ಚಿನ ಹಣ ಸಂಗ್ರಹಿಸಿದ್ದ ಹಿನ್ನೆಲೆಯಲ್ಲಿ ರಾಜ್ಯಪಾಲರು ಗೌರವಿಸಿದ್ದರು. ಈ ಬಾರಿಯೂ ಎಲ್ಲಾ ಇಲಾಖೆಯವರು ಹೆಚ್ಚಿನ ಪ್ರಮಾಣದಲ್ಲಿ ಧನಸಹಾಯ ಮಾಡಿ ಸೈನಿಕರ ಅಭಿವೃದ್ಧಿಗೆ ಧ್ವಜ ನಿಧಿಯನ್ನು ಸಂಗ್ರಹಿಸಬೇಕಾಗಿದೆ ಎಂದರು.

ಜಿಪಂ ಸಿಇಒ ಸುರೇಶ್ ಇಟ್ನಾಳ್ ಮಾತನಾಡಿ ದೇಶದ ಗಡಿಯಲ್ಲಿ ಸೈನಿಕರು ಸೆಣಸುವ ಮೂಲಕ ನಮ್ಮೆಲ್ಲರನ್ನು ರಕ್ಷಿಸುವರು. ಕಳೆದ ವರ್ಷದಂತೆ ಎಲ್ಲಾ ಇಲಾಖೆಗಳ ಸಹಕಾರದಿಂದ ಹೆಚ್ಚಿನ ಪ್ರಮಾಣದಲ್ಲಿ ಸೈನಿಕರ ಕಲ್ಯಾಣ ನಿಧಿ ಸಂಗ್ರಹಿಸಲಾಗುವುದು ಎಂದರು.

ಅಪರ ಜಿಲ್ಲಾಧಿಕಾರಿ ಪಿ.ಎನ್. ಲೋಕೇಶ್, ಸೈನಿಕ ಕಲ್ಯಾಣ ಮಂಡಳಿ ಹಾಗೂ ಪುನರ್ವಸತಿ ಇಲಾಖೆ ಉಪನಿರ್ದೇಶಕ ಡಾ. ಸಿ.ಎ.ಹಿರೇಮಠ, ಜಿಲ್ಲಾ ಮಾಜಿ ಸೈನಿಕರ ಸಂಘದ ಉಪಾಧ್ಯಕ್ಷ ಮಹೇಂದ್ರಕರ್, ಕಾರ್ಯದರ್ಶಿ ಮಂಜುನಾಥ ಪಿಸಾಳೆ, ನಿರ್ದೇಶಕರಾದ ಮಾಲಿಗೌಡ ಪಾಟೀಲ್, ಬಿ.ವಿ.ಚಂದ್ರಪ್ಪ ಹಾಗೂ ಇತರರಿದ್ದರು.

---

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net