

ಶಿಕಾರಿಪುರ: ದೇಶದ ಅಖಂಡತೆ ಮತ್ತು ಏಕತೆಯ ಪ್ರಶ್ನೆ ಬಂದಾಗ ಯುದ್ಧದಂತಹ ಸಂದಿಗ್ದ ಸಮಯದಲ್ಲಿ ನಾವು ಪಕ್ಷಬೇಧ, ಧರ್ಮಬೇಧ ಮರೆತು ಒಂದಾಗಿ ಸೈನಿಕರಿಗೆ ಸ್ಫೂರ್ತಿಯಾಗಬೇಕು. ಯಾವ ಕಾರಣಕ್ಕೂ ಯಾರೇ ಆಗಲಿ ಸೈನಿಕರ ಆತ್ಮಸ್ಥೆ ರ್ಯ ಕುಗ್ಗಿಸುವಂತಹ ಮಾತುಗಳನ್ನಾಡುವುದು ಅಕ್ಷಮ್ಯ ಎಂದು ಸಂಸದ ಬಿ.ವೈ.ರಾಘವೇಂದ್ರ ಹೇಳಿದರು.
ಕಾಶ್ಮೀರಕ್ಕೆ ಹೋದ ಪ್ರವಾಸಿಗರ ಮೇಲೆ, ಅವರ ಹೆಂಡತಿ ಮಕ್ಕಳ ಎದುರೇ ಅವರ ಧರ್ಮವನ್ನು ಕೇಳಿ ಬರ್ಬರವಾಗಿ ಹತ್ಯೆ ಮಾಡಿರುವುದನ್ನು ಮತಾಂಧ ಶಕ್ತಿಗಳನ್ನು ಹೊರತುಪಡಿಸಿ ಇಡೀ ಜಗತ್ತೇ ಖಂಡಿಸಿದೆ. 26 ಹೆಣ್ಣುಮಕ್ಕಳ ಸಿಂಧೂರ ಅಳಿಸಿದ ಉಗ್ರರನ್ನು ಇಹಲೋಕದಿಂದಲೇ ಅಳಿಸಿಹಾಕಲು ಪ್ರಧಾನಿ ನರೇಂದ್ರ ಮೋದಿಯವರು ಕಠಿಣ ನಿರ್ಧಾರ ಕೈಗೊಂಡ ಪರಿಣಾಮ ಆಪರೇಷನ್ ಸಿಂಧೂರ ನಡೆದಿದೆ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ನಮ್ಮ ಸೈನಿಕರು ಪಾಕಿಸ್ತಾನಕ್ಕೆ ನುಗ್ಗಿ 9 ಉಗ್ರರ ನೆಲೆಗಳನ್ನು ಭಸ್ಮಮಾಡಿ ನೂರು ಉಗ್ರರನ್ನು ಹತ್ಯೆ ಮಾಡಿದರು. ಈ ಸಂದರ್ಭದಲ್ಲಿ ನಮ್ಮ ಸೈನಿಕರು ತಮ್ಮ ಪ್ರಾಣವನ್ನು ಒತ್ತೆಯಾಗಿಟ್ಟು ಹೋರಾಡಿ ಉಗ್ರರ ಹೆಡೆಮುರಿ ಕಟ್ಟಿದ್ದಾರೆ ಎಂದರು.
ಇಡೀ ವಿಶ್ವವು ಭಾರತೀಯ ಸೈನಿಕರ ಶೌರ್ಯ, ಸಾಹಸಕ್ಕೆ ಮೆಚ್ಚುಗೆ ವ್ಯಕ್ತಪಡಿಸಿರುವಾಗ ಕಾಂಗ್ರೆಸ್ ಪದೇ ಪದೆ ಆಪರೇಷನ್ ಸಿಂಧೂರವನ್ನು ಟೀಕೆ ಮಾಡುತ್ತಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಯುದ್ಧಬೇಡ ಎಂದು ಹೇಳಿ ಪಾಕಿಸ್ತಾನದ ಮಾಧ್ಯಮಗಳಲ್ಲಿ ರಾರಾಜಿಸಿದರು. ಒಬ್ಬ ಮುಖ್ಯಮಂತ್ರಿಯಾಗಿ ಅವರು ದೇಶ ಸಂಕಷ್ಟ ಹಾಗೂ ಸಂದಿಗ್ದ ಸಮಯದಲ್ಲಿರುವಾಗ ಇಂತಹ ಹೇಳಿಕೆಗಳನ್ನು ನೀಡಿದ್ದು ಸರಿಯಲ್ಲ ಎಂದರು.
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಸಂತೋಷ್ ಲಾಡ್, ಪ್ರಿಯಾಂಕಾ ಖರ್ಗೆ, ಕೃಷ್ಣ ಭೈರೇಗೌಡ, ದಿನೇಶ್ ಗುಂಡೂರಾವ್ ಹಾಗೂ ಕೊತ್ತನೂರು ಮಂಜುನಾಥ್ ಹೇಳಿಕೆಗಳು ಶತ್ರು ರಾಷ್ಟ್ರದ ವಕ್ತಾರರ ಮಾತುಗಳಂತಿದ್ದವು. ಇವರು ಮಾತನಾಡಲು, ದಾಖಲೆ ಕೇಳಲು ಇದು ಸಮಯವಲ್ಲ. ಮಾತನಾಡಲು ವಿಧಾನಸಭೆಯಿದೆ, ಲೋಕಸಭೆಯಿದೆ, ಅಲ್ಲಿ ಮಾತಾಡಲಿ. ಅವರ ಸಂದೇಹಗಳೇನೆ ಇದ್ದರೂ ಪರಿಹರಿಸಿಕೊಳ್ಳಲಿ. ಇವರು ಕೇಂದ್ರ ಸರ್ಕಾರ ದೂಷಿಸುವ ಭರದಲ್ಲಿ ರಾಷ್ಟ್ರರಕ್ಷಣೆಗಾಗಿ ತಮ್ಮನ್ನು ಸಮರ್ಪಿಸಿಕೊಂಡು ಕೆಲಸ ಮಾಡುತ್ತಿರುವ ಸೈನಿಕರ ಬಗ್ಗೆ ಮತ್ತು ಆಪರೇಷನ್ ಸಿಂಧೂರ, ಏರ್‌ಸ್ಟ್ರೈಕ್ ಬಗ್ಗೆ ಕೇವಲವಾಗಿ ಮಾತನಾಡುತ್ತಿರುವುದು ಸರಿಯಲ್ಲ ಎಂದರು.
ಕರ್ನಲ್ ಸೋಫಿಯಾ ಖುರೇಷಿಯಾಗಿರಲಿ, ದೇಶ ಕಾಯುವ ಯಾವುದೇ ಸೈನಿಕರಾಗಲಿ, ಅವರ ಜಾತಿ, ಧರ್ಮ ಪ್ರಶ್ನಿಸುವುದು ಸರಿಯಲ್ಲ. ಅವರು ಯಾವುದೇ ಪಕ್ಷದಲ್ಲಿರಲಿ ಅವರಿಗೆ ಇಂತಹ ಹೇಳಿಕೆಗಳು ಶೋಭೆ ತರುವುದಿಲ್ಲ. ಸೈನಿಕರ ಬಗ್ಗೆ ಮತ್ತು ಯುದ್ಧಗಳ ಬಗ್ಗೆ ಹಗುರವಾಗಿ ಮಾತನಾಡಿದರೆ ಜನತೆ ನಿಮ್ಮ ಮನಸ್ಥಿತಿಯ ಬಗ್ಗೆ ಅರಿತುಕೊಳ್ಳುತ್ತಾರೆ. ಮುಂದಾದರೂ ಯಾರೇ ಆಗಲಿ ಸೈನಿಕರ ಬಗ್ಗ್ಗೆ ಕೇವಲವಾಗಿ ಮಾತನಾಡಬಾರದು. ನಮ್ಮ ಮಾತುಗಳು ಎಂದಿಗೂ ಸೈನಿಕರಿಗೆ ಸ್ಫೂರ್ತಿ ತುಂಬುವಂತಿರಬೇಕು ಎಂದರು.
ಪುರಸಭೆ ಅಧ್ಯಕ್ಷೆ ಸುನಂದಾ ಮಂಜನಾಥ್ ಬಾಳೇಕಾಯಿ, ತಾಲೂಕು ಬಿಜೆಪಿ ಅಧ್ಯಕ್ಷ ಹನುಮಂತಪ್ಪ, ಟಿಎಪಿಸಿಎಂಎಸ್ ಅಧ್ಯಕ್ಷ ಸುಧೀರ್, ಡಿಸಿಸಿ ಬ್ಯಾಂಕ್ ನಿರ್ದೇಶಕ ಡಿ.ಎಲ್.ಬಸವರಾಜ್, ಡಿಸಿಸಿ ಬ್ಯಾಂಕ್ ಮಾಜಿ ಅಧ್ಯಕ್ಷ ಚನ್ನವೀರಪ್ಪ, ವಸಂತಗೌಡ ಇತರರಿದ್ದರು.