ಸೈನಿಕ ಹುದ್ದೆಯಲ್ಲ, ಶ್ರೇಷ್ಠ ದೇಶ ಸೇವೆ

yuva saptah
Published on

ಬೀದರ್: ಸೈನಿಕ ಒಂದು ಹುದ್ದೆ ಅಲ್ಲ, ಅದು ಶ್ರೇಷ್ಠ ಸೇವೆ. ದೇಶವನ್ನು ಸಂರಕ್ಷಿಸುವ ಹಾಗೂ ಸಂವರ್ಧಿಸುವ ಮಹತ್ವದ ಕಾರ್ಯ ಇದಾಗಿದೆ ಎಂದು ಗ್ಲೋಬಲ್ ಸೈನಿಕ ಅಕಾಡೆಮಿ ಅಧ್ಯಕ್ಷರಾದ ನಿವೃತ್ತ ಕರ್ನಲ್ ಶರಣಪ್ಪ ಸಿಕೆನಪುರ ಹೇಳಿದರು.

ಶನಿವಾರ ಇಲ್ಲಿನ ಒಳಾಂಗಣ ಕ್ರೀಡಾಂಗಣದಲ್ಲಿ ಏರ್ಪಡಿಸಿದ ರಾಷ್ಟ್ರೀಯ ಯುವ ಸಪ್ತಾಹ ಮತ್ತು ಸೈನ್ಯ ತರಬೇತಿ ಸಮಾರೋಪದಲ್ಲಿ ಮಾತನಾಡಿ, ಯುವಕರು ಆಸಕ್ತಿಯಿಂದ ಸೈನ್ಯದಲ್ಲಿ ಭಾಗವಹಿಸಬೇಕು. ಸೈನದಲ್ಲಿದ್ದರೆ ದೇಶ ಪ್ರೇಮ ಹಾಗೂ ರಾಷ್ಟ್ರ ಭಕ್ತಿ ಜಾಗೃತಗೊಂಡು ಯಶಸ್ವಿ ಹಾಗೂ ಜವಾಬ್ದಾರಿಯುತ ಪ್ರಜೆಯಾಗಲು ಸಾಧ್ಯ ಎಂದರು.

ಈ ಭಾಗದ ನನಗೆ ಸೈನ್ಯಾಧಿಕಾರಿಯಾಗಿ ಸೇವೆ ಮಾಡುವ ಸೌಭಾಗ್ಯ ದೊರೆಯಿತು. ನನ್ನ ಜಿಲ್ಲೆಯ ನೂರಾರು ಯುವಜನರು ದೇಶ ರಕ್ಷಣೆ ಮಾಡಲಿ ಎಂಬ ಕಾರಣಕ್ಕೆ ಜಿಲ್ಲಾಡಳಿತ ಮೂರು ತಿಂಗಳ ಕಾಲ ತರಬೇತಿಯ ಅವಕಾಶ ನೀಡಿದಲ್ಲಿ ಜಿಲ್ಲೆಯ ಅನೇಕ ಯುವಕರಿಗೆ ಸೈನ್ಯದಲ್ಲಿ ಭರ್ತಿ ಮಾಡಿಸಲು ಶ್ರಮಿಸುವೆ ಎಂದು ಹೇಳಿದರು.

ರಾಷ್ಟ್ರೀಯ ಯುವ ಪ್ರಶಸ್ತಿ ಪುರಸ್ಕೃತರಾದ ಶಿವಯ್ಯ ಸ್ವಾಮಿ, ಓಂಪ್ರಕಾಶ ರೊಟ್ಟೆ ಮಾತನಾಡಿ, ಸ್ವಾಮಿ ವಿವೇಕಾನಂದರು ಹಾಗೂ ನೇತಾಜಿ ಸುಭಾಷಚಂದ್ರ ಬೋಸ್ ಅವರಂಥ ಮಹಾನ್ ಪುರುಷರ ವಾರಸುದಾರರು ನಾವು. ಅವರ ತತ್ವಾದರ್ಶಗಳನ್ನು ಪಾಲಿಸಬೇಕು ಎಂದರು.

ಬಿವಿಬಿ ಕಾಲೇಜಿನ ಎನ್ ಸಿಸಿ ಅಧಿಕಾರಿ ಮೇಜರ್ ಡಾ.ಪಿ.ವಿಠಲರೆಡ್ಡಿ, ರಾಷ್ಟ್ರೀಯ ಯುವ ಪ್ರಶಸ್ತಿ ಪುರಸ್ಕೃತ ಪ್ರಭುಲಿಂಗ ಬಿರಾದಾರ, ರಾಜ್ಯ ಯುವ ಪ್ರಶಸ್ತಿ ಪುರಸ್ಕೃತ ಮೌಲಪ್ಪ ಮಾಳಗೆ ಮಾತನಾಡಿದರು. ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ರಾಜೇಂದ್ರಕುಮಾರ ಗಂದಗೆ ಅಧ್ಯಕ್ಷತೆ ವಹಿಸಿದ್ದರು. ನೆಹರು ಯುವ ಕೇಂದ್ರ ಜಿಲ್ಲಾ ಯುವ ಸಮನ್ವಯಾಧಿಕಾರಿ ಮಯೂರಕುಮಾರ ಗೋರ್ಮೆ ಇದ್ದರು.

ಸಪ್ತಾಹ ನಿಮಿತ್ತ ಜರುಗಿದ ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿ ವಿಜೇತರಾದ ಯುವಕ, ಯುವತಿಯರಿಗೆ ಪ್ರಶಸ್ತಿ ಪತ್ರ ಹಾಗೂ ಬಹುಮಾನ ವಿತರಿಸಲಾಯಿತು. ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ಆರ್.ಜಿ.ನಾಡಗೀರ್ ಸ್ವಾಗತಿಸಿದರು. ಶಿವಕುಮಾರ ಸ್ವಾಮಿ ವಂದಿಸಿದರು. ಜಿಲ್ಲಾಡಳಿತ, ಜಿಪಂ, ಕ್ರೀಡಾ ಇಲಾಖೆ, ನೆಹರು ಯುವ ಕೇಂದ್ರ, ಸ್ವಾಮಿ ವಿವೇಕಾನಂದ ಯುವಶಕ್ತಿ ಕೇಂದ್ರದಿಂದ ಕಾರ್ಯಕ್ರಮ ಸಂಘಟಿಸಲಾಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net