

ಬಸವಕಲ್ಯಾಣ: ದೇಶದ ಗಡಿಯಲ್ಲಿ ಪ್ರತಿಕೂಲ ಪರಿಸ್ಥಿತಿಯಲ್ಲಿಯೂ ದೇಶ ರಕ್ಷಣೆಗಾಗಿ ಸಮರ್ಪಣಾ ಮನೋಭಾವದಿಂದ ಕಾರ್ಯನಿರ್ವಹಿಸುವ ಸೈನಿಕರ ಹಾಗೂ ದೇಶಕ್ಕೆ ಅನ್ನ ನೀಡುವ ರೈತರ ಜೈಕಾರವಾಗಬೇಕು. ಎಲ್ಲಡೆ ಅವರ ಮಾನ-ಸನ್ಮಾನವಾಗಬೇಕು. ದೇಶದ ಉನ್ನತಿಗೆ ಇದು ಅವಶ್ಯಕ ಎಂದು ತಡೋಳಾದ ಶ್ರೀ ರಾಜೇಶ್ವರ ಶಿವಾಚಾರ್ಯರು ನುಡಿದರು.
ನಗರದ ಬಿಕೆಡಿಬಿ ಕಲ್ಯಾಣ ಮಂಟಪದಲ್ಲಿ ತಾಲೂಕು ಮಾಜಿ ಸೈನಿಕರ ಸಂಘದಿಂದ ಬುಧವಾರ ಆಯೋಜಿಸಿದ್ದ ೭೭ನೇ ಭಾರತೀಯ ಭೂ ಸೇನಾ ದಿನಾಚರಣೆಯಲ್ಲಿ ಸಾನ್ನಿಧ್ಯ ವಹಿಸಿ ಮಾತನಾಡಿದ ಶ್ರೀಗಳು, ಸೈನಿಕರು ಹಾಗೂ ರೈತರು ಅತ್ಯಂತ ಪ್ರಾಮಾಣಿಕರು. ಅವರ ಸೇವೆ, ತ್ಯಾಗ ದೊಡ್ಡದು. ಅವರಿಗೆ ಮೂಲಸೌಕರ್ಯ ಒದಗಿಸುವ ಕಾರ್ಯ ಸರ್ಕಾರದಿಂದ ನಡೆಯಲಿ ಎಂದರು.
ನೇತೃತ್ವ ವಹಿಸಿದ್ದ ಸಂಸ್ಥಾನ ಗವಿಮಠದ ಶ್ರೀ ಡಾ.ಅಭಿನವ ಘನಲಿಂಗ ರುದ್ರಮುನಿ ಶಿವಾಚಾರ್ಯರು ಮಾತನಾಡಿ, ದೇಶದ ರಕ್ಷಣೆಗಾಗಿ ಸೈನಿಕರ ಸೇವೆ ಅಪಾರ, ಮಾಜಿ ಸೈನಿಕರಿಗಾಗಿ ನಗರದಲ್ಲಿ ಭವನ ನಿರ್ಮಾಣಕ್ಕೆ ಸರ್ಕಾರದಿಂದ ನಿವೇಶ ಮಂಜೂರಿ ಮಾಡುವ ಜತೆಗೆ ಭವನ ನಿರ್ಮಾಣಕ್ಕೆ ಅನುದಾನ ಕಲ್ಪಿಸಬೇಕು ಎಂದು ಹೇಳಿದರು.
ವಿಧಾನ ಪರಿಷತ್ ಮಾಜಿ ಸದಸ್ಯ ವಿಜಯಸಿಂಗ್ ಮಾತನಾಡಿ, ಸೈನಿಕರು ದೇಶದ ಗಡಿಯಲ್ಲಿ ನಿಂತು ರಕ್ಷಣೆ ಮಾಡುತ್ತಾರೆ. ಹೀಗಾಗಿ ದೇಶದಲ್ಲಿ ನಾವೆಲ್ಲರೂ ಸುರಕ್ಷಿತವಾಗಿದ್ದೇವೆ. ಅವರ ದೇಶಭಕ್ತಿ, ಸೇವೆ ಅತ್ಯಂತ ಮಹತ್ವದ್ದಾಗಿದೆ ಎಂದು ಹೇಳಿದರು.
ಭಾಲ್ಕಿಯ ಕಿಸಾನ ಸೈಕ್ಷಣಿಕ ಮತ್ತು ಪರಿಸರ ಶಿಕ್ಷಣ ಪ್ರಸಾರಕ ಮಂಡಳಿ ಉಪಾಧ್ಯಕ್ಷ ಆರ್.ಡಿ.ಬಿರಾದಾರ ಮಾತನಾಡಿದರು.
ನಗರಸಭೆ ಅಧ್ಯಕ್ಷ ಎಂ.ಡಿ .ಸಗೀರೋದ್ದಿನ್, ಮಾಜಿ ಸೈನಿಕರ ಸಂಘದ ಜಿಲ್ಲಾಧ್ಯಕ್ಷ ರಾಜಕುಮಾರ ಲದ್ದೆ, ತಾಲೂಕು ಘಟಕದ ಅಧ್ಯಕ್ಷ ಬಾಬುರಾವ ಗೋರ್ಟೆ, ಗೌರವ ಅಧ್ಯಕ್ಷ ಕರ್ನಲ್ ವೆಂಕಟರೆಡ್ಡಿ, ಗೌರವ ಉಪಾಧ್ಯಕ್ಷ ಮೇಜರ್ ಸೂರ್ಯಕಾಂತ ಮೇತ್ರೆ, ಉಪಾಧ್ಯಕ್ಷ ಮಲ್ಲಪ್ಪ ಬಾಗೇವಾಡಿ, ಕಾರ್ಯದರ್ಶಿ ಸಿದ್ರಾಮ ಬೇಲೂರೆ, ಅಖಿಲ ಭಾರತ ಮಾಜಿ ಸೈನಿಕರ ಸಂಘದ ಸದಸ್ಯ ವೆಂಕಟ ತೆಲಂಗ, ಪಿಎಸ್‌ಐ ಸುರೇಶ ಹಜ್ಜರಗಿ, ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಜೋಶಿ ಇತರರಿದ್ದರು. ಪ್ರಕಾಶರೆಡ್ಡಿ ಸ್ವಾಗತಿಸಿದರು. ಓಂಕಾರ ಬಿರಾದಾರ ಪ್ರಾಸ್ತಾವಿಕ ಮಾತನಾಡಿದರು. ಆಕಾಶವಾಣಿ ಕಲಾವಿದ ನವಲಿಂಗ ಪಾಟೀಲ್ ನಿರೂಪಣೆ ಮಾಡಿದರು.
ಮೆರವಣಿಗೆ: ಬೆಳಗ್ಗೆ ಹುತಾತ್ಮ ಸೈನಿಕರಿಗೆ ಶ್ರದ್ದಾಂಜಲಿ ಸಲ್ಲಿಸಿದ ನಂತರ ನಗರದ ಶ್ರೀ ಬಸವೇಶ್ವರ ದೇವಸ್ಥಾನದಿಂದ ಕೋಟೆ ಮೂಲಕ ಮುಖ್ಯರಸ್ತೆ ಮಾರ್ಗವಾಗಿ ಡಾ.ಅಂಬೇಡ್ಕರ್ ವೃತ್ತದ ಮೂಲಕ ಬಿಕೆಡಿಬಿ ಕಲ್ಯಾಣ ಮಂಟಪದವರೆಗೆ ಮೆರವಣಿಗೆ ನಡೆಯಿತು.