

ಮುಂಡಗೋಡ: ಪ್ರಶಸ್ತಿಗಿಂತ ಪ್ರೀತಿ ದೊಡ್ಡದು. ಪ್ರೀತಿ ಎಂದೆಂದೂ ಶಾಶ್ವತ. ಮಕ್ಕಳಿಗೆ ಶಿಕ್ಷಣದ ಜೊತೆ ಸಂಸ್ಕಾರ ನೀಡುವುದು ಮುಖ್ಯ ಎಂದು ಹುಬ್ಬಳ್ಳಿ ಎರಡೆತ್ತಿನ ಮಠದ ಸಿದ್ಧಲಿಂಗ ಶ್ರೀಗಳು ಹೇಳಿದರು.
ನೀಡುವುದು ಮುಖ್ಯ ಎಂದು ಹುಬ್ಬಳ್ಳಿ ಎರಡೆತ್ತಿನ ಮಠದ ಸಿದ್ಧಲಿಂಗ ಶ್ರೀಗಳು ಹೇಳಿದರು.
ತಾಲೂಕಿನ ಇಂದೂರ ಗ್ರಾಮದಲ್ಲಿ ಶನಿವಾರ ಸಂಜೆ ಆಯೋಜಿಸಿದ್ದ ಶ್ರೀ ಮಂಜುನಾಥ ಶಿಕ್ಷಣ ಮತ್ತು ಸಮಾಜ ಸೇವಾ ಟ್ರಸ್ಟ್ನ ವಾರ್ಷಿಕ ಸ್ನೇಹ ಸಮ್ಮೇಳನಕ್ಕೆ ಚಾಲನೆ ನೀಡಿ ಅವರು ಆಶೀರ್ವಚನ ನೀಡಿದರು.
ದೇಶದಲ್ಲಿ ಮೂರು ಅಮೂಲ್ಯ ರತ್ನಗಳ ಪಾತ್ರ ಪ್ರಮುಖವಾದದ್ದು. ಅವುಗಳೆಂದರೆ ದೇಶ ಕಾಯುವ ಸೈನಿಕ, ದೇಶಕ್ಕೆ ಅನ್ನ ನೀಡುವ ರೈತ ಮತ್ತು ಬದುಕಿಗೆ ಮಾರ್ಗದರ್ಶನ ನೀಡಿ ಬದುಕನ್ನು ಸುಂದರಗೊಳಿಸುವ ಶ್ರೇಷ್ಟ ಗುರು ಎಂದು ಹೇಳಿದರು.
ಕಾಂಗ್ರೆಸ್ ಜಿಲ್ಲಾಧ್ಯಕ್ಷ ಭೀಮಣ್ಣ ನಾಯ್ಕ ಮಾತನಾಡಿ, ಶಿಕ್ಷಣ ಯಾರ ಸ್ವತ್ತೂ ಅಲ್ಲ. ಯಾವ ತಾರತಮ್ಯವಿಲ್ಲದೆ ಮುಂದಿನ ಪೀಳಿಗೆಗೆ ಉತ್ತಮ ಶಿಕ್ಷಣ ಸಿಗುವಂತಾಗಬೇಕು ಎಂದರು.
ಪದವೀಧರ ಕ್ಷೇತ್ರದ ಆರ್.ಎಂ. ಕುಬೇರಪ್ಪ ಮಾತನಾಡಿ, ಸಮ್ಮೇಳನವು ಹಬ್ಬದ ವಾತಾವರಣ ನಿರ್ಮಾಣ ಮಾಡಿದೆ ಎಂದರು.
ವಾಕರಸಾ ನಿಗಮದ ಮಾಜಿ ಅಧ್ಯಕ್ಷ ಸದಾನಂದ ಡಂಗನವರ ಮಾತನಾಡಿ, ಹುಟ್ಟು ಆಕಸ್ಮಿಕ ಸಾವು ನಿಶ್ಚಿತ. ಆದರೆ, ಈ ಮಧ್ಯದಲ್ಲಿ ನಾವು ಮಾಡಿದ ಸಾಧನೆಗಳು ಮಾತ್ರ ಶಾಶ್ವತ. ರೈತ ಮತ್ತು ಯೋಧರನ್ನು ಸ್ಮರಿಸೋಣ ಎಂದು ಹೇಳಿದರು.
ಬಿ.ಕೆ. ಪಾಟೀಲ ಮಾತನಾಡಿದರು. ಹುಬ್ಬಳ್ಳಿ ಎರಡೆತ್ತಿನ ಮಠದ ಸಿದ್ಧಲಿಂಗ ಶ್ರೀಗಳಿಗೆ ಧರ್ಮಶ್ರೀ ಪ್ರಶಸ್ತಿ ಪ್ರದಾನ ಮಾಡಲಾಯಿತು. ಆರ್.ಎಂ. ಕುಬೇರಪ್ಪ, ರವಿ ದುಗ್ಗಳ್ಳಿ, ಕೆ.ಪಿ. ಆನಂದಗೌಡ್ರ, ಬಸವರಾಜ ಅಂಗಡಿ, ಈರಪ್ಪ ಬಡಿಗೇರ ಅವರನ್ನು ಸನ್ಮಾನಿಸಲಾಯಿತು. ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ಶಾಲಾ ಮಕ್ಕಳಿಗೆ ಬಹುಮಾನ ವಿತರಿಸಲಾಯಿತು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೃಷ್ಣ ಹಿರೇಹಳ್ಳಿ, ಎಚ್.ಎಂ. ನಾಯ್ಕ, ದಾಕ್ಷಾಯಣಿ ಸುರಗಿಮಠ, ಎ.ವಿ. ಪಾಲೇಕರ, ಕೆ.ಆರ್. ಬಾಳೆಕಾಯಿ, ಎಂ.ಐ. ನಡಗೇರಿ, ಎಂ.ಬಿ. ಕುಟ್ರಿ, ಎಂ.ಸಿ. ಪಾಟೀಲ, ಬಸಪ್ಪ ಗಲಬಿ ಇತರರಿದ್ದರು.
ಶಾಲಾ ಮಕ್ಕಳು ಸ್ವಾಗತ ಗೀತೆ ಹೇಳಿದರು. ಟ್ರಸ್ಟ್ನ ಅಧ್ಯಕ್ಷ ಧರ್ಮರಾಜ ನಡಗೇರಿ ಸ್ವಾಗತಿಸಿದರು. ಶ್ವೇತಾ ಪಾಟೀಲ ನಿರ್ವಹಿಸಿದರು. ಶಾಲಾ ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮಗಳು ಜನಮನ ರಂಜಿಸಿದವು.