

ಶಾಮಸುಂದರ ಕುಲಕರ್ಣಿ ಕಲಬುರಗಿ
ದೇಶ ಪ್ರೇಮ ಯಾವುದರ ಮೂಲಕವೂ ವ್ಯಕ್ತವಾಗಬಹುದು ಎಂಬುದಕ್ಕೆ ಇಲ್ಲೊಂದು ತಾಜಾ ಉದಾಹರಣೆ.
ಕಲಬುರಗಿ ಕೇಂದ್ರ ಬಸ್ ನಿಲ್ದಾಣದ ಎದರುಗಡೆ ತಳ್ಳುಬಂಡಿಯಲ್ಲಿ ಉಪಾಹಾರ ಸಿದ್ದಪಡಿಸುವ ಯುವಕನೊಬ್ಬ ಭಾರತೀಯ ಸೈನಿಕರಿಗೆ ಹಾಗೂ ಮಾಜಿ ಸೈನಿಕರಿಗೆ ಶೇ.50 ರಿಯಾಯಿತಿ ದರದಲ್ಲಿ ಉಪಾಹಾರ ನೀಡುವ ಮೂಲಕ ದೇಶ ಭಕ್ತಿ ಮೆರೆಯುತ್ತಿದ್ದಾನೆ.
ಧೋತ್ರೆ ಹೆಸರಿನ ಉಪಾಹಾರ ಕೇಂದ್ರದಲ್ಲಿ ಪ್ರತಿದಿನ 20ರಿಂದ 30 ಮಾಜಿ ಸೈನಿಕರು ರಿಯಾಯಿತಿ ದರದಲ್ಲಿ ಉಪಾಹಾರ ಸೇವಿಸುತ್ತಿದ್ದಾರೆ. ಸೇನೆಯಲ್ಲಿ ಕೆಲಸ ನಿರ್ವಹಿಸುವವರು, ಬಂದರೆ ಸಂಪೂರ್ಣ ಉಚಿತವಾಗಿ ತಿಂಡಿ ನೀಡುತ್ತಾರೆ.
ಯುವಕ ರವಿಚಂದ್ರ ಭಾರತೀಯ ಸೇನೆಯಲ್ಲಿ ಸೇರಬೇಕು ಎಂಬ ಇಚ್ಛೆ ಹೊಂದಿದ್ದ. ಸ್ವಲ್ಪ ಕುಳ್ಳಗಿರುವ ಕಾರಣ ಸೇನೆಯಲ್ಲಿ ಭರ್ತಿ ಆಗಿಲ್ಲ. ತುಂಬಾ ನಿರಾಸೆಗೊಂಡ ರವಿಚಂದ್ರ, ಸಾಕಷ್ಟು ದೈಹಿಕ ಶ್ರಮ ಪಟ್ಟು ಎತ್ತರವಾಗಲು ಪ್ರಯತ್ನಿಸಿದನಾದರೂ ಸಾಧ್ಯವಾಗಲಿಲ್ಲ. ಉಪ ಜೀವನ ಸಾಗಿಸಬೇಕಲ್ಲ. ಹೀಗಾಗಿ ತಳ್ಳುವ ಬಂಡಿಯಲ್ಲಿ ಉಪಾಹಾರ ಮಾರಾಟ ಮಾಡಲು ಆರಂಭಿಸಿದ. ಸೇನೆಯಲ್ಲಿ ಸೇರುವ ಅವಕಾಶ ಸಿಗಲಿಲ್ಲ. ಆದರೆ ಸೈನಿಕರಿಗೆ ಮತ್ತು ಮಾಜಿ ಸೈನಿಕರಿಗೆ ರಿಯಾಯಿತಿ ದರದಲ್ಲಿ ಉಪಾಹಾರ ನೀಡುವ ಮೂಲಕ ಸೇವೆಗೆ ಮುಂದಾಗುವ ಯೋಚನೆ ಹೊಳೆಯಿತು. ತಕ್ಷಣವೆ ಬಂಡಿಯ ಮೇಲೆ ಇಂಡಿಯನ್ ಆಮರ್ಿಗೆ ಶೇ.50 ರಿಯಾಯಿತಿ ಎಂದು ನಾಮ ಫಲಕ ಅಳವಡಿಸಿದ.
ಹತ್ತು ವರ್ಷದಿಂದ ಸೈನಿಕರಿಗೆ ಉಚಿತ, ಮಾಜಿ ಸೈನಿಕರಿಗೆ ಶೇ. 50 ರಿಯಾಯಿತಿಯಲ್ಲಿ ತಿಂಡಿ ನೀಡುವ ಮೂಲಕ ದೇಶ ಸೇವೆಯಲ್ಲಿ ತೊಡಗಿಸಿಕೊಂಡಿದ್ದಾನೆ. ತಾಯಿ ಮತ್ತು ನನ್ನ ತಮ್ಮಂದಿರು ನನಗೆ ಸ್ಪೂರ್ತಿ ಎನ್ನುತ್ತಾರೆ ರವಿಚಂದ್ರ. ಅವರ ಸಹಕಾರದಿಂದ ಇಷ್ಟು ಬೆಳೆಯಲು ಕಾರಣವಾಗಿದೆ. ಶಿವಾಜಿ, ವೀರಭದ್ರ, ಭೀಮರಾವ, ಕಾಳಿಂಗ ಮತ್ತು ಕೃಷ್ಣ ತಮ್ಮಂದಿರು. ಅದರಲ್ಲಿ ಒಬ್ಬಾತ ಇಂಜಿನಿಯರಿಂಗ್ ಪದವಿ, ಇನ್ನೊಬ್ಬಾತ ಡಿಪ್ಲೊಮಾ ಮುಗಿಸಿದ್ದಾರೆ. ಅವರು ಕೂಡ ನೌಕರಿ ಹುಡುಕುತ್ತ ಎಲ್ಲೂ ಹೋಗಲಿಲ್ಲ. ಅಷ್ಟು ಓದಿದರೂ ವ್ಯಾಪಾರದಲ್ಲಿ ತೊಡಗಿದ್ದಾರೆ.
ದುಡ್ಡು ಗಳಿಸಬೇಕು ಎಂದು ವ್ಯಾಪಾರದಲ್ಲಿ ಅದೇಷ್ಟೋ ಮೋಸ ಮಾಡುವ ಜನರ ನಡುವೆ ರವಿಚಂದ್ರ ದೇಶ ಕಾಯುವ ಸೈನಿಕರಿಗೆ ಮತ್ತು ಪ್ರಾಣವನ್ನೆ ಮುಡಿಪಾಗಿಟ್ಟು ಮರಣವನ್ನೇ ಜಯಿಸಿ ಬಂದ ಮಾಜಿ ಸೈನಿಕರ ಸೇವೆ ಮಾಡುವ ಮನೋಭಾವ ಹೊಂದಿದ್ದು ಶ್ಲಾಘನೀಯ.
ಕಲಬುರಗಿಯಲ್ಲಿ ಜರುಗಿದ ಕನ್ನಡ ಸಾಹಿತ್ಯ ಸಮ್ಮೇಳನದ ಮೂರು ದಿನವೂ ಸೈನಿಕರಿಗೆ ಮಾಜಿ ಸೈನಿಕರಿಗೆ ಉಚಿತ ಉಪಾಹಾರ ನೀಡಿದ್ದಾರೆ. ಪರ ಊರಿನಿಂದ ಬಂದ ಮಾಜಿ ಸೈನಿಕರು ಆಹಾರ ಸೇವಿಸಿ ರವಿಚಂದ್ರನ ಸೇವೆಯನ್ನು ಕೊಂಡಾಡಿದ್ದಾರೆ.
ದೇಶದ ಬಗ್ಗೆ ಅಪಾರ ಕಾಳಜಿ ಇದೆ. ಈಗಲೂ ದೇಶದಿಂದ ಕರೆ ಬಂದರೆ ಸೇವೆ ಸಲ್ಲಿಸಲು ಸಿದ್ಧನಿರುವೆ. ಒಂದು ದಿನವಾದರೂ ಸೇನೆಯಲ್ಲಿ ಸೇವೆ ಸಲ್ಲಿಸುವ ಆಸೆ ಇದೆ. ಸೇನೆಯಲ್ಲಿ ಅವಕಾಶ ಸಿಗದಿದ್ದರೂ ದೇಶಕ್ಕೆ ಯುವಕರ ಅಗತ್ಯ ಬಿದ್ದಾಗ ಕರೆದರೆ ಸಂತೋಷದಿಂದ ಸೇವೆ ಸಲ್ಲಿಸುವೆ. ರವಿಚಂದ್ರ, ವ್ಯಾಪಾರಿ