

ಅಶೋಕ ಶೆಟ್ಟರ, ಬಾಗಲಕೋಟೆ: ಮುಳುಗಡೆ ಸಂತ್ರಸ್ತರ ಹೆಸರಿನಲ್ಲಿ ಬಿಟಿಡಿಎ ವತಿಯಿಂದ ನಿವೇಶನ ದೋಚಲು ನಕಲಿ ಮರದಾರರ ಪಟ್ಟಿಯನ್ನು ಸೃಷ್ಟಿಸಿದ್ದ ಆರೋಪಿಗ:ಳು ಹಾಗೂ ಅಂತ ವಂಚಕರಿಗೆ ನಿವೇಶನ ನೀಡುವಂತೆ ಪ್ರಭಾವ ಬೀರಿದ್ದಾರೆ ಎನ್ನುವ ಆರೋಪದ ಮೇಲೆ ಒಟ್ಟು ೧೫ ಜನರ ಮೇಲೆ ಇದೀಗ ಎಫ ಐಆರ್ ದಾಖಲಾಗಿದೆ.
ಬಿಟಿಡಿಎ ಹಿಂದಿನ ಪುನರ್ ವಸತಿ ಅಧಿಕಾರಿ, ಹಾಲಿ ಬಾಗಲಕೋಟೆ ಕೈಗಾರಿಕೆ, ವಾಣಿಜ್ಯ ಇಲಾಖೆ ಜಂಟಿ ನಿರ್ದೇಶಕ ಪ್ರಶಾಂತ ಬಾರಿಗಿಡ ಎನ್ನುವವರು ಈ ಬಗ್ಗೆ ಬಾಗಲಕೋಟೆ ನವನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಆಲಮಟ್ಟಿ ಜಲಾಶಯದ ಹಿನ್ನೀರಿಗೆ ಬಾಧಿತ ಬಾಗಲಕೋಟೆ ನಗರದ ಮುಳುಗಡೆ ಪ್ರದೇಶದ ಸಂತ್ರಸ್ತರಿಗೆ ಬಾಗಲಕೋಟೆ ಪಟ್ಟಣ ಅಭಿವೃದ್ಧಿ ಪ್ರಾಽಕಾರದಿಂದ ನಿವೇಶನ ವಿತರಣೆ ಮಾಡಲಾಗುತ್ತಿದೆ. ಆದರೆ, ಸಂತ್ರಸ್ತರ ಹೆಸರಿನಲ್ಲಿ ಬಿಟಿಡಿಎನಲ್ಲಿ ಸಾಕಷ್ಟು ಗೋಲ್ ಮಾಲ್ ನಡೆಯುತ್ತಿವೆ ಎನ್ನುವ ಆರೋಪಗಳು ದಶಕಗಳಿಂದಲೂ ಕೇಳಿ ಬರುತ್ತಿವೆ. ಇದೊಂದು ಬ್ರಹಾಂಡ ಭ್ರಷ್ಟಾಚಾರ ಎನ್ನುವ ಆರೋಪಗಳು ಇದ್ದೆ ಇವೆ. ಆದರೆ, ವಿಪಕ್ಷದಲ್ಲಿ ಇದ್ದಾಗ ಧ್ವನಿ ಎತ್ತಿ ಆಡಳಿತಕ್ಕೆ ಬಂದಾಗ ತುಟಿಪಿಟಿಕ್ ಎನ್ನದೇ ಜಾಣ ಮೌನವಹಿಸುತ್ತ ಬಂದಿರುವುದು ಇಲ್ಲಿನ ರಾಜಕಾರಣದ ಭಾಗವಾಗಿದೆ.
ಆದರೆ, ಇದೀಗ ಆಡಳುತ ಪಕ್ಷದಲ್ಲೆ ಇಬ್ಬರು ಪ್ರಭಾವಿ ವ್ಯಕ್ತಿಗಳ ಬೆಂಬಲಿಗರು ಬಿಟಿಡಿಎನಲ್ಲಿ ತಮ್ಮದೇ ಪ್ರಭಾವ ಕೆಲಸ ಮಾಡಬೇಕು ಎನ್ನುವ ಪ್ರತಿಷ್ಠೆ ಇದೀಗ ಅಲ್ಲಿನ ಹುಳುಕುಗಳನ್ನು ಪಿಸುಗುಟ್ಟುತ್ತಿರುವುದು ಬಿಟಿಡಿಎ ಅವ್ಯವಹಾರ ಹೊರಬರುವಂತಾಗಿವೆ.
ಇದೀಗ ಬಿಟಿಡಿಎನಲ್ಲಿ ಪುನರ್ ವಸತಿ ಅಧಿಕಾರಿ ಆಗಿ ಕೆಲಸ ಮಾಡಿದ್ದ ಸದ್ಯ ಅಲ್ಲಿಂದ ವರ್ಗಾವಣೆ ಆಗಿರುವ ಪ್ರಶಾಂತ ಬಾರಿಗಿಡದ ವರು ಬಿಟಿಡಿಎಗೆ ಮೋಸ ಮಾಡಿ ನಕಲಿ ದಾಖಲೆ ಸೃಷ್ಟಿಸಿ ನಿವೇಶನ ಪಡೆಯಲು ಮುಂದಾಗಿದ್ದವರ ಬಗ್ಗೆ ಪ್ರಕರಣ ದಾಖಲಿಸಿದ್ದಾರೆ.
ಮುಳುಗಡೆ ಸಂತ್ರಸ್ತರು ತಾವು ನಿವೇಶನ ಪಡೆಯಲು ಕೆಲ ಅಗತ್ಯ ದಾಖಲೆಗಳೊಂದಿಗೆ ನಿವೇಶನಗಳಿಗೆ ಅರ್ಜಿ ಸಲ್ಲಿಸಬೇಕು. ಅದರಲ್ಲಿ ಪ್ರಮುಖವಾಗಿ ಫಲಾನುಭವಿಗಳು ತಾವು ಬಾಗಲಕೋಟೆ ನಗರದ ಮುಳುಗಡೆ ವ್ಯಾಪ್ತಿಯವರು ಎಂದು ದೃಢಪಡಿಸಲು ಬಿಟಿಡಿಎ ನಿಯಮದ ಪ್ರಕಾರ ೧೯೮೮, ೧೯೯೫, ೨೦೦೨, ೨೦೦೮ ಹೀಗೆ ಆಯಾ ಕಾಲಕ್ಕೆ ಅನುಗುಣವಾಗಿ ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರು ಇರುವ ಮತದಾರರ ಪಟ್ಟಿ ಸಲ್ಲಿಸಬೇಕು.
ಅದರಂತೆ ಇದೀಗ ಠಾಣೆಯಲ್ಲಿ ಎಫ ಐಆರ್ ಆಗಿರುವ ೧೫ ಆರೋಪಿಗಳ ಪೈಕಿ ಮೊದಲ ೬ ಆರೋಪಿಗಳು ತಮಗೆ ೭೨ ಚದರ ಮೀಟರ್ ನಿವೇಶನಕ್ಕೆ ಸಲ್ಲಿಸಿದ ಜೊತೆಗೆ ಮತದಾರರ ಪಟ್ಟಿಯಲ್ಲಿನ ತಮ್ಮ ಹೆಸರು ನಮೂದಿಸಿ, ಉಳಿದ ದಾಖಲೆಗಳ ಸಮೇತ ಅರ್ಜಿ ಕೊಟ್ಟಿದ್ದರು.
ಈ ವೇಳೆ ಪುನರ್ ವಸತಿ ಅಧಿಕಾರಿ ಹುದ್ದೆಯ ಪ್ರಭಾರದಲ್ಲಿ ಇದ್ದ ಪ್ರಶಾಂತ ಬಾರಿಗಿಡದ ಅವರು ದಾಖಲೆಗಳ ಪರಿಶೀಲನೆ ವೇಳೆ ಮತದಾರರ ಪಟ್ಟಿ ಪರಿಶೀಲಿಸಲು ಬಾಗಲಕೋಟೆ ತಹಸೀಲ್ದಾರ್ ಪಟ್ಟಿಯಲ್ಲಿ ತಾಳೆಹಾಕಿದಾಗ ನಕಲಿ ದಾಖಲೆ ಸೃಷ್ಟಿ ಬೆಳಕಿಗೆ ಬಂದಿದೆ. ಅರ್ಜಿದಾರರು ಸಲ್ಲಿಸಿದ್ದ ಮತದಾರರ ಪಟ್ಟಿಯಲ್ಲಿನ ನಂಬರ್ ಗಳು ಹಾಗೂ ತಹಸೀಲ್ದಾರ್ ಕಚೇರಿಯಿಂದ ತಂದಿದ್ದ ಅಸಲಿ ಮತದಾರರ ಮಟ್ಟಿಗೂ ತಾಳೆ ಆಗಿರದೇ ವ್ಯತ್ಯಾಸ ಆಗಿದ್ದು, ಮೂಲ ಪಟ್ಟಿಯಲ್ಲಿ ಇದ್ದ ಹೆಸರುಗಳು ಬೇರೆ ಆದರೆ, ನಿವೇಶನಕ್ಕೆ ಅರ್ಜಿ ಸಲ್ಲಿಸಿದ್ದ ಮತದಾರರ ಪಟ್ಟಿಯಲ್ಲಿನ ಹೆಸರು ಬೇರೆ ಬೇರೆ ಇರುವುದು ಕಂಡು ಬಂದಿದೆ.
ಅಷ್ಟೆ ಅಲ್ಲದೇ ನಕಲಿ ಮತದಾರರ ಪಟ್ಟಿ ಸಲ್ಲಿಸಿ ನಿವೇಶನ ಪಡೆಯಲು ಅರ್ಜಿ ಸಲ್ಲಿಸಿದ್ದರೂ ಇವರಿಗೆ ನಿವೇಶನ ಹಂಚಿಕೆ ಮಾಡುವಂತೆ ಎ-ïಐಆರ್ ನಲ್ಲಿ ಇರುವ ಆರೋಪಿ ಸಂಖ್ಯೆ ೭ ರಿಂದ ೧೫ ರವರೆಗೆ ಇರುವವರು ಅಽಕಾರಿಗಳ ಮೇಲೆ ನಿರಂತರ ಒತ್ತಡ ಹಾಕುತ್ತಿದ್ದರು. ಹೀಗಾಗಿ ಇದು ವ್ಯವಸ್ಥಿತವಾಗಿ ನಕಲಿ ದಾಖಲೆ ಸೃಷ್ಟಿಸಿ ನಿವೇಶನ ದೋಚುವ ಪ್ರಯತ್ನ ಎನ್ನುವುದು ಮನಗಂಡ ಪುನರ್ ವಸತಿ ಅಧಿಕಾರಿ ಅಕ್ಟೋಬರ್ ೧ ರಂದು ನವನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ನಿವೇಶನ ಪಡೆಯಲು ನಕಲಿ ಮತದಾರರ ಪಟ್ಟಿಯಲ್ಲಿ ತಮ್ಮ ಸೇರಿಸಿ ಅರ್ಜಿ ಸಲ್ಲಿಸಿದ್ದ ಆರೋಪಿಗಳಾದ ಯಂಕಪ್ಪ ಮೆತ್ತಿನ, ಗಂಗವ್ವ ಮೆತ್ತಿನ, ಲಕ್ಷ್ಮಣ ಬಿಲ್ಲನವರ, ಗೀತಾ ಗುಳೇದ, ಗಿರಿಜಾ ಗುಳೇದ, ಜಗದೀಶ್ ಟ್ಯಾಪಿ ಈ ಆರು ಜನರ ವಿರುದ್ದ ಎಫಐಆರ್ ಆಗಿದೆ. ಉಳಿದಂತೆ ಮೆಹಬೂಬ ಬೇಪಾರಿ, ಅರುಣ ಅಂಬೋರೆ, ಮೆಹಬೂಬ ಜಮಖಂಡಿ, ತೌಶಿಪ್ ಬಾಗಲವಾಡಿ, ಅಬ್ದುಲ್‌ಮಝೀದ್ ಬಂಕೂರ, ಸಂತೋಷ ಕಪಾಟೆ, ಸತೀಶ ಗಾಯಕವಾಡ, ಮುರಿಗೆಪ್ಪ ಸೋರಗಾವಿ, ಸಲೀಮ್ ಶೇಖ್ ಇರುವ ವಿರುದ್ಧ ಅರ್ಜಿದಾರರು ಸಲ್ಲಿಸಿರುವ ಅರ್ಜಿಯನ್ನು ಕೂಡಲೇ ಇತ್ಯರ್ಥ ಪಡಿಸುವಂತೆ ಒತ್ತಡ ಹೇರಿದ ಆರೋಪಿಗಳಾಗಿದ್ದಾರೆ ಎಂದು ಎಫಐಆರ್‌ನಲ್ಲಿ ದೂರು ದಾಖಲಿಸಲಾಗಿದೆ.
ಎಸ್ಪಿ ಅಮರನಾಥ ರೆಡ್ಡಿ ಮಾತನಾಡಿ, ಬಿಟಿಡಿಎಗೆ ಖೊಟ್ಟಿ ಮತದಾರರ ಪಟ್ಟಿ ಸಲ್ಲಿಸಿ ನಿವೇಶನ ಪಡೆಯುವ ಯತ್ನ ಮಾಡಿದ್ದರ ಬಗ್ಗೆ ನವನಗರ ಠಾಣೆಯಲ್ಲಿ ೧೫ ಜನರ ವಿರುದ್ಧ ದೂರು ದಾಖಲಾಗಿದೆ. ಈ ಬಗ್ಗೆ ಇಬ್ಬರು ಆರೋಪಿಗಳನ್ನು ಕರೆಸಿ ವಿಚಾರಣೆ ನಡೆಸಿದ್ದು, ತನಿಖೆ ಮುಂದುವರೆದಿದೆ. ಪ್ರಕರಣದಲ್ಲಿ ಆರೋಪಿಗಳ ಜೊತೆಗೆ ಯಾರಾದರೂ ಅಽಕಾರಿಗಳು, ಸಿಬ್ಬಂದಿ ಭಾಗಿಯಾಗಿದ್ದು ಕಂಡು ಬಂದಲ್ಲಿ ಅವರ ವಿರುದ್ಧವೂ ಕ್ರಮ ಜರುಗಿಸಲಾಗುವುದು. ಸದ್ಯ ತನಿಖೆ ನಡೆದಿದ್ದು, ಇದಕ್ಕಾಗಿ ವಿಶೇಷ ತನಿಖಾಧಿಕಾರಿ ನೇಮಕ ಮಾಡಲಾಗುವುದು ಎಂದು ತಿಳಿಸಿದ್ದಾರೆ.