ಸೈಕಲ್‍ನಲ್ಲೇ 12 ಜ್ಯೋತಿರ್ಲಿಂಗ ಯಾತ್ರೆ

Cycle Yatri Sanman Photo
Published on

ಬೀದರ್: ಇಲ್ಲಿಯ ವಿನಯ ಜಿ. ಮಠ ಸೈಕಲ್‍ನಲ್ಲೇ 12 ಜ್ಯೋತಿರ್ಲಿಂಗಗಳ ಯಾತ್ರೆ ಯಶಸ್ವಿಯಾಗಿ ಮುಗಿಸಿ ತವರಿಗೆ ಮರಳಿದ್ದಾರೆ.
ಗಣ್ಯರು, ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಸ್ನೇಹಿತರು ಹಾಗೂ ಬಂಧುಗಳು ಅವರನ್ನು ಸ್ವಾಗತಿಸಿ ಬರಮಾಡಿಕೊಂಡರು.
ವಿನಯ ಮಠ ಸೈಕಲ್ ಮೇಲೆ 129 ದಿನಗಳಲ್ಲಿ 12,600 ಕಿ.ಮೀ. ಕ್ರಮಿಸಿ, 12 ಜ್ಯೋರ್ತಿಲಿಂಗಗಳ ದರ್ಶನ ಪಡೆದಿದ್ದಾರೆ ಎಂದು ನಗರದಲ್ಲಿ ಅವರನ್ನು ಸನ್ಮಾನಿಸಿದ ಕೇಂದ್ರ ಸರ್ಕಾರದ ರಾಜ್ಯ ಅಭಿವೃದ್ಧಿ, ಸಮನ್ವಯ ಹಾಗೂ ಮೇಲುಸ್ತುವಾರಿ ಸಮಿತಿಯ ಸದಸ್ಯ ಶಿವಯ್ಯ ಸ್ವಾಮಿ ಹೇಳಿದರು.
ಕೇದಾರನಾಥ ದೇಗುಲಕ್ಕೆ ನಡೆದುಕೊಂಡು ಹೋಗುವುದೇ ಕಷ್ಟಕರ. ಅಂತಹದ್ದರಲ್ಲಿ ವಿನಯ ಅವರು ಸೈಕಲ್‍ನಲ್ಲೇ ದುರ್ಗಮ ಹಾದಿ ಕ್ರಮಿಸಿ, ಬೆಟ್ಟ, ಪರ್ವತಗಳನ್ನು ಹತ್ತಿ ಸಾಹಸ ಪ್ರದರ್ಶಿಸಿದ್ದಾರೆ ಎಂದರು.
ಬಿಸಿಲು, ಚಳಿ, ಮಳೆ ಎನ್ನದೆ ಏಕಾಂಗಿಯಾಗಿ ದೇಶದ ದ್ವಾದಶ ಜ್ಯೋತಿರ್ಲಿಂಗ ಯಾತ್ರೆ ಪೂರ್ಣಗೊಳಿಸಿದ್ದಾರೆ. ಯಾತ್ರೆ ವೇಳೆ ಜನರಲ್ಲಿ ಆಧಾತ್ಮಿಕ ಜಾಗೃತಿ ಮೂಡಿಸಿದ್ದಾರೆ. ಮಾದಕ ವಸ್ತುಗಳ ದುಷ್ಪರಿಣಾಮಗಳ ಅರಿವನ್ನೂ ಮೂಡಿಸಿದ್ದಾರೆ ಎಂದು ತಿಳಿಸಿದರು.
ವ್ಯಸನಮುಕ್ತ ರಾಷ್ಟ್ರ ನಿರ್ಮಾಣದ ಸಂಕಲ್ಪದೊಂದಿಗೆ ಯಾತ್ರೆ ಕೈಗೊಳ್ಳುವ ಮೂಲಕ ವಿನಯ ಯುವಕರಿಗೆ ಮಾದರಿಯಾಗಿದ್ದಾರೆ. ಸಮಾಜದ ಒಳಿತಿಗಾಗಿ ಯುವಕರು ರಚನಾತ್ಮಕ ಕಾರ್ಯಗಳನ್ನು ಕೈಗೊಳ್ಳಬೇಕು ಎಂದು ಹೇಳಿದರು.
ವಿನಯ ಮಠ ಅವರು ತಮ್ಮ ಸೈಕಲ್ ಯಾತ್ರೆಯ ಅನುಭವ ಹಂಚಿಕೊಂಡರು.
ನೆಹರೂ ಯುವ ಕೇಂದ್ರದ ಜಿಲ್ಲಾ ಯುವ ಅಧಿಕಾರಿ ಮಯೂರಕುಮಾರ ಗೋರಮೆ, ರಾಷ್ಟ್ರೀಯ ಯುವ ಪ್ರಶಸ್ತಿ ಪುರಸ್ಕøತ ಓಂಪ್ರಕಾಶ ರೊಟ್ಟೆ, ಗಾದಗಿ ಗ್ರಾಮ ಪಂಚಾಯಿತಿ ಸದಸ್ಯ ವರದಯ್ಯ ಸ್ವಾಮಿ, ಪ್ರವೀಣ ಸ್ವಾಮಿ, ಘನಲಿಂಗಯ್ಯ ಮಠ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net