

ಚಿಕ್ಕಮಗಳೂರು: ಸೈಕಲ್ ತುಳಿ, ಜನರ ಸಮಸ್ಯೆ ತಿಳಿ. ಇದು ಚಿಕ್ಕಮಗಳೂರು ಶಾಸಕ ಎಚ್.ಡಿ.ತಮ್ಮಯ್ಯ ಅವರ ವಿನೂತನ ಕಾರ್ಯಕ್ರಮ. ನಗರದ ವಿವಿಧ ವಾರ್ಡ್ಗಳಿಗೆ ಸೈಕಲ್‌ನಲ್ಲಿಯೇ ಅಧಿಕಾರಿಗಳ ಜೊತೆ ತೆರಳಿದ ಶಾಸಕ ಜನರ ಮನೆ ಮನೆಗೆ ಭೇಟಿ ನೀಡಿ ಅವರ ಸಮಸ್ಯೆಗಳನ್ನು ಆಲಿಸುವ ಮೂಲಕ ಗಮನ ಸೆಳೆದರು.
ಶುಕ್ರವಾರ ಬೆಳಗ್ಗೆ ಏಳೂವರೆ ಗಂಟೆಗಾಗಲೇ ಸೈಕಲ್ ಏರಿದ ಶಾಸಕ ಎಚ್.ಡಿ.ತಮ್ಮಯ್ಯ, ನಗರದ ಮಲ್ಲಂದೂರು ರಸ್ತೆ, ಓಲ್ಡ್ ಬಾರ್‌ಲೈನ್ ರಸ್ತೆ, ವಿಜಯಪುರ ಬಡಾವಣೆ, ಹನುಮಂತಪ್ಪ ವೃತ್ತ ಹೀಗೆ ನಗರದ ಹಲವು ಬಡಾವಣೆಗಳಲ್ಲಿ ಸೈಕಲ್‌ನಲ್ಲಿಯೇ ಸಂಚಾರ ನಡೆಸುವ ಮೂಲಕ ಜನರ ಸಮಸ್ಯೆ ಆಲಿಸಿದರು. ಈ ವೇಳೆ ಕೆಲ ಸಮಸ್ಯೆಗಳಿಗೆ ಸ್ಥಳದಲ್ಲೇ ಪರಿಹಾರ ಸೂಚಿಸಿದರೆ, ಇನ್ನೂ ಕೆಲ ಸಮಸ್ಯೆಗಳನ್ನು ಶೀಘ್ರದಲ್ಲೇ ಪರಿಹರಿಸುವ ಭರವಸೆಯನ್ನು ಸಾರ್ವಜನಿಕರಿಗೆ ನೀಡಿದರು.
ಶಾಸಕರು ಅಧಿಕಾರಿಗಳೊಂದಿಗೆ ಬಡಾವಣೆಗಳಿಗೆ ಆಗಮಿಸಿದಾಗ ಜನ ಮನೆಯಿಂದ ಬಂದು ಶಾಸಕರ ಬಳಿ ತಮ್ಮ ಬಡಾವಣೆಯ ಸಮಸ್ಯೆಗಳನ್ನು ವಿವರಿಸುತ್ತಿದ್ದ ದೃಷ್ಯ ಸಾಮಾನ್ಯವಾಗಿತ್ತು. ಸೈಕಲ್ ಮೇಲೆಯೇ ಕುಳಿತು ಜನರ ಅಹವಾಲು ಆಲಿಸಿದ ಎಚ್.ಡಿ.ತಮ್ಮಯ್ಯ ಅಧಿಕಾರಿಗಳಿಗೆ ಸಮಸ್ಯೆಗಳ ಬಗ್ಗೆ ನೋಟ್ ಮಾಡಿಕೊಳ್ಳುವುದಾಗಿ ಹೇಳುತ್ತಿದ್ದುದಲ್ಲದೆ, ಸಣ್ಣ ಪುಟ್ಟ ಸಮಸ್ಯೆಗಳನ್ನು ಆ ಕ್ಷಣವೇ ಪರಿಹರಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಎಚ್.ಡಿ.ತಮ್ಮಯ್ಯ, ಮಳೆಯಿಂದಾಗಿ ಹದಗೆಟ್ಟಿರುವ ನಗರದ ರಸ್ತೆಗಳ ಅಭಿವೃದ್ಧಿಗೆ ೨೭.೫ ಕೋಟಿ ರೂ.ಗಳನ್ನು ರಾಜ್ಯ ಸರ್ಕಾರದಿಂದ ಒದಗಿಸಲಾಗಿದ್ದು, ಮಳೆ ನಿಂತ ಕೂಡಲೇ ರಸ್ತೆಗಳನ್ನು ಅಭಿವೃದ್ಧಿಪಡಿಸುವ ಕಾಮಗಾರಿ ಕೈಗೊಳ್ಳುವುದಾಗಿ ಮಾಹಿತಿ ನೀಡಿದರು.
ಕಳೆದ ವರ್ಷ ಹಾಗೂ ಈ ವರ್ಷ ಹೆಚ್ಚು ಮಳೆಯಾಗಿರುವ ಹಿನ್ನೆಲೆಯಲ್ಲಿ ರಸ್ತೆಗಳು ಹೆಚ್ಚಾಗಿ ಗುಂಡಿ ಬಿದ್ದಿವೆ. ಜೊತೆಗೆ ಯುಜಿಡಿ ಹಾಗೂ ಅಮೃತ್ ಯೋಜನೆಯ ಕಾಮಗಾರಿಗಳಿಂದ ಕೂಡ ರಸ್ತೆಗಳು ಹಾನಿಗೊಳಗಾಗಿವೆ ಎಂಬ ದೂರುಗಳು ಸಾರ್ವಜನಿಕರಿಂದ ಕೇಳಿಬಂದಿವೆ. ರಸ್ತೆಗಳನ್ನು ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಮುಖ್ಯಮಂತ್ರಿಗಳು, ನಗರಾಭಿವೃದ್ಧಿ ಸಚಿವರು ಹಾಗೂ ಪೌರಾಡಳಿತ ಸಚಿವರನ್ನು ಭೇಟಿ ಮಾಡಿ ಕೋರಿಕೆ ಸಲ್ಲಿಸಿದ ಮೇರೆಗೆ ನಗರಸಭೆಗೆ ವಿಶೇಷ ಅನುದಾನವನ್ನು ಒದಗಿಸಿದ್ದಾರೆ. ಎಸ್‌ಎಫ್‌ಸಿ ಯೋಜನೆಯಡಿ ೧೦ ಕೋಟಿ ರೂ. ಬಿಡುಗಡೆಯಾಗಿದ್ದು, ಕಾಮಗಾರಿ ನಿರ್ವಹಿಸಲು ಈಗಾಗಲೇ ಕಾರ್ಯಾದೇಶ ನೀಡಲಾಗಿದೆ. ವಿಶೇಷ ಅನುದಾನದಲ್ಲಿ ಸಹ ೧೨.೫ ಕೋಟಿ ರೂ.ಗಳನ್ನು ಹಾಗೂ ಅಲ್ಪಸಂಖ್ಯಾತರು ಹೆಚ್ಚಿನ ಸಂಖ್ಯೆಯಲ್ಲಿ ವಾಸಿಸುವ ಪ್ರದೇಶಗಳ ರಸ್ತೆ ಅಭಿವೃದ್ಧಿಗೆ ಅಲ್ಪಸಂಖ್ಯಾತರ ಇಲಾಖೆಯಿಂದ ೫ ಕೋಟಿ ರೂ.ಗಳನ್ನು ಒದಗಿಸಲಾಗಿದೆ. ಒಟ್ಟು ೨೭.೫ ಕೋಟಿ ರೂ. ಲಭ್ಯವಿದ್ದು, ಈ ಮೊತ್ತವನ್ನು ವಿನಿಯೋಗಿಸಿ ರಸ್ತೆಗಳನ್ನು ಅಭಿವೃದ್ಧಿಪಡಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಪಂಚ ಗ್ಯಾರಂಟಿ ಯೋಜನೆಗಳು ಫಲಾನುಭವಿಗಳಿಗೆ ಸಮರ್ಪಕವಾಗಿ ತಲುಪುತ್ತಿರುವ ಬಗ್ಗೆ ಗಮನ ಹರಿಸಲು ಜಿಲ್ಲಾ ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರದಿಂದ ಸ್ಪಂದಿಸುವ ಕಾರ್ಯವೂ ಸೈಕಲ್ ತುಳಿ ಸಮಸ್ಯೆ ತಿಳಿ ಕಾರ್ಯಕ್ರಮದ ಜೊತೆಯಲ್ಲೇ ನಡೆಯಲಿದೆ. ಇದರ ಜೊತೆಗೆ ಪರಿಸರದ ಬಗ್ಗೆ ಹಾಗೂ ಸ್ವಚ್ಛತೆ ಬಗ್ಗೆ, ಚಿಕ್ಕಮಗಳೂರನ್ನು ಪ್ಲಾಸ್ಟಿಕ್ ಮುಕ್ತ ನಗರವನ್ನಾಗಿ ರೂಪಿಸಬೇಕೆಂಬ ಬಗ್ಗೆ ಅರಿವು ಮೂಡಿಸಲು ಸೈಕಲ್‌ನಲ್ಲಿ ನಗರ ಪ್ರದಕ್ಷಿಣೆ ಕೈಗೊಂಡಿರುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ನಗರಸಭಾಧ್ಯಕ್ಷೆ ಶೀಲಾ ದಿನೇಶ್, ಉಪಾಧ್ಯಕ್ಷೆ ಲಲಿತಾ ನಾಯ್ಕ, ನಗರಸಭೆ ಮಾಜಿ ಅಧ್ಯಕ್ಷ ವರಸಿದ್ಧಿ ವೇಣುಗೋಪಾಲ್, ಸದಸ್ಯರಾದ ಶಾದಾಬ್ ಆಲಂಖಾನ್, ಲಕ್ಷö್ಮಣ್, ಸಿಡಿಎ ಅಧ್ಯಕ್ಷ ನಯಾಜ್ ಅಹಮ್ಮದ್, ಜಿಲ್ಲಾ ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಎಂ.ಸಿ.ಶಿವಾನAದಸ್ವಾಮಿ, ತಾಲೂಕು ಸಮಿತಿ ಅಧ್ಯಕ್ಷ ಮಲ್ಲೇಶ್‌ಸ್ವಾಮಿ, ಸಿಡಿಎ ಆಯುಕ್ತೆ ನಾಗರತ್ನ, ತಹಸೀಲ್ದಾರ್ ರೇಷ್ಮಾಶೆಟ್ಟಿ, ನಗರಸಭೆ ಆಯುಕ್ತ ಬಿ.ಸಿ.ಬಸವರಾಜು ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.
ನಿಮ್ಮ ಮನೆ ಬಾಗಿಲಿಗೆ ನಿಮ್ಮ ಶಾಸಕ
ಶಾಸಕ ಎಚ್.ಡಿ.ತಮ್ಮಯ್ಯ ಸೈಕಲ್ ತುಳಿ, ಸಮಸ್ಯೆ ತಿಳಿ ಎಂಬ ಘೋಷ ವಾಕ್ಯದೊಂದಿಗೆ ಕೈಗೊಂಡಿರುವ ನಿಮ್ಮ ಮನೆ ಬಾಗಿಲಿಗೆ ನಿಮ್ಮ ಶಾಸಕ ಎಂಬ ವಿನೂತನ ಕಾರ್ಯಕ್ರಮಕ್ಕೆ ನಗರದ ಇಂಡಿಯನ್ ಐಸ್‌ಕ್ರೀಂ ಪಾರ್ಲರ್ ಬಳಿ ಪರಿಸರವಾದಿ ಸ.ಗಿರಿಜಾಶಂಕರ್ ಚಾಲನೆ ನೀಡಿದರು.
ಈ ವೇಳೆ ಮಾತನಾಡಿದ ಅವರು, ಈ ರೀತಿಯ ಕಾರ್ಯಕ್ರಮಗಳನ್ನು ಕೈಗೊಂಡಾಗ ಗುಂಡಿಮಯ ರಸ್ತೆಗಳು, ಚರಂಡಿಗಳ ಸಮಸ್ಯೆ ಸೇರಿದಂತೆ ಆಯಾ ಬಡಾವಣೆಗಳ ಜನರ ಸಮಸ್ಯೆಗಳು ಏನು ಎಂಬುದನ್ನು ಜನಪ್ರತಿನಿಧಿಗಳು ಅರಿಯಲು ಸಾಧ್ಯವಾಗುತ್ತದೆ. ನಗರದ ಮಧುವನ ಬಡಾವಣೆಯಲ್ಲಿ ಎರಡು ಉದ್ಯಾನಗಳನ್ನು ಅಭಿವೃದ್ಧಿಪಡಿಸುವ ಕಾರ್ಯ ನಡೆಯಬೇಕಿದೆ. ಈಗಾಗಲೇ ಸೌರ ದೀಪಗಳನ್ನು ಅಳವಡಿಸಿಕೊಳ್ಳಲಾಗಿದ್ದು, ಪ್ರತೀ ವರ್ಷ ಕಳೆ ಕೀಳುವ ಕೆಲಸ ಬಡಾವಣೆಯ ನಿವಾಸಿಗಳಿಂದಲೇ ನಡೆಯುತ್ತಿದೆ. ಇಲ್ಲಿ ಸಣ್ಣ ನೀರಾವರಿ ಇಲಾಖೆಗೆ ಸಂಬAಧಿಸಿದ ದೊಡ್ಡ ಕಾಲುವೆಯಿಂದ ಕಳೆಯನ್ನು ತೆರವುಗೊಳಿಸದೆ ಅದರಿಂದಾಗಿಯೇ ಬಹಳಷ್ಟು ಕಾಯಿಲೆಗಳಿಗೆ, ಸೊಳ್ಳೆ ಕಾಟಕ್ಕೆ ಕಾರಣವಾಗುತ್ತಿದೆ. ಕಸ ಎಸೆಯಲು ಕೂಡ ಇದೇ ಕಾಲುವೆ ಬಳಕೆಯಾಗುತ್ತಿದೆ. ಸಣ್ಣ ನೀರಾವರಿ ಇಲಾಖೆ ಈ ಕಾಲುವೆಯನ್ನು ಸುವ್ಯವಸ್ಥಿತಗೊಳಿಸಲು ಕ್ರಮ ಕೈಗೊಳ್ಳಬೇಕಿದೆ ಎಂದರು.
ಮಧುವನ ಬಡಾವಣೆಯಲ್ಲಿ ಆಗಿಂದಾಗ್ಗೆ ವಿದ್ಯುತ್ ನಿಲುಗಡೆಯಾಗುತ್ತಿದೆ. ಮೆಸ್ಕಾಂ ಕಚೇರಿಗೆ ಕರೆ ಮಾಡಿದರೆ ಅವರು ಕಾರಣವನ್ನೇ ನೀಡುತ್ತಿಲ್ಲ. ಮೆಸ್ಕಾಂನವರು ವರ್ಷಕ್ಕೆ ಎರಡು ಬಾರಿಯಾದರೂ ಗ್ರಾಹಕರೊಂದಿಗೆ ಮುಖಾಮುಖಿ ಕಾರ್ಯಕ್ರಮ ನಡೆಸುವುದು ಸೂಕ್ತ. ಆಗ ಸಮಸ್ಯೆಗಳನ್ನು ಹೇಳಿಕೊಳ್ಳಬಹುದು. ಮೆಸ್ಕಾಂ ಗ್ರಾಹಕ ಸ್ನೇಹಿಯಾಗಿ ಸ್ಪಂದಿಸುತ್ತಿಲ್ಲ. ಬಿಲ್ ಪಾವತಿಸದಿದ್ದರೆ ಸಂಪರ್ಕ ಸ್ಥಗಿತಗೊಳಿಸಲು ಮಾತ್ರ ಬರುತ್ತಿದ್ದಾರೆ ಎಂದು ಆರೋಪಿಸಿದರು.
ಸಾರ್ವಜನಿಕ ಇಲಾಖೆಗಳಲ್ಲಿ ಜನರಿಗೆ ಸ್ಪಂದಿಸುವ ಕಾರ್ಯ ನಡೆಯಬೇಕಿದೆ. ನಗರಸಭೆಯಿಂದ ವಾರಕ್ಕೆರಡು ಬಾರಿಯಾದರೂ ಕಸ ಗುಡಿಸುವ ಕಾರ್ಯ ನಡೆಯಬೇಕು. ಚರಂಡಿಗಳನ್ನು ಸುಸ್ಥಿತಿಗೊಳಿಸುವ ಕೆಲಸ ಮಾಡಬೇಕಿದೆ. ಪೊಲೀಸ್ ಗಸ್ತು ವ್ಯವಸ್ಥೆ ಕಲ್ಪಿಸಬೇಕು ಎಂದು ಗಮನ ಸೆಳೆದರು.
ಸೈಕಲ್‌ನಲ್ಲಿ ನಗರದ ವಿವಿಧ ಬಡಾವಣೆಗಳಲ್ಲಿ ಓಡಾಟ ನಡೆಸಿದಾಗ ಅಲ್ಲಿನ ಸಮಸ್ಯೆಗಳನ್ನು ನಾವು ಅರಿಯಲು ಸಾಧ್ಯ. ಜೊತೆಗೆ ನಾವು ಸೈಕಲ್‌ನಲ್ಲಿ ಹೋದಾಗ ಜನರನ್ನು ಅವರ ಮನೆ ಎದುರೇ ಭೇಟಿ ಮಾಡಿ ಅಹವಾಲು ಆಲಿಸಲು ಸಾಧ್ಯವಾಗುತ್ತದೆ. ಹೀಗಾಗಿಯೇ ವಿನೂತನ ಕಾರ್ಯಕ್ರಮ ಹಮ್ಮಿಕೊಂಡಿz್ದೆÃನೆ. ಈ ಕಾರ್ಯಕ್ರಮವನ್ನು ಪ್ರತಿ ತಿಂಗಳೂ ನಡೆಸಿ ಜನರ ಸಮಸ್ಯೆ ಆಲಿಸುತ್ತೇನೆ. ಜೊತೆಗೆ ಅಧಿಕಾರಿಗಳ ಮೂಲಕ ಸಮಸ್ಯೆ ಪರಿಹರಿಸಲು ಕ್ರಮ ಕೈಗೊಳ್ಳುತ್ತೇನೆ.
ಎಚ್.ಡಿ.ತಮ್ಮಯ್ಯ, ಚಿಕ್ಕಮಗಳೂರು ಶಾಸಕ