ಸೇವೆಯಲ್ಲಿ ಸ್ವಾರ್ಥತೆ ಬರಬಾರದು

court
Published on

ಬೀದರ್: ಸೇವೆಯು ನಿಸ್ವಾರ್ಥತೆಯಿಂದ ಮಾಡುವ ಕೆಲಸ. ಸೇವೆಯಲ್ಲಿ ಯಾವತ್ತೂ ಸ್ವಾರ್ಥ, ದ್ವೇಷ, ಅಸೂಯೆಯ ಕರಿನೆರಳು ಇರಬಾರದು ಎಂದು ಜಿಲ್ಲಾ ಪ್ರಧಾನ ನ್ಯಾಯಾಧೀಶರೂ ಆದ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷ ಕಾಡಲೂರು ಸತ್ಯನಾರಾಯಣಾಚಾರ್ಯ ಹೇಳಿದರು.

ನಗರದ ಬಾಲಭವನದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ತಾಲೂಕಾ ಕಾನೂನು ಸೇವಾ ಸಮಿತಿಗಳ ಅರೆಕಾಲಿಕ ಸ್ವಯಂ ಸೇವಕರ ಅಭಿಶಿಕ್ಷಣ ತರಬೇತಿ ಉದ್ಘಾಟಿಸಿ ಮಾತನಾಡಿ, ಮಗುವಿಗೆ ತಾಯಿ ಹೇಗೆ ನಿಸ್ವಾರ್ಥತೆಯಿಂದ ಉಪಚಾರ ಮತ್ತು ಸೇವೆ ಮಾಡುತ್ತಾಳೋ ಅದೇ ರೀತಿ ಸ್ವಯಂಸೇವಕರು ಸಹ ಯಾವುದೇ ಫಲಾಪೇಕ್ಷೆ ಇಲ್ಲದೆ ಸಮಾಜದ ಸೇವೆಯಲ್ಲಿ ತೊಡಗಬೇಕು ಎಂದು ಸಲಹೆ ನೀಡಿದರು.

ಎರಡನೇ ಹೆಚ್ಚುವರಿ ಹಿರಿಯ ಸಿವಿಲ್ ನ್ಯಾಯಾಧೀಶ ಯಮನಪ್ಪ ಮಾತನಾಡಿ, ಸಂವಿಧಾನದ ಮೂಲಭೂತ ಹಕ್ಕು ಮತ್ತು ಕರ್ತವ್ಯ ಕುರಿತು ಜನತೆಗೆ ಅರಿವು-ನೆರವು ನೀಡುವ ಕಾರ್ಯ ಪ್ರಾಮಾಣಿಕವಾಗಿ ಸ್ವಯಂ ಸೇವಕರು ಮಾಡಬೇಕು. ಸಂವಿಧಾನದ ಆಶಯಗಳನ್ನು ಈಡೇರಿಸುವ ಕಾರ್ಯ ಮನೆ, ಮನಗಳಿಗೆ ತಲುಪುವ ನಿಟ್ಟಿನಲ್ಲಿ ತರಬೇತಿ ಹಮ್ಮಿಕೊಳ್ಳಲಾಗಿದೆ ಎಂದರು.

ಜಿಲ್ಲಾ ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿ ಧನರಾಜ ಬಿರಾದಾರ ಅಧ್ಯಕ್ಷತೆ ವಹಿಸಿದ್ದರು. ವಿವಿಧ ಶ್ರೇಣಿ ನ್ಯಾಯಾಲಯಗಳ ನ್ಯಾಯಾಧೀಶರಾದ ರಾಧಾ ಎಚ್.ಆರ್, ಝರಿನಾ, ಟಿ.ಪಿ. ಸಿದ್ರಾಮ, ಅಪರ್ಣಾ, ವಿನಾಯಕ ಒನಖಿಂಡೆ, ಜಿಲ್ಲಾ ವಕೀಲರ ಸಂಘದ ಜಂಟಿ ಕಾರ್ಯದರ್ಶಿ ಅಂಬಾದಾಸ, ಶೀಲಾಬಾಯಿ, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಗೌರಿಶಂಕರ ಪರ್ತಾಪುರೆ, ಶಂಕ್ರೆಪ್ಪ ಜನಕಟ್ಟಿ, ವಿಜಯಕುಮಾರ ಪಾಂಚಾಳ ಇತರರಿದ್ದರು.

ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾಡಳಿತ, ಜಿಪಂ, ಜಿಲ್ಲಾ ವಕೀಲರ ಸಂಘ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ವತಿಯಿಂದ ಕಾರ್ಯಕ್ರಮ ಸಂಘಟಿಸಲಾಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net