

ಪಿರಿಯಾಪಟ್ಟಣ: ಸಾರ್ವಜನಿಕ ಆಸ್ಪತ್ರೆ ಸೇವೆಯಲ್ಲಿ ಲೋಪವಾದರೆ ಅಧಿಕಾರಿಗಳು, ವೈದ್ಯರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ಪ್ರಸಾದ್ ಎಚ್ಚರಿಸಿದರು.
ಸಾರ್ವಜನಿಕ ಆಸ್ಪತ್ರೆಯಲ್ಲಿ ಹೆರಿಗೆ, ಮತ್ತಿತರರ ಶಸ್ತ್ರಚಿಕಿತ್ಸೆಗಳಿಗೆ ಹಣ ಪಡೆಯಲಾಗುತ್ತಿದೆ ಎಂಬ ವಿಡಿಯೋ ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ ಹಿನ್ನೆಲೆಯಲ್ಲಿ ಪಿರಿಯಾಪಟ್ಟಣ ಸಾರ್ವಜನಿಕ ಆಸ್ಪತ್ರೆಗೆ ಬುಧವಾರ ಭೇಟಿ ನೀಡಿ ಪರಿಶೀಲನೆ ನಡೆಸಿ ಮಾತನಾಡಿದರು.
ಆಸ್ಪತ್ರೆಗೆ ಭೇಟಿ ನೀಡಿ ಖುದ್ದು ಪರಿಶೀಲನೆ ನಡೆಸಲಾಗುತ್ತಿದ್ದು, ಯಾವುದೇ ಸಾರ್ವಜನಿಕರು ದೂರು ಸಲ್ಲಿಸಿಲ್ಲ. ಆದರೂ ಈ ವಿಚಾರದ ಬಗ್ಗೆ ತನಿಖೆ ನಡೆಸಲಾಗುವುದು, ತಪ್ಪಿತಸ್ಥರು ಕಂಡುಬಂದಲ್ಲಿ ಶಿಸ್ತಕ್ರಮ ಜರುಗಿಸಲಾಗುವುದು ಎಂದರು.
ಡಯಾಲಿಸೀಸ್ ವಿಭಾಗದಲ್ಲಿ ಹೆಚ್ಚಿನ ರೋಗಿಗಳಿಗೆ ಆದ್ಯತೆ ನೀಡುವ ಸಂಬಂಧ ಶಾಸಕ ಕೆ.ಮಹದೇವ್ ಸದನದಲ್ಲಿ ಪ್ರಶ್ನಿಸಿದ್ದ ಹಿನ್ನೆಲೆಯಲ್ಲಿ ಒಂದು ಯಂತ್ರವನ್ನು ಹೆಚ್ಚಿಗೆ ಅಳವಡಿಸಿದ್ದು, ಮತ್ತೊಂದು ಯಂತ್ರ ನೀಡಲು ಕ್ರಮ ವಹಿಸಲಾಗುವುದು ಎಂದು ತಿಳಿಸಿದರು.
ಗರ್ಭಿಣಿಯರಿಗೆ ತಾಯಿ ಕಾರ್ಡ್ ಜೆರಾಕ್ಸ್ ನೀಡಿರುವುದು, ಸ್ಕಾೃನಿಂಗ್ ಸ್ಥಗಿತಗೊಳಿಸಿರುವುದು ಹಾಗೂ ಕ್ಯಾಂಟೀನ್ ಟೆಂಡರ್ ಕರೆಯುವ ವಿಚಾರ ಸೇರಿದಂತೆ ಹಲವು ವಿಷಯಗಳ ಬಗ್ಗೆ ಪ್ರಸ್ತಾಪಿಸಿ ಸೂಕ್ತ ಕ್ರಮ ವಹಿಸುವುದಾಗಿ ಭರವಸೆ ನೀಡಿದರು.
ತಾಲೂಕು ಆಡಳಿತಾಧಿಕಾರಿ ಡಾ.ದೇವಿಕಾ ಮಾತನಾಡಿ, ಆಸ್ಪತ್ರೆಯಲ್ಲಿ ಉತ್ತಮ ಸೇವೆ ಒದಗಿಸುತ್ತಿದ್ದು, ಹಿಂದಿಗಿಂತ ಹೆಚ್ಚು ಹೆರಿಗೆ, ಶಸ್ತ್ರಚಿಕಿತ್ಸೆಗಳು ನಡೆಯುತ್ತಿವೆ. ಆದರೂ ಆಸ್ಪತ್ರೆಯ ಬಗ್ಗೆ ಆರೋಪಗಳನ್ನು ಮಾಡಲಾಗುತ್ತಿದೆ ಎಂದು ದೂರಿದರು.
ಆರೋಗ್ಯರಕ್ಷಾ ಸಮಿತಿ ಮಾಜಿ ಸದಸ್ಯ ಮಹಮ್ಮದ್ ಶಫಿ ಮಾತನಾಡಿ, ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಅನೇಕ ಕೊರತೆಗಳ ನಡುವೆಯೆ ವೈದ್ಯರು ಉತ್ತಮ ಸೇವೆ ನೀಡುತ್ತಿದ್ದಾರೆ. ಹೆರಿಗೆ, ಕಣ್ಣಿನ ಶಸ್ತ್ರಚಿಕಿತ್ಸೆ, ಅನೇಕ ಸಣ್ಣಪುಟ್ಟ ಶಸ್ತ್ರಚಿಕಿತ್ಸೆಗಳನ್ನು ಇಲ್ಲಿಯೇ ಮಾಡಲಾಗುತ್ತಿದೆ. ಆದರೂ ಕೆಲವರು ಸಣ್ಣಪುಟ್ಟ ಲೋಪ ದೋಷಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕುವ ಮೂಲಕ ವೈದ್ಯರ ಸ್ಥೈರ್ಯ ಕುಗ್ಗಿಸುತ್ತಿದ್ದಾರೆ ಎಂದು ಆರೋಪಿಸಿದರು.
ಆಸ್ಪತ್ರೆಯಲ್ಲಿ ಸಾರ್ವಜನಿಕರಿಗೆ ತೊಂದರೆಯಾಗುತ್ತಿರುವ ಬಗ್ಗೆ ಆರೋಗ್ಯ ರಕ್ಷಾ ಸಮಿತಿ ಸದಸ್ಯ ಶುಭಾ ಜಿಲ್ಲಾ ಆರೋಗ್ಯಾಧಿಕಾರಿಗಳಿಗೆ ಲಿಖಿತ ಮನವಿ ನೀಡಿದರು. ಜಿಲ್ಲಾ ಮಟ್ಟದ ಅಧಿಕಾರಿಗಳಾದ ಡಾ.ರವಿ, ಡಾ.ಜಯಂತ್ ಮತ್ತಿತರರು ಹಾಜರಿದ್ದರು.