

ಸಿರಗುಪ್ಪ: ಭಕ್ತರು ಮಠಕ್ಕೆ ಹಲವು ರೀತಿಯಲ್ಲಿ ದಾನ ಮಾಡುತ್ತಾರೆ. ಆದರೆ ಮಠಕ್ಕೆ ಮಕ್ಕಳನ್ನು ದಾನ ಮಾಡುವ ಪರಂಪರೆ ಬಹಳ ವಿರಳ. ಪ್ರಭುದೇವರನ್ನು ಮಠಕ್ಕೆ ನೀಡಿದ ತಾಯಿ ಋಣ ತೀರಿಸಲು ಯಾರಿಗೂ ಸಾಧ್ಯವಿಲ್ಲ ಎಂದು ಕಾಶಿ ಪೀಠದ ಜಗದ್ಗುರು ಡಾ.ಮಲ್ಲಿಕಾರ್ಜುನ ವಿಶ್ವಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ತೆಕ್ಕಲಕೋಟೆ ಶ್ರೀ ಸದ್ಧರ್ಮ ಜ್ಞಾನ ಚೇತನ ಆವರಣದ ಹೊಸಮಠದಲ್ಲಿ ಕಂಬಾಳಿಮಠದ ವೀರಭದ್ರ ಶಿವಾಚಾರ್ಯ ಸ್ವಾಮೀಜಿ ಅವರ ಪಂಚಮ ದಿನದ ಗಣಾರಾಧನೆ ಕಾರ್ಯಕ್ರಮದಲ್ಲಿ ಧರ್ಮ ಸಂದೇಶ ನೀಡಿ ಭಾನುವಾರ ಮಾತನಾಡಿದರು. ಬಾಳೆಗೊನೆ ತಾನು ಬೆಳೆದು ಹೂ, ಹಣ್ಣು, ಕಾಯಿ ಬಿಟ್ಟು ಸಮಾಜಕ್ಕೆ ಕೊಡುತ್ತದೆ. ಸಾಯುವ ಮುನ್ನ ತನ್ನ ಮರಿಯನ್ನು ಬಿಟ್ಟು ಹೋಗುತ್ತದೆ. ಅದೇ ರೀತಿ ಗುರುಗಳು ಪರಂಪರೆ ಮುಂದುವರಿಸಲು ಶಿಷ್ಯ ಎಂಬ ಮರಿಯನ್ನು ಬಿಟ್ಟು ಹೋಗುತ್ತಾರೆ ಎಂದರು.
ಸೇವೆ ಹಾಗೂ ತ್ಯಾಗದ ಸಂಗಮ ಸ್ವಾಮೀಜಿ ಆಗಿದ್ದು, ಅವರಿಗೆ ಸಮಾಜವೇ ತಾಯಿ-ತಂದೆ -ಬಂಧುಗಳಾಗಿರುತ್ತಾರೆ. ಸ್ವಹಿತ ಕಡೆಗಣಿಸಿ ಸಮಾಜದ ಕಲ್ಯಾಣಕ್ಕಾಗಿ ಪರಿಶ್ರಮಿಸುತ್ತಾರೆ. ಭಕ್ತರು ನೂತನ ಪ್ರಭುದೇವ ಸ್ವಾಮೀಜಿ ಅವರನ್ನು ಭಕ್ತಿ-ಶ್ರದ್ಧೆಯಿಂದ ನೋಡಿಕೊಳ್ಳಬೇಕು ಎಂದು ಹೇಳಿದರು.
ಎಮ್ಮಿಗನೂರು ಹಂಪಿ ಸಾವಿರದೇವರ ಮಠದ ಶ್ರೀ ವಾಮದೇವ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಆಸೆ, ಆಮಿಷಗಳಿಗಾಗಿ ಧರ್ಮ ಒಡೆಯುವವರಿಗೆ ಇಂದಲ್ಲ ನಾಳೆ ತಕ್ಕಶಾಸ್ತಿ ಆಗುತ್ತದೆ. ಮಠದ ಪರಂಪರೆ ಹಾಗೂ ಗುರು ಪರಂಪರೆ ಎರಡೂ ಒಂದೇ. ಗುರುಗಳು ಸಮಾಜಕ್ಕಾಗಿ ಸಕಲವನ್ನು ತ್ಯಾಗ ಮಾಡಿ ಮಾರ್ಗದರ್ಶನ ಮಾಡುತ್ತಾರೆ ಎಂದು ಹೇಳಿದರು.
ರೌಡಕುಂದಿ ಸಂಸ್ಥಾನ ಮಠದ ಶಿವಯೋಗಿ ಶಿವಾಚಾರ್ಯರು, ಸಿರಗುಪ್ಪ ಬಸವ ಪೀಠದ ಬಸವಭೂಷಣ ಸ್ವಾಮೀಜಿ, ಶಾಂತಲಿಂಗ ಶಿವಾಚಾರ್ಯ ಸ್ವಾಮೀಜಿ ಆಶೀರ್ವಚನ ನೀಡಿದರು.
ಶ್ರೀ ವೀರಭದ್ರ ಶಿವಾಚಾರ್ಯ ಸ್ವಾಮೀಜಿ ಅವರ ಕರ್ತೃ ಗದ್ದುಗೆಗೆ ರುದ್ರಾಭಿಷೇಕ ಹಾಗೂ ವಿವಿಧ ಪೂಜೆಗಳನ್ನು ನೆರವೇರಿಸಲಾಯಿತು. ಮಠಕ್ಕೆ ಉತ್ತರಾಧಿಕಾರಿಯಾಗಿ ಪ್ರಭುದೇವರು ಕಂಬಾಳಿಮಠ ಅವರ ಹೆಸರು ಪ್ರಕಟಿಸಲಾಯಿತು. ಎಂಎಲ್ಸಿ ವೈ. ಎಂ.ಸತೀಶ, ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಚೊಕ್ಕ ಬಸವನಗೌಡ, ಕೊಪ್ಪಳದ ಮಾಜಿ ಸಂಸದ ಶಿವರಾಮಗೌಡ, ಮಾಜಿ ಶಾಸಕ ಚಂದ್ರಶೇಖರ ಸ್ವಾಮಿ, ಜ್ಞಾನಾನಂದ ಸ್ವಾಮಿ, ರಾಜಾ ಪಂಪನಗೌಡ, ಮೋಕ ಬಸವರಾಜ ಸ್ವಾಮಿ, ವಕೀಲ ಮಲ್ಲಿಕಾರ್ಜುನ ಸ್ವಾಮಿ ಇತರರಿದ್ದರು.