ಸೇವೆ ಕಾಯಮಾತಿಗಾಗಿ 6ರಿಂದ ನೀರು ಸರಬರಾಜು ಕಾರ್ಮಿಕರ ಅನಿರ್ದಿಷ್ಟಾವಧಿ ಧರಣಿ

IMG-20230303-WA0011.jpg
Published on

ದಾವಣಗೆರೆ: ಎಲ್ಲಾ ಗುತ್ತಿಗೆ, ಹೊರಗುತ್ತಿಗೆ ಅಡಿಯಲ್ಲಿ ದುಡಿಯುತ್ತಿರುವ ನೀರು ಸರಬರಾಜು ವಿಭಾಗದ ಕಾರ್ಮಿಕರು ಸೇವೆ ‌ಕಾಯಮಾತಿಗಾಗಿ ಒತ್ತಾಯಿಸಿ ಮಾರ್ಚ್ 6ರಿಂದ ನೀರು ಸರಬರಾಜು ಸ್ಥಗಿತಗೊಳಿಸಿ ಅನಿರ್ದಿಷ್ಟಾವಧಿ ಧರಣಿ ನಡೆಸಲಿದ್ದಾರೆ.

ದಾವಣಗೆರೆ ಮಹಾನಗರ ಪಾಲಿಕೆ ನೀರು ಸರಬರಾಜು ಮತ್ತು ಕಾವಲುಗಾರರ ಹೊರಗುತ್ತಿಗೆ ನೌಕರರ ಸಂಘದ ಅಧ್ಯಕ್ಷ ಎನ್.ನೀಲಗಿರಿಯಪ್ಪ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಪಾಲಿಕೆಯಲ್ಲಿ ಹೊರಗುತ್ತಿಗೆ ಅಡಿಯಲ್ಲಿ ನೀರು ಸರಬರಾಜು ವಿಭಾಗದಲ್ಲಿ ಕಳೆದ 15 ವರ್ಷಗಳಿಂದ ನಿರಂತರವಾಗಿ ಕಾರ್ಮಿಕರು ನೀರು ಪೂರೈಕೆ ಕೆಲಸ ಮಾಡುತ್ತಿದ್ದಾರೆ. ನೇರಪಾವತಿಗೆ ಹಲವಾರು ಬಾರಿ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದರು.

ಕಾಯಮಾತಿ ಮಾಡುವವರೆಗೆ ನಗರ ಸ್ಥಳೀಯ ಸಂಸ್ಥೆಗಳ ಗುತ್ತಿಗೆ ಕಾರ್ಮಿಕರಿಗೆ ನೇರ ಪಾವತಿಯಡಿಯಲ್ಲಿ ಸಂಬಳ ನೀಡಬೇಕು. ಸುಪ್ರೀಂಕೋರ್ಟಿನ ತೀರ್ಪಿನಂತೆ ಎಲ್ಲಾ ಕಾರ್ಮಿಕರಿಗೆ ಸಮಾನ ಕೆಲಸಕ್ಕೆ ಸಮಾನ ವೇತನ ನೀಡಬೇಕು. ಗುತ್ತಿಗೆದಾರರು ಕಾರ್ಮಿಕರಿಂದ ಕಟಾವು ಮಾಡಿದ ಪಿ.ಎಫ್. ಹಾಗೂ ಇ.ಎಸ್.ಐ. ಗಳನ್ನು ಸರಿಯಾಗಿ ಪಾವತಿಸದೇ ಹಲವೆಡೆ ಹಗರಣಗಳು ನಡೆದಿವೆ. ಇದನ್ನು ತಡೆಯಲು ಮೂಲ ಮಾಲೀಕರಾದ ಸ್ಥಳೀಯ ಸಂಸ್ಥೆಗಳೇ ಇದನ್ನು ನಿರ್ವಹಿಸಬೇಕೆಂದು ಒತ್ತಾಯಿಸಿದರು.

ಕಾರ್ಮಿಕರು ಅಲ್ಪ ವೇತನದಲ್ಲಿ ಬದುಕುತ್ತಿರುವ ಕಾರಣ ಎಲ್ಲರಿಗೂ ಸರ್ಕಾರದ ಗೃಹಭಾಗ್ಯ ಯೋಜನೆಯಡಿಯಲ್ಲಿ ಉಚಿತ ನಿವೇಶನ ನೀಡಬೇಕು ಎಂದು ಒತ್ತಾಯಿಸಿದರು.

ಸುದ್ದಿಗೋಷ್ಠಿಯಲ್ಲಿ ಅನಿಲ್ ಕುಮಾರ್, ರಾಧಾಕೃಷ್ಣ, ಗುತ್ಯಪ್ಪ,ರಜನಿಕಾಂತ್, ಅಜ್ಜಯ್ಯ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net