

ಹಾಸನ: ರಾಜ್ಯ ಸರ್ಕಾರ ತಮ್ಮ ಸೇವೆಯನ್ನು ಕಾಯಂಗೊಳಿಸಬೇಕು ಎಂದು ಆಗ್ರಹಿಸಿ ಸರ್ಕಾರಿ ಆಸ್ಪತ್ರೆಗಳ ಅರೆಕಾಲಿಕ ವೈದ್ಯಾಧಿಕಾರಿಗಳು ಜಿಲ್ಲಾಧಿಕಾರಿ ಆರ್.ಗಿರೀಶ್ ಅವರಿಗೆ ಬುಧವಾರ ಮನವಿ ಸಲ್ಲಿಸಿದರು.
ವಿವಿಧ ಗ್ರಾಮೀಣ ಸರ್ಕಾರಿ ಆಸ್ಪತ್ರೆಗಳಲ್ಲಿ 507 ವೈದ್ಯರು ಅರೆಕಾಲಿಕ ವೈದ್ಯಾಧಿಕಾರಿಗಳಾಗಿ ನಾಲ್ಕೈದು ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದ್ದೇವೆ. ಸೇವಾ ಭದ್ರತೆ ಇಲ್ಲವಾದರೂ ಕರೊನಾ ಅವಧಿಯಲ್ಲಿ ಜೀವ ಪಣಕ್ಕಿಟ್ಟು ಕಾರ್ಯನಿರ್ವಹಿಸುತ್ತಿದ್ದೇವೆ. ನಮ್ಮ ಸೇವೆಯನ್ನು ಕಾಯಂಗೊಳಿಸಿ ಎಂದು ಆರೋಗ್ಯ ಸಚಿವ ಶ್ರೀರಾಮುಲು ಅವರಿಗೆ ಮನವಿ ಸಲ್ಲಿಸಿದ್ದೆವು.
ಅಪಾಯಕಾರಿ ಸನ್ನಿವೇಶದಲ್ಲಿ ಕೆಲಸ ಮಾಡುತ್ತಿರುವ ನಮಗೆ ಯಾವುದೇ ಭದ್ರತೆ ಇಲ್ಲವಾದ್ದರಿಂದ ರಾಜೀನಾಮೆ ನೀಡುವಂತೆ ಕುಟುಂಬದವರು ಒತ್ತಾಯಿಸುತ್ತಿದ್ದಾರೆ. ಇದೇ 8ರೊಳಗೆ ಸರ್ಕಾರ ನಮ್ಮ ಸೇವೆ ಕಾಯಂಗೊಳಿಸದಿದ್ದರೆ ಕರ್ತವ್ಯಕ್ಕೆ ಹಾಜರಾಗುವುದಿಲ್ಲ ಎಂದು ಎಚ್ಚರಿಸಿ ಮನವಿ ನೀಡಿದರು. ವೈದ್ಯಾಧಿಕಾರಿ ಡಾ.ಸ್ನೇಹ ನೇತೃತ್ವ ವಹಿಸಿದ್ದರು.