ಸೇವಾಲಾಲ ಭವನ ನಿರ್ಮಾಣಕ್ಕೆ ಪ್ರಯತ್ನ

Capture02
Published on

ಬಸವಕಲ್ಯಾಣ: ಕ್ಷೇತ್ರದಲ್ಲಿ ಸಂತ ಶ್ರೀ ಸೇವಾಲಾಲರ ಸಭಾಭವನ ನಿರ್ಮಾಣಕ್ಕಾಗಿ ಸರ್ಕಾರದ ಮಟ್ಟದಲ್ಲಿ ಪ್ರಾಮಾಣಿಕವಾಗಿ ಪ್ರಯತ್ನಿಸುತ್ತೇನೆ ಎಂದು ಶಾಸಕ ಶರಣು ಸಲಗರ ಹೇಳಿದರು.

ಬಸವ ಮಹಾಮನೆಯಲ್ಲಿ ಭಾನುವಾರ ಹಮ್ಮಿಕೊಂಡ ಸಂತ ಶ್ರೀ ಸೇವಾಲಾಲ ಮಹಾರಾಜ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸಮಾಜದ ಮುಖಂಡರ ಒತ್ತಾಯದ ಮೇರೆಗೆ ಶ್ರೀ ಸೇವಾಲಾಲ ಹೆಸರಿನಲ್ಲಿ ಭವನ ನಿರ್ಮಿಸಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮೇಲೆ ಒತ್ತಡ ಹೇರಿ ಎರಡು ಎಕರೆ ಜಮೀನು ಮಂಜೂರಿಗೆ ಪ್ರಯತ್ನಿಸುತ್ತೇನೆ ಎಂದರು.

ಉಪಚುನಾವಣೆಯಲ್ಲಿ ನನ್ನ ಮೇಲೆ ವಿಶ್ವಾಸವಿಟ್ಟು ಆಶೀರ್ವದಿಸಿದ ಬಂಜಾರ ಸಮಾಜದ ಅಭಿವೃದ್ಧಿಗೆ ಪ್ರಾಮಾಣಿಕ ಪ್ರಯತ್ನ ಮಾಡುವೆ. ತಾಂಡಾಗಳಲ್ಲಿನ ಸಮಸ್ಯೆ ಪರಿಹಾರಕ್ಕೆ ಪ್ರಥಮಾದ್ಯತೆ ನೀಡುವೆ. ಪ್ರತಿ ತಾಂಡಾದಲ್ಲಿ ಹೈಮಾಸ್ಟ್ ದೀಪ ಅಳವಡಿಸುವುದಾಗಿ ಭರವಸೆ ನೀಡಿದರು.

ಕಾಂಗ್ರೆಸ್ ಮುಖಂಡ ಬಾಬು ಹೊನ್ನಾನಾಯಕ ಮಾತನಾಡಿ, ಎರಡು ಎಕರೆಯಲ್ಲಿ ಸಂತ ಶ್ರೀ ಸೇವಾಲಾಲ ಹೆಸರಿನಲ್ಲಿ ಸರ್ಕಾರ ಸಭಾಭವನ ನಿರ್ಮಿಸಿಕೊಡಬೇಕು ಎಂದು ಒತ್ತಾಯಿಸಿದರು.

ಶ್ರೀ ಅನೀಲ ಮಹಾರಾಜ, ಶ್ರೀ ಲೋಕೇಶ ಮಹಾರಾಜ ಆಶೀರ್ವಚನ ನೀಡಿದರು. ಮಾಜಿ ಶಾಸಕ ಮಲ್ಲಿಕಾರ್ಜುನ ಖೂಬಾ, ಮಾಜಿ ಎಂಎಲ್ಸಿ ವಿಜಯಸಿಂಗ್, ಸಮಾಜದ ಮುಖಂಡರಾದ ನೀಲಕಂಠ ರಾಠೋಡ್, ಅಣ್ಣಾರಾವ ರಾಠೋಡ್ ಮಾತನಾಡಿದರು.

ಪ್ರಮುಖರಾದ ಯಸ್ರಬ್ ಅಲಿ ಖಾದ್ರಿ, ಪ್ರದೀಪ ವಾತಡೆ, ಶಾಂತಕುಮಾರ ರಾಠೋಡ್, ಸಂತೋಷಕುಮಾರ ಚವ್ಹಾಣ್, ಬಳಿರಾಮ ಚವ್ಹಾಣ್, ಡಾ.ಸಂತೋಷ ಹೊನ್ನಾನಾಯಕ, ದಿನೇಶ ರಾಠೋಡ್, ಜಗನ್ನಾಥ ಆಡೆ, ಓಂಪ್ರಕಾಶ ಪಾಟೀಲ್, ಡಿ.ಕೆ. ದಾವೂದ್, ಲಿಂಗರಾಜ ಶಾಶೆಟ್ಟೆ, ರಾಜಕುಮಾರ ಸಿರಗಾಪುರ ಇತರರಿದ್ದರು. ಬಳಿರಾಮ ಜಾಧವ್ ಸ್ವಾಗತಿಸಿದರು. ಶಿವರಾಮ ಚವ್ಹಾಣ್ ನಿರೂಪಣೆ ಮಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net