

ಚಾಮರಾಜನಗರ: ಸೇವಾ ಭಾರತಿ ಶಿಕ್ಷಣ ಸಂಸ್ಥೆ ವತಿಯಿಂದ 38ನೇ ವಾರ್ಷಿಕೋತ್ಸವ ಅಂಗವಾಗಿ ಜ.9, 10 ಮತ್ತು 11 ರಂದು ಸಾಮರಸ್ಯ ಸಂಗಮ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಎಂದು ಸಂಸ್ಥೆಯ ಆಡಳಿತಾಧಿಕಾರಿ ಎಸ್.ರಮೇಶ್ ತಿಳಿಸಿದರು.
ನಗರದ ಚೆನ್ನಿಪುರದ ಮೋಳೆ ರಸ್ತೆಯಲ್ಲಿರುವ ಸೇವಾಭಾರತಿ ಶಿಕ್ಷಣ ಸಂಸ್ಥೆಯ ಆವರಣದಲ್ಲಿ ಜ.9 ಮತ್ತು 10 ರಂದು ಸಾಮರಸ್ಯ ವಿಜ್ಞಾನ , ಕಲಾ ವಸ್ತು ಪ್ರದರ್ಶನ ಹಾಗೂ ಪಾಲಕರಿಂದ ವಿಶೇಷವಾಗಿ ಸಾಂಪ್ರದಾಯಿಕ ತಿನಿಸುಗಳ ಆಹಾರ ಮೇಳವನ್ನು ಆಯೋಜಿಸಲಾಗಿದೆ. ಸಂಸ್ಥೆಯ ಎಲ್ಲಾ 8 ಶಾಲಾ, ಕಾಲೇಜುಗಳ ವಿಜ್ಞಾನ, ಗಣಿತ, ಭಾಷಾ,ಕಲಾ ವಿಭಾಗದ ವಿದ್ಯಾರ್ಥಿಗಳ ಪ್ರತಿಭೆ ಹೊರ ತರುವ ನಿಟ್ಟಿನಲ್ಲಿ ಸಾಮರಸ್ಯ ವಸ್ತು ಪ್ರದರ್ಶನವನ್ನು ಏರ್ಪಡಿಸಲಾಗಿದೆ ಎಂದು ಸೋಮವಾರ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ಜ.11 ರಂದು ಸಂಜೆ 5 ಗಂಟೆಗೆ ನಡೆಯಲಿರುವ ಸಾಮರಸ್ಯ ಸಂಗಮ-2024 ವಾರ್ಷಿಕೋತ್ಸವ ಸಾಂಸ್ಕೃತಿಕ ಮತ್ತು ಶಾರೀರಿಕ ಕಾರ್ಯಕ್ರಮವನ್ನು ಮಹಾರಾಜ ಎಜುಕೇಶನ್ ಟ್ರಸ್ಟ್ ಅಧ್ಯಕ್ಷ ಎಸ್.ಮುರಳಿ ಉದ್ಘಾಟಿಸುವರು. ಮೈಸೂರು ರಾಜವಂಶಸ್ಥ ಹಾಗೂ ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಧ್ವಜಾರೋಹಣ ನೆರವೇರಿಸುವರು. ಶಾಸಕ ಸಿ.ಪುಟ್ಟರಂಗಶೆಟ್ಟಿ ಪುಷ್ಪಾರ್ಚನೆ ನೆರವೇರಿಸುವರು. ಖ್ಯಾತ ಶಿಶುತಜ್ಞ ಡಾ.ವಾಮನರಾವ್ ಬಾಪಟ್ ಅದ್ಯಕ್ಷತೆ ವಹಿಸುವರು. ಇನ್ನಿತರೆ ಗಣ್ಯರು ಮುಖ್ಯ ಅತಿಥಿಗಳಾಗಿ ಭಾಗವಹಿಸುವರು. ಕಾರ್ಯಕ್ರಮದಲ್ಲಿ ಮೈನವಿರೇಳಿಸುವ ಶಾರೀರಿಕ ಸಾಹಸ ಪ್ರದರ್ಶನಗಳು, ಕಲೆ, ಸಂಸ್ಕೃತಿ, ಜಾನಪದ ಸೊಗಡಿನ ನೃತ್ಯರೂಪಕಗಳು ಹಾಗೂ ವರ್ಣರಂಜಿತ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದೆ. ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಮನವಿ ಮಾಡಿದರು.
ಗೋಷ್ಠಿಯಲ್ಲಿ ಸೇವಾಭಾರತಿ ಶಿಕ್ಷಣ ಸಂಸ್ಥೆ ಕಾರ್ಯದರ್ಶಿ ವಾಸುದೇವರಾವ್,ಆಡಳಿತ ಮಂಡಳಿ ಸದಸ್ಯ ಎಸ್.ಬಾಲಸುಬ್ರಹ್ಮಣ್ಯಂ ಹಾಜರಿದ್ದರು.