

ಕೊಳ್ಳೇಗಾಲ: ಭಾರತ ಸೇವಾ ದಳದಲ್ಲಿ ತೊಡಗಿಸಿಕೊಳ್ಳುವುದರಿಂದ ಸೇವಾ ಮನೋಭಾವ ಬೆಳೆಯುತ್ತದೆ ಎಂದು ಸೇವಾದಳದ ತಾಲೂಕು ಸಮಿತಿ ಅಧ್ಯಕ್ಷ ಬಿ.ಕೆ.ಪ್ರಕಾಶ್ ಹೇಳಿದರು.
ಪಟ್ಟಣದ ಗುರುಭವನದಲ್ಲಿ ಸೋಮವಾರ ಜಿಲ್ಲಾ ಹಾಗೂ ತಾಲೂಕು ಭಾರತ ಸೇವಾದಳ ಸಮಿತಿ, ಶಿಕ್ಷಣಾಧಿಕಾರಿಗಳ ಕಚೇರಿ ವತಿಯಿಂದ ಆಯೋಜಿಸಿದ್ದ 2 ದಿನಗಳ ಭಾರತ ಸೇವಾದಳ ಶಿಕ್ಷಕರ ಪುನಶ್ಚೇತನ ತರಬೇತಿ ಹಾಗೂ ಮಕ್ಕಳ ನಾಯಕತ್ವ ಶಿಬಿರ ಕಾರ್ಯಕ್ರಮದಲ್ಲಿ ಮಾತನಾಡಿದರು. ಸೇವಾದಳವು ಸಮಾಜಮುಖಿ ಕೆಲಸಗಳಿಗೆ ಆದ್ಯತೆ ನೀಡುತ್ತದೆ. ಮಕ್ಕಳಲ್ಲಿ ಶಿಸ್ತು ಮತ್ತು ನಾಯಕತ್ವ ಗುಣ ಬೆಳೆಸುತ್ತಿದೆ. ದೇಶ, ಭಾಷೆ ಅಭಿಮಾನವನ್ನು ಹೆಚ್ಚಿಸುತ್ತದೆ. ಆದ್ದರಿಂದ ಭಾರತ ಸೇವಾದಳ ಸಮಿತಿ ಪದಾಧಿಕಾರಿಗಳಾಗಿ ಸೇವೆ ಸಲ್ಲಿಸಬೇಕೆಂದು ಹೇಳಿದರು.
ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಜಿಲ್ಲಾ ಸಮಿತಿ ಉಪಾಧ್ಯಕ್ಷ ಎಸ್.ನಾಗರಾಜು ಮಾತನಾಡಿ, ಭಾರತ ಸೇವಾದಳಕ್ಕೆ ವಿದ್ಯಾರ್ಥಿಗಳು ಸೇರಬೇಕಿದೆ. ವಿದ್ಯಾರ್ಥಿ ದಿಸೆಯಲ್ಲಿ ಸೇವಾ ದಳದಲ್ಲಿ ಮಕ್ಕಳು ತೊಡಗಿದರೆ ಉತ್ತಮ ಪ್ರಜೆಗಳಾಗಿ ಹೊರ ಹೊಮ್ಮುತ್ತಾರೆ ಎಂದರು.
ಭಾರತ ಸೇವಾದಳದ ಅಧಿನಾಯಕ ಪಳನಿಸ್ವಾಮಿ ಜಾಗೇರಿ ಮಾತನಾಡಿ, ಭಾರತ ಸೇವಾದಳ ದೇಶ ಭಕ್ತ ಸಂಸ್ಥೆಯಾಗಿದೆ. ಸ್ವಾತಂತ್ರ್ಯ ಪೂರ್ವದಲ್ಲಿ ಭಾರತದಿಂದ ಬ್ರಿಟಿಷರ ತೊಲಗಿಸಲು ಹಿಂದುಸ್ತಾನಿ ಸೇವಾದಳ ಹೆಸರಲ್ಲಿ ಶ್ರಮಿಸಿದೆ. ಮಹಾತ್ಮ ಗಾಂಧೀಜಿ ಅವರ ಮಾರ್ಗದರ್ಶನ ಹಾಗೂ ಪ್ರಧಾನಿ ನೆಹರು ಅಧ್ಯಕ್ಷತೆಯಲ್ಲಿ ಸ್ಥಾಪಿತವಾಯಿತು. ಅಂದು ಹಿಂದು, ಮುಸ್ಲಿಂ, ಕ್ರೈಸ್ತರು ಸಮಿತಿಯಲ್ಲಿದ್ದರು. ದೇಶಕ್ಕೋಸ್ಕರ ಒಗ್ಗೂಡಿ ಹೋರಾಟ ಮಾಡಿದರು ಎಂದು ಮಾಹಿತಿ ನೀಡಿದರು.
ಭಾರತ ಸೇವಾದಳದ ಜಿಲ್ಲಾ ಸಂಘಟಕರಾದ ಅರುಣ್, ಪ್ರಕಾಶ್, ಬಿಆರ್‌ಪಿ ರಾಜಮಾಣಿಕ್ಯ, ಮಂಜು, ಸಮಿತಿ ಸದಸ್ಯರಾದ ವೆಂಕಟಕೃಷ್ಣ, ಲತಾ, ಕುಮಾರಿ, ಮುನಿಯಾನಾಯ್ಕ, ಮಂಗಳಮ್ಮ, ರಾಜಪ್ಪ ಇದ್ದರು.