ಸೇವಾ ಮನೋಭಾವದಿಂದ ಜೀವನ ಸಾರ್ಥಕ

SLV
Published on

ಚಿತ್ರದುರ್ಗ: ಕರ್ತವ್ಯದಲ್ಲಿ ಸೇವಾ ಮನೋಭಾವದಿಂದ ಸಾರ್ಥಕತೆ ದೊರೆಯಲಿದೆ. ನರ್ಸ್‌ಗಳು ರೋಗಿಗಳ ಹಾರೈಕೆ ಮಾಡಿ ಗುಣಪಡಿಸಿದಾಗ ಮನಸ್ಸಿಗೆ ನೆಮ್ಮದಿ ಸಿಗುವುದರ ಜತೆಗೆ ಭಗವಂತ ಮೆಚ್ಚುತ್ತಾನೆ ಎಂದು ಶಾಸಕ ಕೆ.ಸಿ.ವೀರೇಂದ್ರ ಪಪ್ಪಿ ಹೇಳಿದರು.


ದೇವರಾಜ ಅರಸು ಶಿಕ್ಷಣ ಸಂಸ್ಥೆಯಲ್ಲಿ ಸೋಮವಾರ ಆಯೋಜಿಸಿದ್ದ ಎಸ್‌ಎಲ್‌ವಿ ಸ್ಕೂಲ್ ಆ್ಯಂಡ್ ನರ್ಸಿಂಗ್ ಕಾಲೇಜಿನ ಬೆಳ್ಳಿ ಮಹೋತ್ಸವ ಉದ್ಘಾಟಿಸಿ ಮಾತನಾಡಿದರು.


ರೋಗಿಗಳ ಜತೆಗೆ ವೈದ್ಯರಿಗಿಂತಲೂ ನರ್ಸ್‌ಗಳು ಹೆಚ್ಚಿನ ಸಮಯ ಕಳೆಯುತ್ತಾರೆ. ಹೀಗಾಗಿ ಅತ್ಯಂತ ಪವಿತ್ರ ವೃತ್ತಿಯಾಗಿದೆ. ಪ್ರಾಣ ಉಳಿಸುವುದರ ಜತೆ ಆತ್ಮವಿಶ್ವಾಸ ತುಂಬುವ ಅಮೂಲ್ಯವಾದ ಸೇವೆ ಸಲ್ಲಿಸುತ್ತಿದ್ದಾರೆ. ಸಂಸ್ಥೆಯಲ್ಲಿ ನರ್ಸಿಂಗ್ ಶಿಕ್ಷಣ ಪಡೆದವರು ದೇಶ-ವಿದೇಶಗಳಲ್ಲಿ ಕೆಲಸ ಮಾಡುತ್ತಿರುವುದು ಚಿತ್ರದುರ್ಗಕ್ಕೆ ಹೆಮ್ಮೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.


ಕಳೆದ 25 ವರ್ಷಗಳಿಂದ ಸಂಸ್ಥೆ ಅನೇಕ ಏಳು-ಬೀಳು ಕಂಡಿದೆ. ಈಗ ಅದರ ಸಾರಥಿಯಾಗಿ ಯುವ ಉತ್ಸಾಹಿ ಸಂಸ್ಥೆಯ ಸಿಇಒ ರಘುಚಂದನ್ ಮುನ್ನಡೆಸಿಕೊಂಡು ಹೋಗುತ್ತಿದ್ದಾರೆ. ಮತ್ತಷ್ಟು ಎತ್ತರಕ್ಕೆ ಕೊಂಡೊಯ್ಯುವ ವಿಶ್ವಾಸವಿದೆ ಎಂದರು.


ಸಂಸ್ಥೆಯ ಸಂಸ್ಥಾಪಕ ಕಾರ್ಯದರ್ಶಿ, ಹೊಳಲ್ಕೆರೆ ಶಾಸಕ ಡಾ.ಎಂ.ಚಂದ್ರಪ್ಪ ಮಾತನಾಡಿ, ಈವರೆಗೂ ಕಾಲೇಜಿನಲ್ಲಿ 10 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ತರಬೇತಿ ಪಡೆದು ಸ್ವಾವಲಂಬಿಯಾಗಿ ಬದುಕು ಕಟ್ಟಿಕೊಂಡಿದ್ದಾರೆ. ವಿಶ್ವದ ಯಾವುದೇ ಮೂಲೆಗೋದರು ನಮ್ಮ ಸಂಸ್ಥೆಯಲ್ಲಿ ನರ್ಸಿಂಗ್ ಶಿಕ್ಷಣ ಪಡೆದವರು ಸಿಗುತ್ತಾರೆ ಎಂದು ತಿಳಿಸಿದರು.


ನರ್ಸ್‌ಗಳು ಹೆಚ್ಚು ಜವಾಬ್ದಾರಿಯಿಂದ ಕೆಲಸ ಮಾಡಿ ರೋಗಿಗಳ ರಕ್ಷಣೆಗೆ ಹಗಲಿರುಳು ಶ್ರಮಿಸುತ್ತಿದ್ದಾರೆ. ಅದಕ್ಕಾಗಿ ನಿಮ್ಮ ಮೇಲೆ ಪ್ರೀತಿ, ವಿಶ್ವಾಸ ಹೆಚ್ಚು. ಆರೋಗ್ಯ ಪೂರ್ಣ ಸಮಾಜ ನಿರ್ಮಾಣದಲ್ಲಿ ನಿಮ್ಮ ಪಾತ್ರ ಅತ್ಯಂತ ದೊಡ್ಡದು. ಗುಣಮಟ್ಟದ ಸೇವೆ ನೀಡಿ ಜೀವನ ಸಾರ್ಥಕಪಡಿಸಿಕೊಳ್ಳಿ ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.


ಸಂಸ್ಥೆಯ ಸಿಇಒ ಎಂ.ಸಿ.ರಘುಚಂದನ್ ಮಾತನಾಡಿ, ನಗರದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳ ಪೈಕಿ ನಮ್ಮ ಸಂಸ್ಥೆ ಕೂಡ ಹೆಮ್ಮರವಾಗಿ ಬೆಳೆದಿದ್ದು, ಇದರ ಹಿಂದೆ ಶಿಕ್ಷಕರು, ಉಪನ್ಯಾಸಕರು, ಸಿಬ್ಬಂದಿಗಳು ಸೇರಿ ಅನೇಕರ ಪರಿಶ್ರಮವಿದೆ ಎಂದು ತಿಳಿಸಿದರು.


ಸಂಸ್ಥೆಯಲ್ಲಿ 5 ಸಾವಿರ ವಿದ್ಯಾರ್ಥಿಗಳು ಓದುತ್ತಿದ್ದಾರೆಂದರೆ ಅಡಿಪಾಯ, ನಂಬಿಕೆ, ವಿಶ್ವಾಸ, ಅತ್ಯುನ್ನತ ಶ್ರೇಣಿಯ ಫಲಿತಾಂಶವೇ ಮೂಲ ಕಾರಣ. ಪ್ರಗತಿಗೆ ದುಡಿದ ಕಾಣದ ಕೈಗಳಿಗೆ ಋಣಿಯಾಗಿರುತ್ತೇನೆ ಎಂದರು.


ಸಂಸ್ಥೆಯ ಆಡಳಿತಾಧಿಕಾರಿ ಎಚ್.ಚಂದ್ರಕಲಾ, ಅಧ್ಯಕ್ಷೆ ಯಶಸ್ವಿನಿ ಕಿರಣ್, ಪ್ರಾಚಾರ್ಯ ಡಾ.ಜಿ.ಇ.ಭೈರಸಿದ್ದಪ್ಪ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net