

ಅಥಣಿ: ಸಮಾಜದ ಎಲ್ಲ ವರ್ಗದವರಿಗೆ ನೆರವು ಕಲ್ಪಿಸುವ ಸಂಸ್ಥೆಗಳ ಸಾಲಿನಲ್ಲಿ ರೋಟರಿ ಹಾಗೂ ಇನ್ನರ್‌ವ್ಹೀಲ್ ಕ್ಲಬ್‌ಗಳು ಪ್ರಮುಖ ಸ್ಥಾನ ಹೊಂದಿವೆ ಎಂದು ಅಥಣಿ ಇನ್ನರ್‌ವ್ಹೀಲ್ ಕ್ಲಬ್ ಅಧ್ಯಕ್ಷೆ ಲಲಿತಾ ಮೇಕನಮರಡಿ ಹೇಳಿದರು.
ಪಟ್ಟಣದ ವಿವೇಕಾನಂದ ಶಾಲೆಯ ಸಭಾಂಗಣದಲ್ಲಿ ಅಥಣಿ ಇನ್ನರ್‌ವ್ಹೀಲ್ ಕ್ಲಬ್ ವತಿಯಿಂದ ಶುಕ್ರವಾರ ದೈನಿಕ ಪತ್ರಿಕಾ ವಿತರಕರಿಗೆ ರೇನ್-ಕೋಟ್ ವಿತರಿಸಿ ಮಾತನಾಡಿ, ಇಲ್ಲದವರಿಗೆ ನೆರವಿನ ಹಸ್ತ ಚಾಚುವ ಸೇವಾ ಮನೋಭಾವ ಬೆಳೆಸಿಕೊಳ್ಳುವುದು ಎಲ್ಲ ಸಂಘ ಸಂಸ್ಥೆಗಳ ಕರ್ತವ್ಯವಾಗಬೇಕಿದೆ. ಸರ್ವಋತುಗಳಲ್ಲೂ ಗಾಳಿ, ಮಳೆ, ಚಳಿಯೆನ್ನದೆ ಓದುಗರಿಗೆ ಪತ್ರಿಕೆ ವಿತರಿಸುವ ವಿತರಕರ ಕಾರ್ಯ ಕಷ್ಟಕರವಾದುದು. ಮಳೆಗಾಲದಲ್ಲಿ ಅವರ ಆರೋಗ್ಯ ದೃಷ್ಟಿಯಿಂದ ರೇನ್-ಕೋಟ್ ವಿತರಿಸಲಾಗಿದೆ ಎಂದರು.
ಕಾರ್ಯದರ್ಶಿ ವೈಶಾಲಿ ಮಠಪತಿ ಮಾತನಾಡಿದರು. ಡಾ.ಸುಧಾ ಗಾಣಿಗೇರ, ಸುವರ್ಣಾ ಪಾಟೀಲ, ಸುಜಾತಾ ಜಗದಾಳಮಠ, ರೂಪಾಲಿ ಮೊಪಗಾರ, ಸೀತಾ ರಜಪೂತ ಇತರರಿದ್ದರು.