ಸೇವಾ ಮಂದಿರವಾಗಲಿ ಕಾರ್ಯಾಲಯ

17-gdg-6a
Published on

ಗದಗ: ಬಿಜೆಪಿ ಕಾರ್ಯಕರ್ತರಿಗೆ ಕಾರ್ಯಾಲಯವೂ ರಾಮಮಂದಿರದಷ್ಟೇ ಪವಿತ್ರವಾದದ್ದು. ಕಾರ್ಯಾಲಯ ಜನರ ಸೇವಾ ಮಂದಿರವಾಗಬೇಕು. ಪಕ್ಷದ ಕಾರ್ಯಾಲಯವೇ ಕಾರ್ಯಕರ್ತರಿಗೆ ಜೀವಾಳ ಹಾಗೂ ಪ್ರೇರಣಾ ಕೇಂದ್ರ. ಪಕ್ಷದ ಹಿರಿಯರು, ಮುಖಂಡರು ಹಾಗೂ ಕಾರ್ಯಕರ್ತರ ಸಹಾಯ-ಸಹಕಾರದಿಂದ ವರ್ಷದೊಳಗೆ ಜಿಲ್ಲಾ ಕೇಂದ್ರದಲ್ಲಿ ಅತ್ಯುತ್ತಮ ಕಾರ್ಯಾಲಯ ನಿರ್ವಣಗೊಳ್ಳಲಿದೆ ಎಂಬ ವಿಶ್ವಾಸವಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ ಕಟೀಲ್ ಹೇಳಿದರು.

ನಗರದ ಪರಿಸರ ಲೇಔಟ್​ನಲ್ಲಿ ಗುರುವಾರ ಆಯೋಜಿಸಿದ್ದ ಬಿಜೆಪಿ ಜಿಲ್ಲಾ ಕಾರ್ಯಾಲಯ ನಿರ್ಮಾಣ ಕಾಮಗಾರಿಗೆ ಭೂಮಿಪೂಜೆ ಕಾರ್ಯಕ್ರಮದಲ್ಲಿ ಶಿಲಾನ್ಯಾಸ ನೆರವೇರಿಸಿ ಅವರು ಮಾತನಾಡಿದರು.

ಮುಂದಿನ ಮೂರು ವರ್ಷದೊಳಗೆ ಪ್ರತಿ ಮಂಡಲದಲ್ಲಿ ಪಕ್ಷದ ಸ್ವಂತ ಕಾರ್ಯಾಲಯ ನಿರ್ವಿುಸುವ ಸಂಕಲ್ಪ ಮಾಡಿದ್ದು, ಕಾರ್ಯಕರ್ತರು ಸಹಕಾರ ನೀಡಬೇಕು. ಜಿಲ್ಲಾ ಕಾರ್ಯಾಲಯ ಮತಗಟ್ಟೆ ಕೇಂದ್ರಗಳೊಂದಿಗೆ ನಿರಂತರ ಸಂಪರ್ಕ ಹೊಂದಿರಬೇಕು. ಮುಂದಿನ ಎಲ್ಲ ಚುನಾವಣೆಗಳನ್ನು ಗೆಲ್ಲಲು ಇದೊಂದು ಆದರ್ಶ ಕೇಂದ್ರವಾಗಬೇಕು. ಜಿಲ್ಲೆಯ ಪ್ರತಿ ಕಾರ್ಯಕರ್ತರು ಕಟ್ಟಡ ಕಾಮಗಾರಿಗೆ ಶ್ರಮದಾನ, ಯೋಗದಾನ ಮಾಡಬೇಕು ಎಂದರು.

ರಾಜ್ಯದ 9 ಕಡೆಗಳಲ್ಲಿ ಸ್ವಂತ ಕಚೇರಿಗಳಿದ್ದು, ನಾನು ಅಧ್ಯಕ್ಷನಾದ ನಂತರ 9 ಸ್ವಂತ ಕಚೇರಿ ಕಟ್ಟಡಗಳ ನಿರ್ಮಾಣ ಕಾಮಗಾರಿಗೆ ಆನ್​ಲೈನ್ ಮೂಲಕ ಚಾಲನೆ ನೀಡಲಾಗಿದೆ. ಕರೊನಾ ಹಾವಳಿ ಕಡಿಮೆ ಆಗಿದ್ದರಿಂದ ಹಾವೇರಿ ಮತ್ತು ಗದಗದಲ್ಲಿ ನೇರವಾಗಿ ಭೂಮಿಪೂಜೆ ಮಾಡಲಾಗಿದೆ. ಮುಂದಿನ ಎರಡ್ಮೂರು ತಿಂಗಳಲ್ಲಿ ಇನ್ನೂ 9 ಜಿಲ್ಲೆಗಳಲ್ಲಿ ಕಾರ್ಯಾಲಯ ನಿರ್ವಣಕ್ಕೆ ಭೂಮಿ ಪೂಜೆ ನೆರವೇರಿಸಲಾಗುವುದು ಎಂದರು.

ಅಯೋಧ್ಯೆಯಲ್ಲಿ ರಾಮಮಂದಿರ ನಿರ್ವಣಕ್ಕೆ ಮನೆಮನೆಯಿಂದ ಇಟ್ಟಿಗೆ ಸಂಗ್ರಹಿಸಲಾಯಿತು. ಇದೀಗ ಪ್ರತಿಯೊಬ್ಬ ಹಿಂದು ರಾಮ ಮಂದಿರ ನನ್ನದು, ಶ್ರೀರಾಮಚಂದ್ರ ನನ್ನ ಆರಾಧ್ಯದೈವ ಎನ್ನುತ್ತಾರೆ. ಬಿಜೆಪಿ ಕಾರ್ಯಾಲಯವೂ ಕಾರ್ಯಕರ್ತರ ಪಾಲಿಗೆ ಶ್ರದ್ಧಾ ಕೇಂದ್ರ ಎಂದರು.

ಕಾಂಗ್ರೆಸ್ ಪಕ್ಷ ಗಾಂಧಿ ಚಿಂತನೆ ಮರೆತಿದೆ. ಅಧಿಕಾರ ಸಿಕ್ಕಾಗ ಭ್ರಷ್ಟಾಚಾರದಲ್ಲಿ ಮುಳುಗುತ್ತದೆ. ಅಧಿಕಾರ ಕಳೆದುಕೊಂಡರೆ ಗೂಂಡಾಗಿರಿ ಮಾಡುತ್ತದೆ. ಇದೇ ಕಾರಣದಿಂದ ಜನರು ಕಾಂಗ್ರೆಸ್ ಪಕ್ಷವನ್ನು ಕೈಬಿಟ್ಟಿದ್ದಾರೆ ಎಂದು ಟೀಕಿಸಿದರು.

ಜಿಲ್ಲಾ ಉಸ್ತುವಾರಿ ಸಚಿವ ಸಿ.ಸಿ. ಪಾಟೀಲ ಮಾತನಾಡಿ, ನಾನು ಪಕ್ಷದ ಜಿಲ್ಲಾಧ್ಯಕ್ಷನಾಗಿದ್ದಾಗ ಜಾಗ ಖರೀದಿಸಿದೆ. ಸಚಿವನಾಗಿರುವ ಸಂದರ್ಭದಲ್ಲಿ ಕಾರ್ಯಾಲಯಕ್ಕೆ ಭೂಮಿ ನೆರವೇರಿಸಿದ್ದು ಖುಷಿ ತಂದಿದೆ ಎಂದರು. ಇದೇ ಸಂದರ್ಭದಲ್ಲಿ ಅವರು ಕಾರ್ಯಾಲಯ ನಿರ್ವಣಕ್ಕೆ 10 ಲಕ್ಷ ರೂ. ಚೆಕ್ ಅನ್ನು ರಾಜ್ಯಾಧ್ಯಕ್ಷ ನಳೀನ್ ಕುಮಾರ ಕಟೀಲ್ ಅವರಿಗೆ ನೀಡಿದರು.

ಸಂಸದರಾದ ಪಿ.ಸಿ. ಗದ್ದಿಗೌಡರ, ಶಿವಕುಮಾರ ಉದಾಸಿ, ವಿಧಾನ ಪರಿಷತ್ ಸದಸ್ಯರಾದ ಎಸ್.ವಿ. ಸಂಕನೂರ, ಪ್ರದೀಪ್ ಶೆಟ್ಟರ್ ಮಾತನಾಡಿ, ಕಾರ್ಯಾಲಯ ಕಟ್ಟಡಕ್ಕೆ ಸಹಾಯ ಮಾಡಲಾಗುವುದು ಎಂದು ಭರವಸೆ ನೀಡಿದರು.

ಜಿಲ್ಲಾಧ್ಯಕ್ಷ ಮೋಹನ ಮಾಳಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಇದೇ ಸಂದರ್ಭದಲ್ಲಿ ರಾಜ್ಯಾಧ್ಯಕ್ಷ ನಳೀನ್ ಕುಮಾರ ಕಟೀಲ್ ಅವರನ್ನು ಸನ್ಮಾನಿಸಲಾಯಿತು. ಕಟ್ಟಡ ಕಾಮಗಾರಿಗೆ ಯುವ ಮುಖಂಡ ಅನೀಲ ಮೆಣಸಿನಕಾಯಿ 2.50 ಲಕ್ಷ ರೂ. ದೇಣಿಗೆ ಘೋಷಿಸಿದರು.

ಮುಖಂಡರಾದ ಮಾ.ನಾಗರಾಜ, ಮಹೇಶ ಟೆಂಗಿನಕಾಯಿ, ಚಂದ್ರಶೇಖರ ಕವಟಗಿ, ಭಾರತಿ ಮುಗದುಮ್ ಕಾಂತಿಲಾಲ ಬನ್ಸಾಲಿ, ರಾಜು ಕುಡರಗಿ, ಲಿಂಗರಾಜ ಪಾಟೀಲ, ಎಂ.ಎಸ್. ಕರಿಗೌಡರ, ಸಂಗಮೇಶ ದುಂದೂರ ಮತ್ತಿತರರು ವೇದಿಕೆ ಮೇಲಿದ್ದರು. ಮುತ್ತಣ್ಣ ಲಿಂಗನಗೌಡ್ರ ನಿರೂಪಿಸಿದರು.

ಗೂಂಡಾಗಿರಿ ನಡೆಯಲ್ಲ!: ಗದಗ ಜಿಲ್ಲೆಯಲ್ಲಿ ಕಾಂಗ್ರೆಸ್ಸಿಗರ ಗೂಂಡಾಗಿರಿ ನಡೆಯಲ್ಲ. ಇಂಥ ಗೂಂಡಾಗಿರಿಗೆ ಬಿಜೆಪಿ ಕಾರ್ಯಕರ್ತರು ಬಗ್ಗಲ್ಲ. ಸಾಮರ್ಥ್ಯ ಇದ್ದರೆ ಗ್ರಾಪಂ ಚುನಾವಣೆ ಕಣದಲ್ಲಿ ನಿಂತು ಮತಗಳನ್ನು ಗಳಿಸಿ ಗೆದ್ದು ಬಂದು ನಿಮ್ಮ ತಾಕತ್ತು ತೋರಿಸಿ. ಅದನ್ನು ಬಿಟ್ಟು ಎದುರಾಳಿ ಸ್ಪರ್ಧೆಗೆ ಇಳಿಯದಂತೆ ನೋಡಿಕೊಳ್ಳುವುದು ಸರಿಯಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳೀನ್​ಕುಮಾರ್ ಕಟೀಲ್ ಸವಾಲು ಹಾಕಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net