

ವಿಜಯವಾಣಿ ಸುದ್ದಿಜಾಲ ದೊಡ್ಡಬಳ್ಳಾಪುರ
ಸೇವಾ ಮನೋಭಾವವನ್ನು ಎಲ್ಲ ಹಂತಗಳಲ್ಲಿ ರೂಢಿಸಿಕೊಂಡಾಗ ರಾಷ್ಟ್ರೀಯ ಸೇವಾ ಯೋಜನೆಯ ನೈಜ ಉದ್ದೇಶಗಳು ಸಾಕಾರಗೊಳ್ಳುತ್ತವೆ ಎಂದು ಕೊಂಗಾಡಿಯಪ್ಪ ಕಾಲೇಜಿನ ಎನ್‌ಸಿಸಿ ಅಧಿಕಾರಿ ಲೆಫ್ಟಿನೆಂಟ್ ಪ್ರವೀಣ್ ಹೇಳಿದರು.
ತಳಗವಾರ ಗ್ರಾಮದಲ್ಲಿ ಶ್ರೀದೇವರಾಜ್ ಅರಸ್ ವ್ಯವಹಾರ ನಿರ್ವಹಣಾ ಮಹಾವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನೆ ಘಟಕದಿಂದ ನಡೆಯುತ್ತಿರುವ ವಿಶೇಷ ಯುವಜನ ಸೇವಾ ಶಿಬಿರದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು. ರಾಷ್ಟ್ರೀಯ ಐಕ್ಯತೆಯನ್ನು ಪ್ರಧಾನ ಆದ್ಯತೆಯಾಗಿಟ್ಟುಕೊಂಡು, ಜಾತಿ, ಮತ, ಧರ್ಮಗಳನ್ನು ಮೀರಿದ ಮನುಷ್ಯತ್ವದ ಪರಿಕಲ್ಪನೆಯನ್ನು ಅನುಷ್ಠಾನಗೊಳಿಸುವುದು ಎಲ್ಲರ ಕರ್ತವ್ಯವಾಗಬೇಕು. ಸೇವೆ ಎಂಬುದು ಕೇವಲ ನೆಪಮಾತ್ರಕ್ಕೆ ಸೀಮಿತವಾಗದೆ ಶ್ರೇಷ್ಟ ಮೌಲ್ಯಗಳನ್ನು ಒಳಗೊಂಡಿರಬೇಕು. ಬದಲಾವಣೆಯನ್ನು ಬಯಸುವವರು ಮೊದಲ ಬದಲಾಗುವ ಸಂಕಲ್ಪ ಮಾಡಬೇಕು. ಆಗ ಮಾತ್ರ ಪರಿಪೂರ್ಣ ಪ್ರಗತಿ ಸಾಧ್ಯವಾಗುತ್ತದೆ ಎಂದರು. ಆರ್.ಎಲ್. ಜಾಲಪ್ಪ ಪಾಲಿ ಟೆಕ್ನಿಕ್ ಕಾಲೇಜಿನ ಪ್ರಾಂಶುಪಾಲ ನರಸಿಂಹ ರೆಡ್ಡಿ ಮಾತ ನಾಡಿ, ವಿದ್ಯಾರ್ಥಿಗಳು ಗ್ರಾಮೀಣ ಜನಜೀವನದ ಒಳಹುಗಳನ್ನು ಅರಿತು, ಸುಧಾರಣೆಯ ಮಹತ್ವವನ್ನು ತಿಳಿದುಕೊಳ್ಳಬೇಕು. ಸಾಮಾಜಿಕ ಬದಲಾವಣೆಯಿಂದ ಮಾತ್ರ ಪ್ರಗತಿಯ ವೇಗ ಹೆಚ್ಚುತ್ತದೆ. ಧನಾತ್ಮಕ ಆಲೋಚನೆಗಳು ವ್ಯಕ್ತಿತ್ವವನ್ನು ರೂಪಿಸುತ್ತವೆ ಎಂದರು.
ಮಧುಮೇಹ ತಪಾಸಣೆ: ಗ್ರಾಮೀಣ ಜನರಿಗಾಗಿ ದೊಡ್ಡಬಳ್ಳಾಪುರದ ಲಯನ್ಸ್ ಕ್ಲಬ್ ಆಫ್ ಆರ್.ಎಲ್.ಜಾಲಪ್ಪ ಇನ್‌ಸ್ಟಿಟ್ಯೂಷನ್ಸ್, ಲಯನ್ಸ್ ಕ್ಲಬ್ ಆಫ್ ಆರ್ಯಭಟ ಸಹಯೋಗದಲ್ಲಿ ಮಧುಮೇಹ, ರಕ್ತದೊತ್ತಡ ತಪಾಸಣೆ ಶಿಬಿರ ನಡೆಯಿತು. 100ಕ್ಕೂ ಹೆಚ್ಚು ಜನರಿಗೆ ತಪಾಸಣೆ ನಡೆಸಿ ವೈದ್ಯಕೀಯ ಸಲಹೆ ನೀಡಲಾಯಿತು.
ಉಪನ್ಯಾಸಕರಾದ ಭಾನುಶ್ರೀ, ಮಧುಶ್ರೀ, ರಮ್ಯಶ್ರೀ, ಸಂಧ್ಯಾ, ದೀಪಾ, ನಯನ ಉಪಸ್ಥಿತರಿದ್ದರು.