

ತುಮಕೂರು: ಸಹಕಾರಿ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವ ಕೆಳಹಂತದ ನೌಕರರಿಗೆ ಸೇವಾ ಭದ್ರತೆ ಒದಗಿಸುವ ಬಗ್ಗೆ ಸಹಕಾರ ತಿದ್ದುಪಡಿ ಕಾಯ್ದೆಯಲ್ಲಿ ಪ್ರಸ್ತಾಪಿಸಿದ್ದು, ಕಾಯ್ದೆ ಜಾರಿಯಾದರೆ ರಾಜ್ಯದ ಹಾಲು ಉತ್ಪಾದಕರ ಸಹಕಾರ ಸಂಘಗಳಲ್ಲಿ ಕಾರ್ಯದರ್ಶಿಯಾಗಿ ಕೆಲಸ ಮಾಡುತ್ತಿರುವ ಎಲ್ಲ ನೌಕರರಿಗೆ ಭದ್ರತೆ ದೊರೆಯಲಿದೆ ಎಂದು ಸಹಕಾರ ಸಚಿವ ಕೆ.ಎನ್.ರಾಜಣ್ಣ ವಿಶ್ವಾಸ ವ್ಯಕ್ತಪಡಿಸಿದರು.
ತುಮಕೂರಿನಲ್ಲಿ ಶುಕ್ರವಾರ ರಾಜ್ಯ ಸಹಕಾರ ಮಹಾಮಂಡಳ, ತುಮಕೂರು ಜಿಲ್ಲಾ ಸಹಕಾರ ಯೂನಿಯನ್ ಸಹಯೋಗದಲ್ಲಿ ಆಯೋಜಿಸಿದ್ದ "ಸಹಕಾರ ರತ್ನ ಪ್ರಶಸ್ತಿ ಪ್ರದಾನ ಮತ್ತು ಹಾಲು ಸಂಗ್ರಹ ಕೇಂದ್ರಗಳಿಗೆ ಹೊಸ ತಂತ್ರಾಂಶ ಅವಳಡಿಕೆ ಮತ್ತು ತರಬೇತಿ' ಕಾರ್ಯಕ್ರಮದಲ್ಲಿ ಮಾತನಾಡಿದರು. ಸಹಕಾರ ಕ್ಷೇತ್ರದಲ್ಲಿನ ನನ್ನ ಐವತ್ತು ವರ್ಷದ ಅನುಭವದ ಆಧಾರದ ಮೇಲೆ ಕಾಯ್ದೆಗೆ ಸಾಕಷ್ಟು ತಿದ್ದುಪಡಿ ತಂದಿದ್ದೇನೆ. ಅವಕಾಶ ವಂಚಿತ ತಳ ಸಮುದಾಯಗಳಿಗೆ ಅವಕಾಶ ಸಿಗುವಂತೆ ಮಾಡಲಾಗಿದೆ. ಇಂದಲ್ಲ ನಾಳೆ ಕಾನೂನಿನಮಾನ್ಯತೆ ದೊರೆಯಲಿದೆ ಎಂದರು.
ಸಹಕಾರಿ ಕ್ಷೇತ್ರದಲ್ಲಿ ಪ್ರಾಮಾಣಿಕತೆ ಮತ್ತು ದಕ್ಷತೆ ಇರಬೇಕು ಎಂಬುದನ್ನು ಸಹಕಾರಿ ಕ್ಷೇತ್ರದ ನನ್ನ ಗುರು, ನಿವೃತ್ತ ಅಧಿಕಾರಿ ಹನುಮಂತರಾಯಪ್ಪ ಕಲಿಸಿಕೊಟ್ಟಿದ್ದರು. 1974-&75ರಲ್ಲಿ ಸಹಕಾರಿ ಕ್ಷೇತ್ರಕ್ಕೆ ಪ್ರವೇಶ ಪಡೆದಾಗ ಏನೂ ತಿಳಿದಿರಲಿಲ್ಲ. ನನ್ನನ್ನು ಸಂಪೂರ್ಣ ತಿದ್ದಿ, ತೀಡಿದವರು ಹನುಮಂತರಾಯಪ್ಪನವರು. ರಾಜಕಾರಣಕ್ಕೆ ಹಣ, ಜಾತಿ ಬಲ ಬೇಕು. ಆದರೆ ಇಂದು ನಾನು ಮಂತ್ರಿಯಾಗಿದ್ದರೆ ಸಹಕಾರ ಕ್ಷೇತ್ರದಿಂದ. ಸಹಕಾರ ಆಂದೋಲನ ಎಲ್ಲ ವರ್ಗಗಳನ್ನು ಒಳಗೊಂಡ ಆಂದೋಲನವಾಗಬೇಕು. ಗ್ರಾಮೀಣ ಭಾಗದಲ್ಲಿ ಅರ್ಥಿಕ ಚಟುವಟಿಕೆಗಳು ವೃದ್ಧಿಯಾಗಲು ಹೈನುಗಾರರು, ರೈತರು,ತೋಟಗಾರಿಕೆ ಬೆಳೆಗಾರರು ಕಾರಣ ಎಂದರು.
ಕೃಷಿಗೆ ಹಾಕಿದ ಬಂಡವಾಳ ವಾಪಸ್ ಬರುವ ಖಾತ್ರಿ ಇಲ್ಲ, ಬೇರೆ ವಸ್ತುಗಳಿಗೆ ಉತ್ಪಾದಕರು ಬೆಲೆ ನಿಗದಿ ಮಾಡಿದರೆ, ರೈತರ ಉತ್ಪನ್ನಗಳಿಗೆ ಬೆಲೆ ನಿಗದಿ ಮಾಡುವವರು ಬೇರೆ. ಈ ವ್ಯವಸ್ಥೆ ಬದಲಾಗಬೇಕು. ಹೈನುಗಾರಿಕೆ ರೈತರಿಗೆ ವರದಾನವಾಗಿದೆ. ಎನ್ಡಿಡಿಬಿ ಸಾಫ್ಟ್ವೇರ್ ಅಳವಡಿಕೆಯಿಂದ ಹೈನುಗಾರರಿಗೆ ಹೆಚ್ಚಿನ ಅನುಕೂಲವಾಗಲಿದೆ ಎಂದರು.
ಗೃಹ ಸಚಿವ ಡಾ.ಜಿ.ಪರಮೇಶ್ವರ ಮಾತನಾಡಿ, ಭಾರತದ ಸಹಕಾರ ಕ್ಷೇತ್ರದ ಬೆಳವಣಿಗೆ ಇಡೀ ವಿಶ್ವಕ್ಕೆ ಮಾದರಿಯಾಗಿದೆ. 1905ರಲ್ಲಿ ಉತ್ತರ ಕರ್ನಾಟಕದ ಗದುಗಿನ ಶಿವಾನಂದ ಪಾಟೀಲ್ ಪ್ರಾರಂಭಿಸಿದ ಈ ಆಂದೋಲನ ಇಂದು 8.50 ಲಕ್ಷ ಸಹಕಾರಿ ಸಂಘಗಳನ್ನು ಹೊಂದಿದೆ. ಆಂದೋಲನಕ್ಕೆ ಸಹಕರಿಸಿದ ಪಂಡಿತ ನೆಹರು, ಮಹಾತ್ಮಗಾಂಧಿ, ಕುರಿಯನ್ ಅವರನ್ನು ಸ್ಮರಿಸಿಕೊಳ್ಳಬೇಕಿದೆ ಎಂದರು.
ಮೆಕಾನಿಕಲ್ ಇಂಜಿನಿಯರ್ ಕುರಿಯನ್ ಸ್ಥಾಪಿಸಿದ ಹಾಲು ಉತ್ಪಾದಕರ ಸಂಘದ ಇಡೀ ಆರ್ಥಿಕ ವ್ಯವಸ್ಥೆಯನ್ನು ಗಟ್ಟಿಗೊಳಿಸಿದ್ದನ್ನು ನಾವು ನೋಡಬಹುದು. ಕರ್ನಾಟಕದ ಕೆಎಂಎಫ್ಗೆ ಇದೇ ಮೂಲ. ಇಂದು ಕೆ.ಎಂ.ಎಫ್ ದೇಶದಲ್ಲಿಯೇ 3ನೇ ಸ್ಥಾನದಲ್ಲಿದೆ. ಇದರಿಂದ ರೈತ ಸಮುದಾಯ ಹಲವಾರು ತೊಂದರೆಗಳ ನಡುವೆಯೂ ಜೀವಂತವಿದ್ದರೆ ಹಾಲು ಉತ್ಪಾದನೆಯಿಂದ. ಈ ಆಂದೋಲನೆ ಕೇವಲ ಹಾಲು ಉತ್ಪಾದನೆಗೆ ಸಿಮೀತವಾಗದೆ ಆರೋಗ್ಯ, ಶಿಕ್ಷಣ ಎಲ್ಲ ಕ್ಷೇತ್ರವನ್ನು ಆವರಿಸಿದೆ ಎಂದರು. ಇದುವರೆಗೂ ಸಹಕಾರಿ ಕ್ಷೇತ್ರಕ್ಕಾಗಿ ದುಡಿದ 370ಕ್ಕೂ ಹೆಚ್ಚು ಜನರಿಗೆ ಸಹಕಾರಿ ರತ್ನ ಪ್ರಶಸ್ತಿ ನೀಡಲಾಗಿದೆ. ಜಿಲ್ಲೆಯಲ್ಲಿ ಇದುವರೆಗೂ 24 ಜನರಿಗೆ ಸಹಕಾರಿ ರತ್ನ ಪ್ರಶಸ್ತಿ ನೀಡಿದ್ದು, ಈ ಬಾರಿ 18 ಜನರಿಗೆ ಈ ಪ್ರಶಸ್ತಿ ಬಂದಿದೆ. ಇಡೀ ರಾಜ್ಯದಲ್ಲಿಯೇ ಸಿಂಹಪಾಲು ಪಡೆದಿದೆ ಎಂದರು.
ರಾಜ್ಯ ಸಹಕಾರ ಮಹಾಮಂಡಳದ ಅಧ್ಯಕ್ಷ ಜಿ.ಟಿ.ದೇವೇಗೌಡ ಮಾತನಾಡಿ, ಗ್ರಾಮೀಣ ಭಾಗದ ಜನರು ಸಹಕಾರಿ ಸಂಘಗಳಲ್ಲಿ ಷೇರು ಬಂಡವಾಳ ಹೂಡಬೇಕು. ಹಣವನ್ನು ಅನಗತ್ಯವಾಗಿ, ಅದ್ದೂರಿ ಕಾರ್ಯಕ್ರಮಗಳಿಗೆ ಖರ್ಚು ಮಾಡುವ ಬದಲು, ಮಂತ್ರ ಮಾಂಗಲ್ಯದಂತಹ ಸರಳ ಮದುವೆಗಳಿಗೆ ಮುಂದಾಗಬೇಕು ಎಂದರು. ಎಲ್ಲಡೆ ಬಂಡವಾಳಶಾಹಿಗಳ ದಾಳಿ ನಡೆಯುತ್ತಿದೆ, ನಿಜವಾದ ಸದಸ್ಯರಿಗೆ ಮತದಾನ ದೊರೆಯುವಂತೆ ಮಾಡಬೇಕಿದೆ. ಪ್ರಾಮಾಣಿಕತೆಗೆ ಪುರಸ್ಕಾರ ದೊರೆಯಬೇಕಿದೆ. ಸಹಕಾರಿ ಕ್ಷೇತ್ರ ಜನರಿಗೆ ಸೇವೆ ಮಾಡಲು ಇರುವ ಒಂದು ಅವಕಾಶ, ಸತ್ಯವಂತರಿಗೆ ಎಂದಿಗೂ ಮನ್ನಣೆ ದೊರೆಯುತ್ತದೆ. ಕೃಷಿ, ಕೈಗಾರಿಕೆ, ರೇಷ್ಮೆ ಉದ್ಯಮ ಮಾಡುವವರು ಸಹಕಾರಿ ಕ್ಷೇತ್ರದ ಸದಸ್ಯರಾಗಿ ಈ ಕ್ಷೇತ್ರವನ್ನು ಉಳಿಸಲುಪ್ರಾಮಾಣಿಕ ಪ್ರಯತ್ನ ನಡೆಸೋಣ ಎಂದರು.
ಹೊಸ ದಾಖಲೆ: ಸಹಕಾರ ಸಚಿವ ಕೆ.ಎನ್.ರಾಜಣ್ಣರ ತವರು ಜಿಲ್ಲೆಯ ಸಹಕಾರ ಕ್ಷೇತ್ರದ 17 ಸಾಧಕರಿಗೆ ಈ ಬಾರಿ "ಸಹಕಾರ ರತ್ನ' ಪ್ರಶಸ್ತಿಗೆ ಆಯ್ಕೆ ಮಾಡುವ ಮೂಲಕ ಹೊಸ ದಾಖಲೆ ಬರೆಯಲಾಗಿದೆ. ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಜಿ.ಜೆ.ರಾಜಣ್ಣ, ನಿರ್ದೇಶಕ ಎಸ್.ಲಕ್ಷಿ$್ಮನಾರಾಯಣ್, ಜಿ.ಎಸ್.ರವಿ, ವಿವೇಕಾನಂದ ಪತ್ತಿನ ಸಂದ ಅಧ್ಯಕ್ಷ ಪಿ.ಮೂರ್ತಿ, ಯಾದಗಿರಿ ಹಾಲು ಒಕ್ಕೂಟದ ಅಧ್ಯಕ್ಷ ಆರ್.ಕೆ.ಪಾಟೀಲ್, ಹಾಸನ ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಎಸ್.ಎಚ್.ಸಿದ್ದಪ್ಪ, ಜಿಲ್ಲಾ ಸಹಕಾರ ಯೂನಿಯನ್ ನಿರ್ದೇಶಕ ಕುಣಿಗಲ್ ತಾಲೂಕು ಕಾಮನಹಳ್ಳಿ ರಾಮಣ್ಣ ಸೇರಿ ಒಟ್ಟು 19 ಮಂದಿಗೆ ಸಹಕಾರ ರತ್ನ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಸಹಕಾರ ಮಹಾಮಂಡಳಿದ ನಿರ್ದೇಶಕ ಗಂಗಣ್ಣ, ಸಹಕಾರಿಗಳಾದ ಕಲ್ಲಹಳ್ಳಿ ದೇವರಾಜು, ಲಕ್ಷಿ$್ಮನಾರಾಯಣ, ಸಿಂಗದಹಳ್ಳಿ ರಾಜಕುಮಾರ್, ನಾರಾಯಣಗೌಡ, ನಾಗೇಶಬಾಬು, ಸಿದ್ದಲಿಂಗೇಗೌಡ, ಕಾಂತರಾಜು ಮತ್ತಿತರರು ಇದ್ದರು.