

ಹಾಸನ: ಸೇವಾ ಭದ್ರತೆ ನೀಡುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸಿದ ಆರೋಗ್ಯ ಇಲಾಖೆಯ ಹೊರಗುತ್ತಿಗೆ ನೌಕರರನ್ನು ಕೆಲಸದಿಂದ ತೆಗೆಯವುದಗಿ ಇಲಾಖೆಯ ಅಧಿಕಾರಿಗಳು ಮತ್ತು ಗುತ್ತಿಗೆದಾರರು ಬೆದರಿಕೆ ಹಾಕುತ್ತಿದ್ದಾರೆ ಎಂದು ಜಿಲ್ಲಾ ಹೊರಗುತ್ತಿಗೆ ನೌಕರರ ಸಂಘದ ಅಧ್ಯಕ್ಷ ಅಕ್ಷಯ್ ಗೌಡ ಆರೋಪಿಸಿದರು.
ನಗರದ ಪತ್ರಕರ್ತರ ಭವನದಲ್ಲಿ ಬುಧವಾರ ನಡೆದ ಸುದ್ದಿಗೋಷ್ಠಿ ನಡೆಸಿದ ಅವರು, ಆರೋಗ್ಯ ಇಲಾಖೆಯಲ್ಲಿ ಕೋವಿಡ್‌ನಂತಹ ಮಾರಣಾಂತಿಕ ರೋಗ ಹರಡುವಿಕೆಯ ಸಂದರ್ಭದಲ್ಲಿ ಸಹ ತಮ್ಮ ಜೀವ ಲೆಕ್ಕಿಸದೆ ಹೊರಗುತ್ತಿಗೆ ನೌಕರರು ಕೆಲಸ ಮಾಡಿದ್ದಾರೆ. ಆದರೆ ಅವರಿಗೆ ಉದ್ಯೋಗ ಭದ್ರತೆ ಹಾಗೂ ಇನ್ನಿತರ ಸೌಲಭ್ಯಗಳು ಸಿಗುತ್ತಿಲ್ಲ. ಈ ಸಂಬಂಧ ಇತ್ತೀಚೆಗೆ ರಾಜ್ಯದಾದ್ಯಂತ ಆರೋಗ್ಯ ಇಲಾಖೆ ಹೊರಗುತ್ತಿಗೆ ನೌಕರರು ಪ್ರತಿಭಟನೆ ನಡೆಸಿದ್ದರು. ಹಾಸನದಲ್ಲಿ ಕೂಡ 400ಕ್ಕೂ ಹೆಚ್ಚು ಹೊರಗುತ್ತಿಗೆ ನೌಕರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. ಅವರೆಲ್ಲರಿಗೂ ಈಗ ಕೆಲಸದಿಂದ ಕಿತ್ತುಹಾಕುವ ಬೆದರಿಕೆ ಕರೆಗಳು ಬರುತ್ತಿವೆ. ಸರ್ಕಾರ ತಕ್ಷಣ ಇತ್ತ ಗಮನಹರಿಸಿ ತಮಗೆ ಸೇವಾ ಭದ್ರತೆ ಒದಗಿಸಬೇಕು ಎಂದು ಮನವಿ ಮಾಡಿಕೊಂಡರು.
ಹಾಸನ ಜಿಲ್ಲೆಯಲ್ಲಿ ಸುಮಾರು 500ಕ್ಕೂ ಹೆಚ್ಚು ಮಂದಿ ಆರೋಗ್ಯ ಇಲಾಖೆಯಲ್ಲಿ ಹೊರಗುತ್ತಿಗೆ ನೌಕರರಾಗಿ ಕೆಲಸ ಮಾಡುತ್ತಿದ್ದೇವೆ. ಟೆಂಡರ್ ಮೂಲಕ ಹೊರಗುತ್ತಿಗೆ ನೌಕರರ ಸೇವೆ ಒದಗಿಸುತ್ತಿರುವ ಸಂಸ್ಥೆಯು ನಮಗೆ ಸಮಾನ ಕೆಲಸಕ್ಕೆ ಸಮಾನ ವೇತನ ನೀಡುತ್ತಿಲ್ಲ. ಡಿ ಗ್ರೂಪ್ ನೌಕರರಿಗೆ ಮಾಸಿಕ 18000 ರೂ. ನಿಗದಿ ಮಾಡಲಾಗಿದೆ. ಆದರೆ ಇತರೆ ಬರವಣಿಗೆ ಮತ್ತಿತರ ಕೆಲಸ ಮಾಡುವ ತಮಗೆ ಮಾಸಿಕ ಕೇವಲ 10200 ರೂ. ವೇತನ ನೀಡಲಾಗುತ್ತಿದೆ ಎಂದು ತಿಳಿಸಿದರು.
ನಮ್ಮನ್ನು ಕಾಯಂ ಮಾಡದಿದ್ದರೂ ಪರವಾಗಿಲ್ಲ, ಹೊರಗುತ್ತಿಗೆ ಬದಲು ನೇರ ನೇಮಕ ಮಾಡಿಕೊಳ್ಳಿ ಎಂಬುದು ಸರ್ಕಾರಕ್ಕೆ ನಮ್ಮ ಬೇಡಿಕೆ ಆಗಿದೆ. ರಾಜ್ಯ ಸರ್ಕಾರಿ ನೌಕರರು ಮುಷ್ಕರ ಆರಂಭಿಸಿದ ಕೆಲವೇ ಗಂಟೆಗಳಲ್ಲಿ ಅವರ ಬೇಡಿಕೆ ಈಡೇರಿಸಿದ ಸರ್ಕಾರಕ್ಕೆ ನಮ್ಮಂತಹ ಬಡ ನೌಕರರ ಗೋಳು ಕೇಳುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಸುದ್ದಿಗೋಷ್ಠಿಯಲ್ಲಿ ಸಂಘದ ಪದಾಧಿಕಾರಿಗಳಾದ ಉಮೇಶ್, ರಂಗಸ್ವಾಮಿ, ಕೀರ್ತಿ, ಪ್ರಸಾದ್, ರವಿ, ಶೋಭಾ ಹಾಜರಿದ್ದರು.