

ಮೈಸೂರು: ನಗರದ ಸ್ವರ್ಣ ನರಸಿಂಹ ದತ್ತ ಸಾಯಿ ಪೀಠಿಕಾ ಸೇವಾ ಟ್ರಸ್ಟ್‌ನಿಂದ ಬನ್ನೂರು ರಸ್ತೆಯ ಹೊರ ವಲಯದಲ್ಲಿರುವ ಕಲ್ಯಾಣ ಮಂಟಪದಲ್ಲಿ ಇತ್ತೀಚೆಗೆ ಗುರುಪೂರ್ಣಿಮೆ ಆಚರಿಸಲಾಯಿತು.
ಶ್ರೀವೆಂಕಟಾಚಲ ಅವಧೂತ ಗುರು ಮಹಾರಾಜರು ದಿವ್ಯ ಸಾನ್ನಿಧ್ಯ ವಹಿಸಿದ್ದರು. ಶ್ರೀ ಅರ್ಜುನ ಅವಧೂತ ಗುರು ಮಹಾರಾಜರು ಉಪಸ್ಥಿತಿ ವಹಿಸಿದ್ದರು. ಸ್ವಚ್ಛತಾ ಕಾರ್ಮಿಕರು ಮತ್ತು ಸಂಗೀತ ಕಾರ್ಯಕ್ರಮ ನಡೆಸಿಕೊಡಲು ಬಂದಿದ್ದ ಮುಸ್ಲಿಂ ಸಂಗೀತ ಕಲಾವಿದರು ದೀಪ ಬೆಳಗುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿ ಒಗ್ಗಟ್ಟಿನ ಸಂದೇಶ ಸಾರಿದರು.
ಮುಂಜಾನೆಯಿಂದಲೇ ವ್ಯಾಸ ಪೂಜೆ , ಕಾಕಡಾರತಿ , ಗಣಪತಿ ಹೋಮ , ಸುದರ್ಶನ ಹೋಮ , ದಕ್ಷಿಣಾ ಮೂರ್ತಿ ಹೋಮ , ದತ್ತಾತ್ರೇಯ ಹೋಮ , ಪಾದುಕಾ ಪೂಜೆ , ಸುಹಾಸಿನಿ ಪೂಜೆ, ಕುಮಾರಿ ಪೂಜೆ , ಪೂರ್ಣಾಹುತಿ ನೆರವೇರಿಸಲಾಯಿತು. ಬಳಿಕ ಸುಮಂಗಲಿಯರಿಗೆ ಗುರುಗಳು ಪಾದಪೂಜೆ ನೆರವೇರಿಸಿದರು. ನಂತರ ಭಕ್ತರು ದತ್ತಾತ್ರೇಯ ಸ್ವಾಮಿಗೆ ಅಭಿಷೇಕ ಹಾಗೂ ಪಾದುಕೆ ಪೂಜೆ ಮಾಡಿದರು.
ಸಭಾ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದ ಶ್ರೀ ಅರ್ಜುನ ಅವಧೂತರು, ಗುರು ಪೂರ್ಣಿಮೆ ಮತ್ತು ದೇಶದ ಧಾರ್ಮಿಕ ಪರಂಪರೆ ಬಗ್ಗೆ ತಿಳಿಸಿದರು.
ಶಿವಮೊಗ್ಗದ ಹೊಸನಗರ ಮೂಲೆ ಗದ್ದೆಯ ಸದಾಶಿವ ಆಶ್ರಮದ ಶ್ರೀ ಅಭಿನವ ಚನ್ನಬಸವ ಸ್ವಾಮೀಜಿ ಆಶೀರ್ವಚನ ನೀಡಿ ಅವಧೂತ ಪರಂಪರೆ ಮತ್ತು ಗುರು ಬಾಂಧವ್ಯದ ಬಗ್ಗೆ ತಿಳಿಸಿದರು. ಮೈಸೂರಲ್ಲಿ ಚಾಮುಂಡಿ ಬೆಟ್ಟಕ್ಕೆ ಹೋಗಿ ಬರುತ್ತಿದ್ದ ನಮಗೆ ಅರ್ಜುನ ಅವಧೂತರಂತಹ ಗುರು ಮನೆ ಸಿಕ್ಕಿರುವುದು ನಮ್ಮ ಸುದೈವ ಎಂದರು.
ವಿದ್ಯಾನಂದಶ್ರೀಗಳು, ಫಲಾನುಭವಿ ವಿದ್ಯಾರ್ಥಿಗಳಿಗೆ ಶಾಲಾ ಶುಲ್ಕ, ಶಾಲಾಪುಸ್ತಕ, ನೋಟ್ಸ್ ಪುಸ್ತಕ ವಿತರಣೆ ಮಾಡಿದರು.