

ಸೊರಬ: ಸಾಮಾಜಿಕ ಕಾಳಜಿ ಹೊಂದಿರುವ ಹಲವಾರು ಸೇವಾ ಟ್ರಸ್ಟ್‌ಗಳು ಆರಂಭಗೊಂಡಿವೆ. ಅವುಗಳ ಸಮಾಜಮುಖಿ ಕಾರ್ಯ ಅತ್ಯಂತ ಶ್ಲಾಘನೀಯ ಎಂದು ಜಡೆ ಸಂಸ್ಥಾನ ಮಠದ ಡಾ. ಶ್ರೀ ಮಹಾಂತ ಸ್ವಾಮೀಜಿ ಹೇಳಿದರು.
ಪಟ್ಟಣದ ಪುರಸಭೆ ಆವರಣದಲ್ಲಿ ಭಾನುವಾರ ಆನಂದ ದಾನಮ್ಮ ಚಾರಿಟೆಬಲ್ ಟ್ರಸ್ಟ್ ಸೇವಾ ಫೌಂಡೇಶನ್ ಉದ್ಘಾಟನೆ, ರಕ್ತದಾನ ಮತ್ತು ಉಚಿತ ಆರೋಗ್ಯ ತಪಾಸಣೆ ಶಿಬಿರದ ಕಾರ್ಯಕ್ರಮದಲ್ಲಿ ಸಾನ್ನಿಧ್ಯವಹಿಸಿ ಆಶೀರ್ವಚನ ನೀಡಿದರು.
ಸಮಾಜದಲ್ಲಿ ಅನೇಕ ಸೇವಾ ಟ್ರಸ್ಟ್‌ಗಳು ಆರೋಗ್ಯ. ಶಿಕ್ಷಣ, ಅನಾಥಾಶ್ರಮ, ಬಡವರು, ಅನಾಥ ಮಕ್ಕಳ ಶ್ರೇಯೋಭಿವೃದ್ಧಿಗೆ ಹಲವು ಜನಪರ ಕಾರ್ಯಕ್ರಮಗಳನ್ನು ಮಾಡುತ್ತಿವೆ. ಆ ನಿಟ್ಟಿನಲ್ಲಿ ಅನಂದ ದಾನಮ್ಮ ಚಾರಿಟೆಬಲ್ ಟ್ರಸ್ಟ್ ಸಹ ಸೇವಾ ಕಾರ್ಯಗಳನ್ನು ಮಾಡುವ ಮೂಲಕ ಹೆಚ್ಚಿನ ಮನ್ನಣೆ ಹೊಂದಲಿ ಎಂದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಸಚಿವ ಎಸ್.ಮಧು ಬಂಗಾರಪ್ಪ, ಅನೇಕ ಸೇವಾ ಟ್ರಸ್ಟ್‌ಗಳು ಸರ್ಕಾರ ಮಾಡುವ ಕೆಲಸವನ್ನು ಮಾಡುತ್ತಿವೆ. ಬಂಗಾರಪ್ಪ ಅವರು ಸೇವಾ ಟ್ರಸ್ಟ್ ಮೂಲಕ ಬಡವರ ಅನುಕೂಲಕ್ಕಾಗಿ ಸಾಮೂಹಿಕ ವಿವಾಹಗಳನ್ನು ಆಯೋಜಿಸುತ್ತಿದ್ದರು. ಅಜೀಂ ಪ್ರೇಮ್‌ಜಿ ತಮ್ಮ ಸೇವಾ ಟ್ರಸ್ಟ್ ಮೂಲಕ ಶಾಲಾ ಮಕ್ಕಳಿಗೆ ಉಚಿತವಾಗಿ ಮೊಟ್ಟೆ ನೀಡುತ್ತಿದ್ದಾರೆ. ಅವರ ಸೇವೆ ಎಂದಿಗೂ ಸ್ಮರಣೀಯ ಎಂದು ಹೇಳಿದರು.
ಶಾಂತಪುರ ಸಂಸ್ಥಾನ ಮಠದ ಶ್ರೀ ಶಿವಾನಂದ ಶಿವಾಚಾರ್ಯ ಸ್ವಾಮೀಜಿ, ಚಾರಿಟೆಬಲ್ ಟ್ರಸ್ಟ್ ಅಧ್ಯಕ್ಷ ಬಿ.ಎ.ರಂಗನಾಥ, ಗೌರವಾಧ್ಯಕ್ಷ ಆನಂದಪ್ಪ ಎಚ್. ಹರಿಗೇರ್, ಕಾರ್ಯದರ್ಶಿ ವಾಸುದೇವ, ಖಜಾಂಚಿ ಪ್ರೇಮಲತಾ, ಸದಸ್ಯರಾದ ಕೃಷ್ಣಪ್ಪ, ಮಮತಾ, ಚೇತನ್ ಡಿ. ನಾಯ್ಕ, ಸಲೋಮಿ ಲಾಜರ್, ಸುರೇಶ್, ಸುಮಾ ರಂಗನಾಥ, ಡಾ. ಜ್ಞಾನೇಶ, ಪುರಸಭಾ ಅಧ್ಯಕ್ಷ ಪ್ರಭು ಮೇಸ್ತ್ರಿ, ಉಪಾಧ್ಯಕ್ಷೆ ಶ್ರೀರಂಜಿನಿ, ತಾಲೂಕು ಅರ್ಯ ಈಡಿಗ ಸಂಘದ ಅಧ್ಯಕ್ಷ ಎಚ್.ಗಣಪತಿ, ಜಿಪಂ ಮಾಜಿ ಸದಸ್ಯ ತಬಲಿ ಬಂಗಾರಪ್ಪ, ಮುಖ್ಯಾಧಿಕಾರಿ ಎಚ್.ವಿ.ಚಂದನ್ ಇತರರಿದ್ದರು.