ಸೇವಾ ಜೇಷ್ಠತೆ ಆಧರಿಸಿ ಬಡ್ತಿ ನೀಡಬೇಕೆಂದು ಆಗ್ರಹಿಸಿ: ಮನವಿ

ಸೇವಾ ಜೇಷ್ಠತೆ ಆಧರಿಸಿ ಬಡ್ತಿ ನೀಡಬೇಕೆಂದು ಆಗ್ರಹಿಸಿ: ಮನವಿ
Published on

ಹಾಸನ: ಪ್ರಾಥಮಿಕ ಶಾಲಾ ಶಿಕ್ಷಕರ ಸೇವಾ ಜೇಷ್ಠತೆ ಆಧರಿಸಿ ಬಡ್ತಿ ನೀಡಬೇಕೆಂದು ಆಗ್ರಹಿಸಿ ಸೋಮವಾರ ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದಿಂದ ಕ್ಷೇತ್ರ ಶಿಕ್ಷಣಾಧಿಕಾರಿ ಜಿ.ಎನ್.ಮಂಜುಳಾ ಅವರಿಗೆ ಮನವಿ ಸಲ್ಲಿಸಲಾಯಿತು.
ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಅಣ್ಣಪ್ಪ ಅವರು ಮಾತನಾಡಿ, ಪ್ರಾಥಮಿಕ ಶಾಲಾ ಶಿಕ್ಷಕರಿಗೆ 2016ರ ಪೂರ್ವಾನ್ವಯದಂತೆ ಅರ್ಹತೆಯ ಆಧಾರದ ಮೇಲೆ ಪ್ರೌಢಶಾಲೆಗೆ ಬಡ್ತಿ ನೀಡಬೇಕು. ಮುಖ್ಯ ಶಿಕ್ಷಕ ಹುದ್ದೆಗೆ ಸೇವಾ ಜೇಷ್ಠತೆ ಪರಿಗಣಿಸಬೇಕು. ರಾಜ್ಯದ ಪ್ರಾಥಮಿಕ ಶಾಲೆಗಳಲ್ಲಿ ಸುಮಾರು 1,88,532 ಶಿಕ್ಷಕರಲ್ಲಿ ಹಿರಿಯ ಮುಖ್ಯ ಶಿಕ್ಷಕರು, ಮುಖ್ಯ ಶಿಕ್ಷಕರು, ಸಹ ಶಿಕ್ಷಕರು, ವಿಶೇಷ ಶಿಕ್ಷಕರು ಕರ್ತವ್ಯ ನಿರ್ವಹಿಸುತ್ತಾ 1 ರಿಂದ 7 ಮತ್ತು 1 ರಿಂದ 8ನೇ ತರಗತಿಗಳನ್ನು ಸಮರ್ಥವಾಗಿ ನಿರ್ವಹಣೆ ಮಾಡುತ್ತಾ ಬಂದಿದ್ದಾರೆ. ಆದರೆ ಈಗ ಪ್ರಾಥಮಿಕ ಶಾಲಾ ಶಿಕ್ಷಕರ ಹುದ್ದೆಯ ಪದನಾಮ ಬದಲಿಸಿ ಹೊಸ ವೃಂದ ಸೃಷ್ಟಿಸಿ ತಾರತಮ್ಯ ಮಾಡಲಾಗುತ್ತಿದೆ ಎಂದರು.
2017ರ ಮೇ 20 ರಂದು ಹೊರಡಿಸಿದ ಪ್ರಾಥಮಿಕ ಶಾಲಾ ಶಹ ಶಿಕ್ಷಕ ವೃಂದವನ್ನು ಮುಖ್ಯವಾಗಿ 1,12,467 ಪ್ರಾಥಮಿಕ ಶಾಲಾ ಶಿಕ್ಷಕರು 1 ರಿಂದ 5ನೇ ತರಗತಿಗೆ, 51,781 ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರು 6 ರಿಂದ 8ನೇ ತರಗತಿಗೆ ಎಂದು ವೃಂದವಾರು ಹುದ್ದೆಗಳನ್ನು ಮಂಜೂರು ಮಾಡಲಾಗಿದೆ. ಅದರಿಂದ 2016ಕ್ಕಿಂತ ಮೊದಲು ನೇಮಕವಾದ ಶಿಕ್ಷಕರಿಗೆ ಅನ್ಯಾಯವಾಗುತ್ತದೆ ಎಂದರು.
ಸಂಘದ ತಾಲ್ಲೂಕು ಅಧ್ಯಕ್ಷ ಸಿ.ಎಚ್.ಅಣ್ಣೇಗೌಡ ಅವರು ಮಾತನಾಡಿ, ವೃಂದಬಲ ನಿಗದಿಯಿಂದ ವೇತನ ಶ್ರೇಣಿ ವ್ಯತ್ಯಾಸವಾಗಿ ಶಿಕ್ಷಕರ ಮೇಲೆ ಋಣಾತಕ ಪರಿಣಾಮ ಬೀರುತ್ತದೆ. ಸರ್ಕಾರ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ಒತ್ತಾಯಿಸಿದರು.
ಕನ್ನಡ ಸಾಹಿತ್ಯ ಪರೀಷತ್ ಮಾಜಿ ಜಿಲ್ಲಾಧ್ಯಕ್ಷ ನಾಯಕರಹಳ್ಳಿ ಮಂಜೇಗೌಡ, ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಪ್ರಧಾನ ಕಾರ್ಯದರ್ಶಿ ಎನ್.ಎಸ್.ಲೋಕೇಶ್ ಕುಮಾರ್, ಗೌರವಾಧ್ಯಕ್ಷ ವೈ.ಜೆ.ಮಂಜುಳಾ, ಡಿ.ರಮೇಶ್, ಉಪಾಧ್ಯಕ್ಷ ಲೋಹಿತ್ ಜವರಪ್ಪ, ಎಸ್.ಎನ್.ಶುಭಮಂಗಳ, ಖಜಾಂಚಿ ಬಿ.ಎಚ್.ರಾಜು, ಸಹ ಕಾರ್ಯದರ್ಶಿ ಜಿ.ಡಿ. ಮಂಜುನಾಥ್, ಕೆ.ಎನ್.ಚೈತ್ರ, ಸಂಘಟನಾ ಕಾರ್ಯದರ್ಶಿ ಎಚ್.ವಿ.ಉಮೇಶ್, ಸುಕನ್ಯ, ನಿರ್ದೇಶಕರಾದ ದಾಕ್ಷಾಯಿಣಿ, ಎಂ.ಎಸ್.ಕೃಷ್ಣಮೂರ್ತಿ, ಬಿ.ಕೆ.ರವೀಂದ್ರ, ಆರ್.ಆಶಾ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net