

ಗೋಣಿಕೊಪ್ಪ: ಸರ್ಕಾರದ ಮಹತ್ವಾಕಾಂಕ್ಷೆ ಯೋಜನೆಗಳಲ್ಲೊಂದಾದ ಗೃಹಲಕ್ಷ್ಮಿ ಯೋಜನೆ ಜಾರಿಯಾಗಿರುವ ಹಿನ್ನೆಲೆಯಲ್ಲಿ ಸೇವಾ ಕೇಂದ್ರಗಳಲ್ಲಿ ನಾಗರಿಕರಿಗೆ ದೊರಕುತ್ತಿರುವ ಸೇವೆಯನ್ನು ಪೊನ್ನಂಪೇಟೆ ತಹಸೀಲ್ದಾರ್ ಪ್ರಶಾಂತ್ ಶುಕ್ರವಾರ ಪರಿಶೀಲಿಸಿದರು.
ಪೊನ್ನಂಪೇಟೆ ತಾಲ್ಲೂಕಿನ ವಿವಿಧ ಭಾಗದಲ್ಲಿರುವ ಸೇವಾ ಸಿಂಧು, ಬಾಪೂಜಿ ಸೇವಾ ಕೇಂದ್ರ ಹಾಗೂ ಗ್ರಾಮ 1 ಕೇಂದ್ರಗಳಿಗೆ ಪ್ರಶಾಂತ್ ಭೇಟಿ ನೀಡಿ, ನಾಗರಿಕರು ಹಾಗೂ ಕೇಂದ್ರದ ಮಾಲೀಕರಿಂದ ಮಾಹಿತಿ ಪಡೆದರು.
ಕೇಂದ್ರಗಳಲ್ಲಿ ಕಾಣಿಸಿಕೊಳ್ಳುತ್ತಿರುವ ಸರ್ವರ್ ಸಮಸ್ಯೆ ಕುರಿತು ತಹಸೀಲ್ದಾರ್ ಮಾಹಿತಿ ಪಡೆದರಲ್ಲದೆ, ಪರಿಹಾರ ಒದಗಿಸುವಂತೆ ಸಂಬಂಧಿಸಿದವರಿಗೆ ಸೂಚನೆ ನೀಡಿದರು. ಯೋಜನೆಯ ಲಾಭ ಪಡೆಯಲು ನಾಗರಿಕರು ಸರ್ಕಾರದ ನಿಯಮ ಪಾಲಿಸಬೇಕು. ಈ ವಿಷಯದಲ್ಲಿ ಯಾರೂ ಆತಂಕಕ್ಕೆ ಒಳಗಾಗುವ ಅವಶ್ಯಕತೆ ಇಲ್ಲ. ಅರ್ಹತೆ ಇರುವವರಿಗೆ ಯೋಜನೆಯ ಫಲ ದೊರೆಯಲಿದೆ ಎಂದರು.
ಪೊನ್ನಂಪೇಟೆ ತಾಲೂಕಿನ ಬಾಪೂಜಿ ಸೇವಾ ಕೇಂದ್ರದಲ್ಲಿ 339, ಗ್ರಾಮ 1 ಕೇಂದ್ರದಲ್ಲಿ 233 ಫಲಾನುಭವಿಗಳು ಗ್ಯಾರಂಟಿ ಪ್ರಯೋಜನ ಪಡೆದಿದ್ದಾರೆ ಎಂದು ಪ್ರಶಾಂತ್ ಮಾಹಿತಿ ನೀಡಿದರು.
ಕಂದಾಯ ಪರಿವೀಕ್ಷಕ ಮಹೇಶ್, ಸಿಬ್ಬಂದಿ ಚಂದ್ರ ಹಾಜರಿದ್ದರು.