

ಚಿತ್ರದುರ್ಗ: ಸೇವಾ ಕಾರ್ಯಗಳಿಂದ ಸದಾ ಜೀವಂತವಾಗಿರಬಹುದು ಎಂಬುದಕ್ಕೆ ಮುರುಗಿ ಪರಂಪರೆಯ ಮಹಾನುಭವರ ಸಮಾಜಮುಖಿ ಚಿಂತನೆಗಳೇ ಸಾಕ್ಷಿ ಎಂದು ಗುರುಮಠಕಲ್ ಖಾಸಾ ಮುರುಘಾಮಠದ ಶ್ರೀ ಶಾಂತವೀರ ಗುರು ಮುರುಘರಾಜೇಂದ್ರ ಸ್ವಾಮೀಜಿ ಹೇಳಿದರು.
ಹೊಳಲ್ಕೆರೆ ತಾಲೂಕು ಗಿಲಿಕೇನಹಳ್ಳಿಯಲ್ಲಿ ಈಚೆಗೆ ಹಮ್ಮಿಕೊಂಡಿದ್ದ ಅನುಭಾವ ಶ್ರಾವಣದ ಕಾರ‌್ಯಕ್ರಮದಲ್ಲಿ ಮಾತನಾಡಿ, ಸರ್ವ ಕ್ಷೇತ್ರಗಳಲ್ಲಿ ಶ್ರೀಮಠದ ಗುರುತರ ಕೊಡುಗೆ ಕಾಣಬಹುದಾಗಿದೆ. ಹಾಗಾಗಿ ಈ ಗ್ರಾಮವೂ ಪೀಠ ಪರಂಪರೆ ಜತೆಗೆ ಗುರುತಿಸಿಕೊಂಡಿದೆ ಎಂದರು.
ಮಹಾನುಭಾವರು ತಮ್ಮ ಸಮಾಜಮುಖಿ ಕಾರ‌್ಯಗಳ ಮೂಲಕ ಸದಾ ನಮ್ಮೊಡನಿರುತ್ತಾರೆ, ಅಂಥವರ ಸಾಲಿನಲ್ಲಿ ಮುರುಘಾಮಠದ ಶೂನ್ಯಪೀಠ ಹಾಗೂ ಮುರುಗಿ ಪರಂಪರೆ ಮಹಾನುಭಾವರಿದ್ದಾರೆ ಎಂದು ತಿಳಿಸಿದರು.
ರಾವಂದೂರು ಮುರುಘಾಮಠದ ಶ್ರೀ ಮೋಕ್ಷಪತಿ ಸ್ವಾಮೀಜಿ ಮಾತನಾಡಿ, ಜನಮಾನಸದಲ್ಲಿ ಮುರುಘಾಮಠವು ಮುರಿಗಿಮಠವೆಂದೇ ಜನಜನಿತವಾಗಿದೆ. ಸಾರ್ವಜನಿಕರ ಹಿತಕ್ಕಾಗಿಯೇ ಶ್ರೀಮಠದ ಅನೇಕ ಕಾರ‌್ಯಕ್ರಮಗಳನ್ನು ರೂಪಿಸಿಕೊಂಡು ಬರುತ್ತಿದೆ ಎಂದರು.
ದಾವಣಗೆರೆ ವಿರಕ್ತಮಠದ ಡಾ. ಶ್ರೀ ಬಸವಪ್ರಭು ಸ್ವಾಮೀಜಿ ಮಾತನಾಡಿ, ಗಣ್ಯ ಪರಂಪರೆ ಹೊಂದಿರುವ ಮುರುಘಾಮಠವು ಸಾಮಾಜಿಕ, ಧಾರ್ಮಿಕ ಹಾಗೂ ಶಿಕ್ಷಣ ಕ್ಷೇತ್ರದಲ್ಲಿ ಅನುಪಮ ಸೇವೆ ಸಲ್ಲಿಸುತ್ತ ಬಂದಿದೆ ಎಂದು ತಿಳಿಸಿದರು.
ಮುರುಘಾಮಠದ ಆಡಳಿತ ಮಂಡಳಿ ಸದಸ್ಯ ಡಾ. ಶ್ರೀ ಬಸವಕುಮಾರ ಸ್ವಾಮೀಜಿ ಮಾತನಾಡಿ, ಸಾಮಾಜಿಕ ಕಳಕಳಿಯೇ ಮುರುಘಾಮಠದ ಮೂಲ ಧ್ಯೇಯವಾಗಿತ್ತು. ಅದು ಈಗಲೂ ಮುಂದುವರಿದಿದೆ ಎಂದರು.
ಒಂದನೇಯ ಮುರಿಗೆ ಶಾಂತವೀರ ಸ್ವಾಮೀಜಿ ಅವರಿಂದ ಈ ಪೀಠ ಪರಂಪರೆಯ 20 ಪೀಠಾಧೀಶರ ಸಾಮಾಜಿಕ ಧಾರ್ಮಿಕ ಶೈಕ್ಷಣಿಕ ಕೆಲಸಗಳ ಕುರಿತು ಚಿತ್ರದುರ್ಗದ ಅಲ್ಲಮಪ್ರಭು ಸಂಶೋಧನಾ ಕೇಂದ್ರದ ಡಾ.ವಿ.ನಾಗರಾಜ್ ಮಾಹಿತಿ ನೀಡಿದರು.
ಮುರುಘಾಮಠ ಗುರುಕುಲದ ಶ್ರೀ ಮುರುಘೇಶ ಸ್ವಾಮೀಜಿ ಮಾತನಾಡಿದರು. ಬಸವಕಲ್ಯಾಣದ ಶಿವಕುಮಾರ ಸ್ವಾಮೀಜಿ, ಒಂಟಿಕುಂಬ ಮುರುಘಾಮಠದ ಶ್ರೀ ತಿಪ್ಪೇರುದ್ರ ಸ್ವಾಮೀಜಿ, ಕಲ್ಕೆರೆಯ ಶ್ರೀ ಪೂರ್ಣಾನಂದ ಸ್ವಾಮೀಜಿ ಇದ್ದರು.
ಕಾರ‌್ಯಕ್ರಮಕ್ಕೂ ಮೊದಲು ಗ್ರಾಮದಲ್ಲಿ ಸಸಿ ನೆಡಿಸಲಾಯಿತು. ಬಸವೇಶ್ವರ ಆಸ್ಪತ್ರೆಯ ತಜ್ಞವೈದ್ಯರ ತಂಡದಿಂದ ಆರೋಗ್ಯ ತಪಾಸಣೆ ಶಿಬಿರ ಏರ್ಪಡಿಸಲಾಗಿತ್ತು. ಜಮುರಾ ಕಲಾವಿದರು ವಚನ ಪ್ರಾರ್ಥಿಸಿದರು. ರಂಗಸ್ವಾಮಿ ಸ್ವಾಗತಿಸಿದರು. ಪ್ರಶಾಂತ್ ನಿರೂಪಿಸಿದರು.