

ಚಿಕ್ಕಮಗಳೂರು: ಶಾಸಕ, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಅವರ 55ನೇ ಜನ್ಮದಿನದ ಅಂಗವಾಗಿ ಸೋಮವಾರ ಚಿಕ್ಕಮಗಳೂರಿನ ವಿವಿಧೆಡೆ ವಿವಿಧ ಮೋರ್ಚಾಗಳಿಂದ ಆರೋಗ್ಯ ತಪಾಸಣೆ, ವಿದ್ಯಾರ್ಥಿಗಳಿಗೆ ಪುಸ್ತಕ ವಿತರಣೆ, ವನಮಹೋತ್ಸವ, ಶಾಲಾ ಮಕ್ಕಳಿಗೆ ರೈನ್ಕೋಟ್ ವಿತರಣೆ, ಸ್ವಚ್ಛತಾ ಶ್ರಮದಾನ ಮತ್ತಿತರ ಸೇವಾ ಕಾರ್ಯಗಳನ್ನು ನಡೆಸಲಾಯಿತು.
ದಂಟರಮಕ್ಕಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮೋಹನ್ಕುಮಾರ್ ನೇತೃತ್ವದಲ್ಲಿ ನೂರಾರು ವಿದ್ಯಾರ್ಥಿಗಳಿಗೆ ಪಠ್ಯ ಪರಿಕರ ನೀಡಲಾಯಿತು. ನಗರಸಭೆ ಸದಸ್ಯ ಮಧುಕುಮಾರ್ರಾಜ್ ಅರಸ್ ಮಾತನಾಡಿ, ವಿದ್ಯೆ ಮಾತ್ರ ಬೆಲೆ ಕಟ್ಟಲಾಗದ ಆಸ್ತಿ, ವಿದ್ಯಾವಂತ ದೇಶಗಳು ಮಾತ್ರ ಅಭಿವೃದ್ಧಿ ಹೊಂದಲು ಸಾಧ್ಯ. ಹಾಗಾಗಿ ಮಕ್ಕಳು ಶಿಕ್ಷಣವಂತರಾದಾಗ ಮಾತ್ರ ಭವಿಷ್ಯ ರೂಪಿಸಿಕೊಳ್ಳಲು ಸಾಧ್ಯ ಎಂದರು. ಚಂದ್ರಶೇಖರ್, ಗಣೇಶ್, ಅಶೋಕ್, ಶಿಕ್ಷಕರಾದ ಬಲರಾಮ್ ಲೋಕನಾಥ್, ಉಮಾದೇವಿ ಇದ್ದರು. ಕೆಂಪನಹಳ್ಳಿ ಅಂಬೇಡ್ಕರ್ ಬಡಾವಣೆಯಲ್ಲಿ ಉಚಿತ ಆರೋಗ್ಯ ತಪಾಸಣೆ ಮತ್ತು ಔಷಧ ವಿತರಣೆ ಕಾರ್ಯಕ್ರಮಕ್ಕೆ ನಗರಸಭೆ ಅಧ್ಯಕ್ಷ ವರಸಿದ್ಧಿ ವೇಣುಗೋಪಾಲ್ ಚಾಲನೆ ನೀಡಿದರು. ನಂತರ ಮಾತನಾಡಿ, ಕ್ಷೇತ್ರದಲ್ಲಿ ಶಾಸಕರ ಜನ್ಮದಿನವನ್ನು ಸೇವಾಕಾರ್ಯಗಳ ಮೂಲಕ ಸರಳವಾಗಿ ಆಚರಿಸಲಾಗುತ್ತಿದೆ ಎಂದರು.