

ಕೊಡಗು: ಭಾರತೀಯ ಸೇನೆಯ ಅವಿಭಾಜ್ಯ ಅಂಗವಾಗಿರುವ ಭಾರತೀಯ ವಾಯುಸೇನೆ ಪ್ರಪಂಚದ ಅತಿ ದೊಡ್ಡ ವಾಯು ಸೇನೆಗಳಲ್ಲಿ ಒಂದು. ದೇಶದ ವೈಮಾನಿಕ ವಲಯದ ರಕ್ಷಣೆ, ಯುದ್ಧದ ತುರ್ತು ಪರಿಸ್ಥಿತಿಯಲ್ಲಿ ಕಾರ್ಯಾಚರಣೆ ನಡೆಸಲಿದೆ. ಜತೆಗೆ ನೈಸರ್ಗಿಕ ವಿಕೋಪ ಉಂಟಾದಾಗಲೂ ರಕ್ಷಣಾ ಕಾರ್ಯಾಚರಣೆಗೆ ನೇತೃತ್ವ ವಹಿಸಲಿದೆ ಎಂದು ಭಾರತೀಯ ವಾಯುಸೇನೆಯ ಫ್ಲೈಟ್ ಲೆಫ್ಟಿನೆಂಟ್ ಗೌರವ ಶರ್ಮ ಹೇಳಿದರು.
ಕುಶಾಲನಗರದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದಲ್ಲಿ ಭಾರತೀಯ ವಾಯುಸೇನೆ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಕೊಡಗು ಜಿಲ್ಲೆ ಹಾಗೂ ರಾಷ್ಟ್ರೀಯ ಸೇವಾ ಯೋಜನೆ ಸಂಯುಕ್ತಾಶ್ರಯದಲ್ಲಿ ಶಾಲೆಯ ಎನ್‌ಎಸ್‌ಎಸ್ ಘಟಕದ ಸಹಯೋಗದಲ್ಲಿ ವಾಯುಸೇನೆಯ ಬಸ್‌ನಲ್ಲಿ ಅಳವಡಿಸಿರುವ ಸೇನೆ ಕುರಿತು ವಿಡಿಯೋ-ಚಿತ್ರಗಳೊಂದಿಗೆ ಮಾಹಿತಿ ನೀಡಿದ ಅವರು ವಿದ್ಯಾರ್ಥಿಗಳು ಭಾರತೀಯ ಸೇನೆ ಬಗ್ಗೆ ಹೆಚ್ಚಿನ ಜ್ಞಾನ ಗಳಿಸಿಕೊಂಡು ಭವಿಷ್ಯದಲ್ಲಿ ಭಾರತೀಯ ಸೇನೆಗೆ ಸೇರ್ಪಡೆಗೊಳ್ಳಲು ಸಂಕಲ್ಪ ಮಾಡಬೇಕು ಎಂದು ತಿಳಿಸಿದರು.
ದೇಶದ ಯುವಶಕ್ತಿಯೇ ಸೇನೆಯ ಬಲ. ಹಾಗಾಗಿ, ಯುವಕರಿಗೆ ಭಾರತೀಯ ವಾಯುಸೇನೆಯ ಬಗ್ಗೆ ಹೆಚ್ಚಿನ ತಿಳಿವಳಿಕೆ ನೀಡುವ ಸಲುವಾಗಿ ವಾಯುಸೇನೆಯ ಬಸ್ ಮೂಲಕ ಜಿಲ್ಲೆಯ ಶಾಲಾ- ಕಾಲೇಜುಗಳಿಗೆ ತೆರಳಿ ಭಾರತೀಯ ವಾಯುಸೇನೆಯ ಬಗ್ಗೆ ಜಾಗೃತಿ ಹಾಗೂ ಮಾಹಿತಿ ನೀಡಲಾಗುತ್ತಿದೆ ಎಂದು ಹೇಳಿದರು.
ಆಧುನಿಕತೆಯೊಂದಿಗೆ ತಂತ್ರಜ್ಞಾನಗಳಲ್ಲೂ ಅಭಿವೃದ್ಧಿ ತಂದಿರುವ ಭಾರತೀಯ ವಾಯುಪಡೆ ಈಗ ವಿಶ್ವದ ಮುಂಚೂಣಿಯ ಯುದ್ಧ ವಿಮಾನಗಳ ಒಡೆಯನಾಗಿದೆ ಎಂದು ಮಾಹಿತಿ ನೀಡಿದರು.
ಭಾರತೀಯ ವಾಯುಪಡೆಯು ವಿಶ್ವದಲ್ಲೇ ಏಳನೇ ಶಕ್ತಿಶಾಲಿ ವಾಯುಸೇನೆಯಾಗಿದೆ. ಭಾರತೀಯ ವಾಯು ಸೇನೆಯಲ್ಲಿರುವ ವಿವಿಧ ಘಟಕಗಳು, ಸೇನೆಗೆ ಸೇರಲು ಬೇಕಾದ ಅರ್ಹತೆ ಮತ್ತು ಪರೀಕ್ಷಾ ಕ್ರಮಗಳು, ಸೇನೆಯ ತರಬೇತಿ ಮತ್ತು ಸೇವೆ, ಸೇನೆಯಿಂದ ದೇಶದ ರಕ್ಷಣೆಗೆ ಆಗುವ ಉಪಯೋಗಗಳು ಕುರಿತು ವಿದ್ಯಾರ್ಥಿಗಳು ಕೇಳಿದ ಪ್ರಶ್ನೆಗಳಿಗೆ ಗೌರವ್ ಶರ್ಮ ಹೇಳಿದರು.
ಜಿಲ್ಲಾ ದೈಹಿಕ ಶಿಕ್ಷಣಾಧಿಕಾರಿ ಡಾ.ಸದಾಶಿವಯ್ಯ, ಎಸ್.ಪಲ್ಲೇದ್ ಮಾತನಾಡಿ, ಯುವ ಜನಾಂಗದಲ್ಲಿ ವಾಯುಸೇನೆಯ ಬಗ್ಗೆ ಅರಿವು ಮೂಡಿಸುವುದರೊಂದಿಗೆ ಮುಂದಿನ ದಿನಗಳಲ್ಲಿ ಸೇನೆಗೆ ಸೇರಲು ಇಂಥ ಪ್ರದರ್ಶನ ಸಹಕಾರಿಯಾಗಲಿದೆ ಎಂದರು.
ಕೂಡುಮಂಗಳೂರು ಸರ್ಕಾರಿ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಟಿ.ಜಿ.ಪ್ರೇಮಕುಮಾರ್ ಮಾತನಾಡಿ, ಭಾರತೀಯ ವಾಯುಸೇನೆ ಹಾಗೂ ರಾಷ್ಟ್ರದ ಸಾರ್ವಭೌಮತೆಯ ಬಗ್ಗೆ ವಿದ್ಯಾರ್ಥಿಗಳಲ್ಲಿ ಹೆಮ್ಮೆ ಮೂಡಿಸುವ ಉದ್ದೇಶದಿಂದ ಇಂಥ ಪ್ರದರ್ಶನ ಏರ್ಪಡಿಸಲಾಗಿದೆ ಎಂದು ತಿಳಿಸಿದರು.
ವಿದ್ಯಾರ್ಥಿಗಳಿಗೆ ಸೇನೆಯ ಮಾಹಿತಿಯನ್ನು ಕನ್ನಡ ಭಾಷೆಯಲ್ಲಿ ಶಿಕ್ಷಕಿ ಬಿ.ಎಸ್.ಅನ್ಸಿಲಾ ರೇಖಾ ವಿವರಿಸಿದರು. ಪ್ರಾಂಶುಪಾಲ ನಾಗೇಶ್, ಉಪ ಪ್ರಾಂಶುಪಾಲ ಪರಮೇಶ್ವರಪ್ಪ ಇತರರು ಇದ್ದರು.
ಪ್ರದರ್ಶನ :ರಾಷ್ಟ್ರದ ಭದ್ರತೆ ಮತ್ತು ಸುರಕ್ಷತೆಗಾಗಿ ವಾಯುಸೇನಾ ಪಡೆಗಳು ಬಳಸುವ ಯುದ್ಧ ವಿಮಾನಗಳು ಹಾಗೂ ಅತ್ಯಾಧುನಿಕ ಅತ್ಯುನ್ನತ ಶಸ್ತ್ರಾಸ್ತ್ರಳನ್ನು ಒಳಗೊಂಡ ವಿಡಿಯೋ ಚಿತ್ರಗಳನ್ನು ಪ್ರದರ್ಶಿಸಲಾಯಿತು.