ಸೇನಾ ಅಭ್ಯರ್ಥಿಗಳ ನೆರವಿಗೆ ಮಾನವತಾ ಫೌಂಡೇಷನ್

Manavata Foundation Photo-1
Published on

ಬೀದರ್: ಇಲ್ಲಿಯ ಮಾನವತಾ ಫೌಂಡೇಷನ್ ಅಗ್ನಿಪಥದ ಅಗ್ನಿವೀರರ ನೇಮಕಾತಿಗೆ ನಗರಕ್ಕೆ ಆಗಮಿಸುತ್ತಿರುವ ವಿವಿಧೆಡೆಯ ಅಭ್ಯರ್ಥಿಗಳ ನೆರವಿಗೆ ಬಂದಿದೆ.
ನಗರದ ನೆಹರೂ ಕ್ರೀಡಾಂಗಣದಲ್ಲಿ ನಿತ್ಯ ರುಚಿಕಟ್ಟಾದ ಊಟದ ಮೂಲಕ 700 ಮಂದಿಯ ಹಸಿವು ನೀಗಿಸುತ್ತಿದೆ.
ಮಧ್ಯಾಹ್ನ ಆಗುತ್ತಿದ್ದಂತೆಯೇ ವಾಹನದಲ್ಲಿ ಆಹಾರ ಹೊತ್ತು ಕ್ರೀಡಾಂಗಣಕ್ಕೆ ಬರುತ್ತಿರುವ ಫೌಂಡೇಷನ್ ಸದಸ್ಯರು ಅಭ್ಯರ್ಥಿಗಳಿಗೆ ದಾಸೋಹ ಸೇವೆಗೈಯುತ್ತಿದ್ದಾರೆ.
ಸೇನೆಗೆ ಸೇರಲು ಬೀದರ್, ಬೆಳಗಾವಿ, ಕೊಪ್ಪಳ, ಯಾದಗಿರಿ, ರಾಯಚೂರು, ಗೋಕಾಕ, ಹುಕ್ಕೇರಿ, ಗಂಗಾವತಿ, ಆಳಂದ ಸೇರಿದಂತೆ ವಿವಿಧೆಡೆಯ ಅಭ್ಯರ್ಥಿಗಳು ನಿತ್ಯ ಸಾವಿರಾರು ಸಂಖ್ಯೆಯಲ್ಲಿ ನಗರಕ್ಕೆ ಬರುತ್ತಿದ್ದಾರೆ. ಅವರಿಗೆ ನೆರವಾಗಲು ಫೌಂಡೇಷನ್‍ನಿಂದ ಆಹಾರ ವ್ಯವಸ್ಥೆ ಮಾಡಲಾಗುತ್ತಿದೆ ಎಂದು ಫೌಂಡೇಷನ್ ಅಧ್ಯಕ್ಷ ಆಕಾಶ ಕರ್ಪೂರ ತಿಳಿಸಿದರು.
ನಿತ್ಯ ಮಧ್ಯಾಹ್ನ 1.30ಕ್ಕೆ 650 ರಿಂದ 700 ಅಭ್ಯರ್ಥಿಗಳಿಗೆ ಹೊಟ್ಟೆ ತುಂಬ ರುಚಿಕಟ್ಟಾದ ವೆಜ್ ಬಿರಿಯಾನಿ, ಕೋಸಂಬರಿ ಊಟ ಹಾಗೂ ಒಂದು ಮೊಟ್ಟೆ ಕೊಡಲಾಗುತ್ತಿದೆ. ಅಭ್ಯರ್ಥಿಗಳಿಗೆ 10 ದಿನಗಳಿಂದ ಉಚಿತ ಆಹಾರ ಒದಗಿಸಲಾಗುತ್ತಿದೆ. ಸೇನಾ ರ್ಯಾಲಿ ಮುಕ್ತಾಯಗೊಳ್ಳುವವರೆಗೂ ಆಹಾರ ಸೇವೆ ಮುಂದುವರಿಯಲಿದೆ ಎಂದು ಹೇಳಿದರು.
ಕೋವಿಡ್ ಸಂದರ್ಭದಲ್ಲಿ ಫೌಂಡೇಷನ್‍ನಿಂದ ಬಡವರು ಹಾಗೂ ಕೋವಿಡ್ ಮುಂಚೂಣಿ ಕಾರ್ಯಕರ್ತರಿಗೆ ಆಹಾರ ವಿತರಣೆ ಮಾಡಲಾಗಿತ್ತು. ಭಾರತ ಮಾತೆ ಸೇವೆ ಸರ್ವ ಶ್ರೇಷ್ಠ. ಹೀಗಾಗಿ ಸೇನೆಗೆ ಸೇರಲು ಉತ್ಸಾಹದಿಂದ ಬರುತ್ತಿರುವ ಅಭ್ಯರ್ಥಿಗಳಿಗೆ ಉಚಿತ ಊಟ ಕೊಡುವ ಮೂಲಕ ಫೌಂಡೇಷನ್ ಅಳಿಲು ಸೇವೆ ಸಲ್ಲಿಸುತ್ತಿದೆ ಎಂದು ತಿಳಿಸಿದರು.
ಫೌಂಡೇಷನ್ ಉಪಾಧ್ಯಕ್ಷ ಆಕಾಶ ನಾಗಮಾರಪಳ್ಳಿ, ಕಾರ್ಯದರ್ಶಿ ಪ್ರಸಾದ ಸಿಂದೋಲ್, ಖಜಾಂಚಿ ಜಯೇಶ್ ಪಟೇಲ್, ಸದಸ್ಯರಾದ ಅನಿಲ್ ಗಂದಗೆ, ಚನ್ನಬಸವ ಮುದ್ದಪ್ಪ, ಹರೀಶ್ ಪಟೇಲ್, ಕೃಷ್ಣ ಪಸರಗೆ, ನಕುಲ್ ಪಾಟೀಲ ಕಣಜಿ, ನಂದಕಿಶೋರ ಜಹಗೀರದಾರ್, ನಿಖಿಲ್ ರಾಗಾ, ನಿತಿನ್ ಕರ್ಪೂರ, ಪವನ್ ಸಿಂಗ್ ಠಾಕೂರ್, ಸಂದೀಪ್ ಪಾಟೀಲ, ಸಂಗಮೇಶ ಸಾಗರ ಬೊಮ್ಮಾ, ವೀರೇಶ ಸ್ವಾಮಿ ಹಾಗೂ ಸೋಮಶೇಖರ ಬಿ. ಪಾಟೀಲ ಅವರು ಅಭ್ಯರ್ಥಿಗಳಿಗೆ ಉಚಿತ ಆಹಾರ ವ್ಯವಸ್ಥೆ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ ಎಂದು ಹೇಳಿದರು.
ಮಾನವತಾ ಫೌಂಡೇಷನ್ ಸದಸ್ಯರು ನಿತ್ಯ ಉಚಿತ ಆಹಾರ ಪೂರೈಕೆ ಮೂಲಕ ತಮಗೆ ನೆರವಾಗಿದ್ದಕ್ಕೆ ಸೇನಾ ರ್ಯಾಲಿಗೆ ಬಂದ ಅಭ್ಯರ್ಥಿಗಳು ಕೃತಜ್ಞತೆ ಸಲ್ಲಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net