ಸೇತುವೆ ವಿಚಾರದಲ್ಲಿ ರಾಜಕೀಯವಿಲ್ಲ

4sgr2
ಶರಾವತಿ ಹಿನ್ನೀರಿನಲ್ಲಿ ಅಂಬಾರಗೋಡ್ಲು- ಕಳಸವಳ್ಳಿ ಸೇತುವೆ ಕಾಮಗಾರಿಯನ್ನು ಸಚಿವ ಮಧು ಬಂಗಾರಪ್ಪ, ಶಾಸಕ ಗೋಪಾಲಕೃಷ್ಣ ಬೇಳೂರು ವೀಕ್ಷಿಸಿದರು. ಆರ್. ಪ್ರಸನ್ನಕುಮಾರ್, ಕಲಸೆ ಚಂದ್ರಪ್ಪ, ಸೋಮಶೇಖರ ಲಾವಿಗೆರೆ ಇತರರಿದ್ದರು.
Published on

ಸಾಗರ: ಶರಾವತಿ ಹಿನ್ನೀರಿನ ಪ್ರದೇಶಕ್ಕೆ ಒಂದೇ ಕಾಲದಲ್ಲಿ ಎರಡು ಕಡೆ ಸೇತುವೆ ನಿರ್ಮಾಣ ಆಗುತ್ತಿರುವುದು ಒಳ್ಳೆಯ ಸಂಗತಿ. ಅಭಿವೃದ್ಧಿ ಕಾಮಗಾರಿಯನ್ನು ಯಾರೇ ಮಾಡಲಿ ಜನತೆಗೆ ಅನುಕೂಲವಾಗಬೇಕು. ಈ ವಿಚಾರದಲ್ಲಿ ನಾವು ಎಂದಿಗೂ ರಾಜಕೀಯ ಮಾಡುವುದಿಲ್ಲ. ಎಲ್ಲವನ್ನೂ ನಾವೇ ಮಾಡಿದ್ದೇವೆ ಎಂದು ಢಂಗೂರ ಸಾರುವುದಿಲ್ಲ. ನಿಗದಿತ ಸಮಯದಲ್ಲಿ ಕೆಲಸ ಮುಗಿಯಬೇಕು ಎಂಬುದೇ ನಮ್ಮ ಗುರಿ ಎಂದು ಜಿಲ್ಲಾ ಉಸ್ತುವಾರಿ ಸಚಿವ ಹೇಳಿದರು. ಕಳಸವಳ್ಳಿ-ಅಂಬಾರಗೋಡ್ಲು ಮತ್ತು ಹಸಿರುಮಕ್ಕಿ ಸೇತುವೆ ಕಾಮಗಾರಿಯನ್ನು ಶುಕ್ರವಾರ ವೀಕ್ಷಿಸಿ ಮಾತನಾಡಿದ ಅವರು, ಕಳಸವಳ್ಳಿ- ಅಂಬಾರಗೋಡ್ಲು ಸೇತುವೆ ನಿರ್ಮಾಣಕ್ಕೆ ಅನೇಕ ಜನರು ನಿರಂತರ ಹೋರಾಟ ಮಾಡಿಕೊಂಡು ಬಂದಿದ್ದಾರೆ ಎಂದರು. ಈ ಭಾಗದ ಪ್ರಸನ್ನ ಕೆರೆಕೈ ಮತ್ತು ಅನೇಕರು ಸೇತುವೆಗಾಗಿ ನಿರಂತರ ಹೋರಾಟ ಮಾಡಿದ್ದಾರೆ. ಹೋರಾಟ ಮಾಡಿದವರನ್ನೆಲ್ಲ ಹಿಂದೆ ತಳ್ಳಿ, ಅಣ್ಣ-ತಮ್ಮ ತಮ್ಮದೇ ಸಾಧನೆಯೆಂದು ಬಿಂಬಿಸಿಕೊಳ್ಳುತ್ತಿದ್ದಾರೆ ಎಂದು ಟೀಕಿಸಿದರು. ತುಮರಿ ಸೇತುವೆ ಶೀಘ್ರ ಸಾರ್ವಜನಿಕರ ಸಂಚಾರಕ್ಕೆ ಮುಕ್ತವಾಗಬೇಕು. ಸೇತುವೆ ಉದ್ಘಾಟನೆಗೆ ಬಿಜೆಪಿ ಅವರು ಪ್ರಧಾನಿ ಮೋದಿ ಅವರನ್ನಾದರೂ ಕರೆಯಲಿ, ಗಡ್ಕರಿ ಅವರನ್ನಾದರೂ ಕರೆಯಲಿ ಅಥವಾ ಮೋದಿ ಅವರ ಸ್ನೇಹಿತ ಡೊನಾಲ್ಡ್ ಟ್ರಂಪ್ ಅವರನ್ನು ಬೇಕಾದರೂ ಕರೆಯಲಿ. ಎರಡು ಸೇತುವೆಗಳು ಜನರ ಉಪಯೋಗಕ್ಕಾಗಿ ಶೀಘ್ರ ದೊರೆಯಬೇಕು ಎಂದರು. ಶಾಸಕ ಗೋಪಾಲಕೃಷ್ಣ ಬೇಳೂರು ಮಾತನಾಡಿ, ಶರಾವತಿ ಹಿನ್ನೀರಿನ ಜನರ ಬಹುದಿನದ ಕನಸು ನನಸಾಗುವಲ್ಲಿ ಯಡಿಯೂರಪ್ಪ ಅವರ ಶ್ರಮ ಬಹಳ ದೊಡ್ಡದು. ಜನ ಎಲ್ಲವನ್ನು ಗಮನಿಸುತ್ತಾರೆ ಎಂದು ಹಿಂದೆ ಯಡಿಯೂರಪ್ಪ ಅವರಿಗೆ ನೀಡಿದ್ದ ಸೇತುವೆ ನಿರ್ಮಾಣ ಕುರಿತ ಮನವಿ ಪ್ರತಿಯನ್ನು ಪ್ರದರ್ಶಿಸಿದರು. ಕಾಂಗ್ರೆಸ್ ಜಿಲ್ಲಾಧ್ಯಕ್ಷ ಆರ್.ಪ್ರಸನ್ನಕುಮಾರ್, ಗ್ಯಾರಂಟಿ ಅನುಷ್ಠಾನ ಸಮಿತಿ ತಾಲೂಕು ಅಧ್ಯಕ್ಷ ಬಿ.ಆರ್.ಜಯಂತ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕಲಸೆ ಚಂದ್ರಪ್ಪ, ಸಾಗರ ತಹಸೀಲ್ದಾರ್ ಚಂದ್ರಶೇಖರ ನಾಯ್ಕ, ಹೊಸನಗರ ತಹಸೀಲ್ದಾರ್ ರಶ್ಮಿ, ಟಿ.ಪಿ.ರಮೇಶ್, ಅನಿಲ್ಕುಮಾರ್, ಪ್ರಮುಖರಾದ ಸೋಮಶೇಖರ ಲಾವಿಗೆರೆ, ಅನಿತಾ ಕುಮಾರಿ, ಅಶೋಕ್ ಬೇಳೂರು, ಗಣಪತಿ ಮಂಡಗಳಲೆ, ಮಧು ಮಾಲತಿ, ಮೈಕಲ್ ಡಿಸೋಜಾ, ಲೋಕೇಶ್ ಗಾಳಿಪುರ, ಎಲ್. ಚಂದ್ರಪ್ಪ ಇತರರಿದ್ದರು.

ರಾಜ್ಯದ ಜನರ ತೆರಿಗೆ ಹಣ ತುಮರಿ ಸೇತುವೆಗೆ ಹಣ ತಂದವರು ತಾವೇ ಎಂದು ಸಂಸದರು ಹೇಳುತ್ತಾರೆ. ರಾಜ್ಯದ ಜನರು ಕೇಂದ್ರ ತೆರಿಗೆಗೂ ಹಣ ನೀಡಿದ್ದಾರೆ ಎಂಬುದನ್ನು ಮರೆಯಬಾರದು. ಅದೇನೇ ಇರಲಿ ಕೇಂದ್ರ ಮತ್ತು ರಾಜ್ಯ ಸರ್ಕಾರದಿಂದ ನಮ್ಮ ಭಾಗಕ್ಕೆ ಅನುದಾನ ಬಂದಿದೆ. ಹಸಿರುಮಕ್ಕಿ ಸೇತುವೆ ಕಾಮಗಾರಿಗೆ ಹಿಂದಿನ ಬಿಜೆಪಿ ಸರ್ಕಾರಕ್ಕೆ ಸಂಪೂರ್ಣ ಸಹಮತ ಇರಲಿಲ್ಲ. ಕಾಗೋಡು ತಿಮ್ಮಪ್ಪ ಅವರ ಪ್ರಯತ್ನವೇ ಈ ಸೇತುವೆ ಆಗಲು ಕಾರಣ ಎಂದು ಮಧು ಬಂಗಾರಪ್ಪ ಹೇಳಿದರು. 125 ಕೋಟಿ ರೂ.ಗಳನ್ನು ರಾಜ್ಯ ಸರ್ಕಾರ ಈ ಸೇತುವೆಗೆ ನೀಡುತ್ತಿದೆ. ಆರಂಭದಲ್ಲಿ ಇದಕ್ಕೆ 32 ಕೋಟಿ ರೂ. ಮಂಜೂರಾಗಿತ್ತು. ಕಾಮಗಾರಿ ಬಗ್ಗೆ ಹಿಂದಿನ ಬಿಜೆಪಿ ಸರ್ಕಾರ ಗಮನ ಹರಿಸಲಿಲ್ಲ. ನಮ್ಮ ಸರ್ಕಾರ ಬಂದ ಮೇಲೆ ಗೋಪಾಲಕೃಷ್ಣ ಬೇಳೂರು ಅವರು ವಿಶೇಷ ಪ್ರಯತ್ನ ಮಾಡಿ 45 ಕೋಟಿ ರೂ. ಮಂಜೂರು ಮಾಡಿಸಿದ್ದಾರೆ. ಕಾಮಗಾರಿಗಳು ಮುಗಿಯುತ್ತಿದ್ದು, ಮೇ ತಿಂಗಳಲ್ಲಿ ಲೋಕಾರ್ಪಣೆ ಆಗಲಿದೆ. ಶರಾವತಿ ಮುಳುಗಡೆ ಸಂತ್ರಸ್ತರಿಗೆ ನಾವು ನ್ಯಾಯ ದೊರಕಿಸಿ ಕೊಡುತ್ತೇವೆ. ನುಡಿದಂತೆ ನಡೆಯುತ್ತೇವೆ ಎಂದರು. ಹಸಿರುಮಕ್ಕಿ ಸೇತುವೆ ಕಾಮಗಾರಿ ವ್ಯವಸ್ಥಿತವಾಗಿ ನಡೆಯುತ್ತಿದೆ. ಇದು ವಿಳಂಬವಾಗಲು ಕಾರಣ ಬಿ.ವೈ.ರಾಘವೇಂದ್ರ, ಹಾಲಪ್ಪ. ತುಮರಿ ಸೇತುವೆ ಆದ ನಂತರವೇ ಇದು ಉದ್ಘಾಟನೆ ಆಗಬೇಕು ಎನ್ನುವ ಮನಸ್ಥಿತಿಯಿಂದ ಹಣ ಬಿಡುಗಡೆ ಮಾಡಲಿಲ್ಲ. ಕಳಸವಳ್ಳಿ - ಅಂಬಾರಗೋಡ್ಲು ಸೇತುವೆ ನಿರ್ಮಾಣದ ಕುರಿತು ತಾನು ಈ ಹಿಂದೆ ಬಿಜೆಪಿಯಿಂದ ಶಾಸಕನಾಗಿದ್ದ ಸಂದರ್ಭದಲ್ಲಿ ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದಾಗ 2008ರಲ್ಲೇ ಮನವಿ ಮಾಡಿದ್ದೆ. ಈ ಸೇತುವೆ ನಿರ್ಮಾಣದ ಆರಂಭದ ಹಂತದಲ್ಲಿ ನನ್ನ ಪ್ರಯತ್ನವೂ ಇದೆ. ಗೋಪಾಲಕೃಷ್ಣ ಬೇಳೂರು, ಶಾಸಕ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net