

ಕಂಪ್ಲಿ: ತುಂಗಭದ್ರಾ ಜಲಾಶಯದಿಂದ ನದಿಗೆ 90 ಸಾವಿರ ಕ್ಯೂಸೆಕ್ ನೀರು ಹರಿಸಿರುವುದರಿಂದ ಸೇತುವೆ ಮುಳುಗಡೆ ಹಂತ ತಲುಪಿದೆ. ಇದರಿಂದಾಗಿ ಸೋಮವಾರ ಸೇತುವೆ ಮೇಲೆ ಬಸ್, ಲಾರಿ ಸೇರಿದಂತೆ ಭಾರಿ ವಾಹನಗಳ ಸಂಚಾರ ನಿಷೇಧಿಸಲಾಗಿದೆ.
ಸೇತುವೆಗೆ ಹೊಂದಿಕೊಂಡಂತೆ ನೀರು ಹರಿಯುತ್ತಿದ್ದು, ನದಿಗೆ ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿಸಿದರೆ ಸೇತುವೆ ಮುಳುಗಡೆಯಾಗಲಿದೆ. ಸೋಮವಾರ ಭಾರಿ ವಾಹನಗಳ ಸಂಚಾರ ನಿಷೇಧಿಸಿದ್ದು, ಪಾದಚಾರಿಗಳು ಹಾಗೂ ದ್ವಿಚಕ್ರ ವಾಹನಗಳ ಸಂಚಾರಕ್ಕೆ ಅವಕಾಶ ಮಾಡಿಕೊಡಲಾಗಿತ್ತು.
ಇದಕ್ಕೂ ಮುನ್ನ ಸೇತುವೆ ಮೇಲೆ ದ್ವಿಚಕ್ರ ವಾಹನಗಳ ಸಂಚಾರವನ್ನು ಸ್ವಲ್ಪ ಹೊತ್ತು ಸ್ಥಗಿತಗೊಳಿಸಿದ್ದರಿಂದ ಸೇತುವೆಯ ಎರಡೂ ಕಡೆ ಬೈಕ್‌ಗಳು ಹೆಚ್ಚಿನ ಸಂಖ್ಯೆಯಲ್ಲಿ ನಿಂತಿದ್ದವು. ಇನ್ನು ಪಟ್ಟಣದ ಬಸ್ ನಿಲ್ದಾಣದಿಂದ ಸೇತುವೆವರೆಗೆ 10 ರೂಪಾಯಿ ನೀಡಿ ಆಟೋದಲ್ಲಿ ಬಂದ ಜನರು ಅಲ್ಲಿಂದ ನಡೆದು ಸೇತುವೆ ದಾಟಿದರು. ಬಳಿಕ ಸೇತುವೆ ಆ ಕಡೆಯ ಚಿಕ್ಕಜಂತಕಲ್‌ನಿಂದ ಗಂಗಾವತಿಗೆ ಮಾರ್ಗದಲ್ಲಿ ಸಂಚರಿಸಿದರು. ಸೇತುವೆ ಮೇಲೆ ಸಂಚಾರ ಸಂಪೂರ್ಣ ಸ್ಥಗಿತಗೊಳಿಸಿದರೆ ಬುಕ್ಕಸಾಗರ ಸೇತುವೆ ಮೂಲಕ ಗಂಗಾವತಿಗೆ ತೆರಳಬೇಕಾಗುತ್ತದೆ.