ಸೇತುವೆ ನಿರ್ಮಾಣಕ್ಕೆ ಶಾಸಕರಿಂದ ಭೂಮಿ ಪೂಜೆ

21 CRP-6
Published on

ಚನ್ನರಾಯಪಟ್ಟಣ: ಪಟ್ಟಣದಿಂದ ಗುಂಡಶೆಟ್ಟಿಗೆ ಸಂಪರ್ಕ ಕಲ್ಪಿಸುವ ಅಮಾನಿಕೆರೆ ಬಳಿ ಇದ್ದ ಸೇತುವೆ ಸಂಪೂರ್ಣ ಶಿಥಿಲವಾಗಿದ್ದ ಕಾರಣ ಗ್ರಾಮಸ್ಥರಿಗೆ, ತೊಂದರೆಯಾಗುತ್ತಿದ್ದನ್ನು ಮನಗಂಡು ಹೇಮಾವತಿ ನಾಲಾ ವಿಭಾಗದಡಿ ಹೊಸದಾಗಿ ಸೇತುವೆ ನಿರ್ಮಾಣ ಮಾಡಲಾಗುತ್ತಿದೆ ಎಂದು ಶಾಸಕ ಸಿ.ಎನ್.ಬಾಲಕೃಷ್ಣ ಹೇಳಿದರು.

ಪಟ್ಟಣದ ಅಮಾನಿಕೆರೆ ಬಳಿ ನೂತನವಾಗಿ ನಿರ್ಮಾಣ ಮಾಡಲಾಗುವ ಸೇತುವೆಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದ ಅವರು, ಹೇಮಾವತಿ ನಾಲಾ ವಿಭಾಗದಡಿ 5 ಕೋಟಿ ರೂ. ವೆಚ್ಚದಲ್ಲಿ ಕೈಗೆತ್ತಿಕೊಂಡಿರುವ ಆರು ಕಾಮಗಾರಿಗಳ ಪೈಕಿ ಅಮಾನಿಕೆರೆ ಬಳಿಯ ಸೇತುವೆ ನಿರ್ಮಾಣವೂ ಸೇರಿದೆ. ಸೇತುವೆ ಶಿಥಿಲವಾಗಿರುವುದರ ಜತೆಗ ತಗ್ಗಿನಿಂದ ಕೂಡಿದ ಸೇತುವೆಯಿಂದ ಕೆರೆಗೆ ನೀರು ಹೆಚ್ಚಾಗಿ ಸೇತುವೆಯ ಮೇಲೆ ಹರಿಯುತ್ತಿದ್ದರಿಂದ ಕೆರೆಯ ಇನ್ನೊಂದು ಬದಿಗೆ ತೆರಳಲು ಸಂಪರ್ಕವೇ ಕಡಿತವಾಗುತ್ತಿತ್ತು. ಈ ಬಗ್ಗೆ ಸಾರ್ವಜನಿಕರು, ಗ್ರಾಮಸ್ಥರು ತಮ್ಮ ಗಮನಕ್ಕೆ ತಂದ ಹಿನ್ನೆಲೆಯಲ್ಲಿ ಹೊಸದಾಗಿ ಸೇತುವೆ ನಿರ್ಮಾಣ, ಎರಡು ಕಡೆ ಗೈಡ್‌ವಾಲ್ ನಿರ್ಮಾಣ ಮಾಡಲಾಗುತ್ತದೆ.

ಕಳೆದ ವರ್ಷ ಅತಿಯಾದ ಮಳೆಯ ಕಾರಣ ರಸ್ತೆಯ ಬಲಭಾಗದಲ್ಲಿರುವ ನಿವಾಸಿಗಳ ಮನೆಗಳಿಗೆ ನೀರು ನುಗ್ಗಿ ಪರದಾಡುವ ಸ್ಥಿತಿ ಉಂಟಾಗಿತ್ತು. ಇದೀಗ ಸೇತುವೆ ನಿರ್ಮಾಣದಿಂದ ಮುಂದೆ ಎಂತಹ ಮಳೆ ಬಂದರೂ, ಕೆರೆ ಕೋಡಿ ಬಿದ್ದರೂ ಮನೆಗಳಿಗೆ ಮತ್ತು ರಸ್ತೆಗೆ ಹಾನಿಯಾಗುವುದಿಲ್ಲ ಎಂದರು.

ನಗರ ಭಾಗದಿಂದ ಬರುವ ನೀರು ಮನೆಗಳ ಮುಂಭಾಗದ ಚರಂಡಿಯಲ್ಲಿ ಹರಿಯುತ್ತಿದ್ದು, ಮಳೆ ಸಂದರ್ಭದಲ್ಲಿ ಹೆಚ್ಚಿನ ನೀರು ವಸತಿ ಪ್ರದೇಶಕ್ಕೆ ಹರಿದು ಹಾನಿ ಮಾಡುತ್ತಿದ್ದು, ತಡೆಗೋಡೆ ನಿರ್ಮಿಸಿಕೊಡುವಂತೆ ಸ್ಥಳೀಯ ನಿವಾಸಿಗಳು ಶಾಸಕರಿಗೆ ಮನವಿ ಮಾಡಿದ ಹಿನ್ನೆಲೆಯಲ್ಲಿ ಸೇತುವೆ ಕಾಮಗಾರಿಯೊಂದಿಗೆ 25 ಮೀಟರ್ ತಡೆಗೋಡೆ ನಿರ್ಮಿಸಿಕೊಡಲಾಗುವುದೆಂದು ಆಶ್ವಾಸನೆ ನೀಡಿದರು.

ಪುರಸಭಾಧ್ಯಕ್ಷ ಸಿ.ಎನ್.ಮೋಹನ್, ಉಪಾಧ್ಯಕ್ಷೆ ರಾಣಿಕೃಷ್ಣ, ಸ್ಥಾಯಿ ಸಮಿತಿ ಅಧ್ಯಕ್ಷ ಸುರೇಶ್, ಸದಸ್ಯರಾದ ಗಣೇಶ್, ರಾಮು, ಮಾಜಿ ಸದಸ್ಯ ಪುಟ್ಟಸ್ವಾಮೀಗೌಡ, ಮುಖಂಡ ರಾಜು, ಗಾರೆ ಕೃಷ್ಣ, ಸಿ.ಆರ್.ಮಂಜುನಾಥ್, ದೊರೆಸ್ವಾಮಿ, ಆರೀಫ್, ಪುರಿಮಂಜು, ಜೆಇ ವಿಜಯ್, ಗುತ್ತೀಗೆದಾರ, ಗುತ್ತೇಗೆದಾರ ಬರಾಳು ಪ್ರಕಾಶ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net