

ವಿಜಯವಾಣಿ ಸುದ್ದಿಜಾಲ ಧಾರವಾಡ
ಮಳೆಗಾಲದಲ್ಲಿ ಅಳ್ನಾವರ ತಾಲೂಕಿನ ಕಂಬಾರಗಣವಿ ಸಂಪರ್ಕ ಸೇತುವೆ ಜಲಾವೃತವಾಗಿ ಗ್ರಾಮಸ್ಥರಿಗೆ ತೊಂದರೆ ಆಗುತ್ತಿದೆ. ಇದರ ಪರಿಹಾರಕ್ಕಾಗಿ 1.5 ಕೋಟಿ ರೂ. ವೆಚ್ಚದಲ್ಲಿ ಹೊಸ ಸೇತುವೆ ನಿರ್ಮಾಣಕ್ಕೆ ಕಾರ್ಯಾದೇಶ ನೀಡಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ತಿಳಿಸಿದರು.
ಅಳ್ನಾವರ ತಾಲೂಕಿನ ಕಂಬಾರಗಣವಿ ಗ್ರಾಮದ ಸಂಪರ್ಕ ಸೇತುವೆಯನ್ನು ಭಾನುವಾರ ವೀಕ್ಷಿಸಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕಂಬಾರಗಣವಿ ಗ್ರಾಮ ಅರಣ್ಯ ಪ್ರದೇಶದಲ್ಲಿದೆ. ನಿರಂತರ ಮಳೆ ಆದರೆ ಸುತ್ತಲಿನ ಮಳೆ ನೀರು ಇದೇ ಸೇತುವೆ ಮೂಲಕ ಹೋಗುತ್ತದೆ. ಈ ಸೇತುವೆಯನ್ನು ಸುಮಾರು 5 ಮೀಟರ್ ಎತ್ತರಕ್ಕೆ ನಿರ್ಮಿಸಲು ಆದೇಶಿಸಲಾಗಿದೆ. 30 ಮೀಟರ್ ಉದ್ದದ ಮತ್ತು 5 ಮೀಟರ್ ಅಗಲದ ಸೇತುವೆ ನಿರ್ಮಾಣಕ್ಕೆ ಕ್ರಮ ವಹಿಸಿದ್ದು, ಮಳೆ ಕಡಿಮೆಯಾದ ತಕ್ಷಣ ಕಾಮಗಾರಿ ಆರಂಭಕ್ಕೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದರು.
ಕಾಮಗಾರಿ ಆರಂಭಿಸುವವರೆಗೆ ಸೇತುವೆ ಬಗ್ಗೆ ನಿಗಾವಹಿಸಿ, ಅತಿ ನೀರು ಹರಿದುಬಂದು ರಸ್ತೆ ಬಂದಾದರೆ, ಸೇತುವೆಗೆ ಸಿಲುಕಿದ ಕಟ್ಟಿಗೆ, ಕಸ, ಕಡ್ಡಿ ತೆಗೆದು ಗ್ರಾಮಸ್ಥರ ಸಂಚಾರಕ್ಕೆ ಅವಕಾಶ ಮಾಡಲು ಸೂಚಿಸಲಾಗಿದೆ. ಕುಂಬಾರಗಣವಿ ಗ್ರಾಮದಲ್ಲಿನ ಅಂಗನವಾಡಿ ಕೇಂದ್ರಕ್ಕೆ ಕಳೆದ ವರ್ಷ ನೂತನ ಕಟ್ಟಡ ನೀಡಲಾಗಿದೆ. ಕಟ್ಟಡದ ಸುತ್ತ ಮಳೆ ನೀರು ಸಂಗ್ರಹವಾಗುತ್ತಿದ್ದು, ತೆರವುಗೊಳಿಸಿ ಕಟ್ಟಡದ ಸುತ್ತ ಆವರಣ ಗೊಡೆ ನಿರ್ಮಿಸಲು ಕಾರ್ಯಾದೇಶ ನೀಡಲಾಗಿದೆ ಎಂದರು.
ಜಿಲ್ಲೆಯ ಎಲ್ಲ ಶಾಲೆ ಹಾಗೂ ಅಂಗನವಾಡಿ ಕಟ್ಟಡಗಳ ಸಾಮರ್ಥ್ಯ ಹಾಗೂ ಬಳಸಲು ಯೋಗ್ಯವಿರುವ ಬಗ್ಗೆ ಲೋಕೋಪಯೋಗಿ ಇಲಾಖೆಯಿಂದ ಸಮೀಕ್ಷೆ ಮಾಡಲಾಗಿದೆ. ಜಿಲ್ಲೆಯಲ್ಲಿ ಶಿಥಿಲಗೊಂಡ 62 ಅಂಗನವಾಡಿ ಕಟ್ಟಡಗಳನ್ನು ಗುರುತಿಸಲಾಗಿದ್ದು, ಇವುಗಳಲ್ಲಿ 19 ಕಟ್ಟಡಗಳ ದುರಸ್ತಿಗೆ ಕ್ರಮವಹಿಸಲಾಗಿದೆ. 32 ಹೊಸ ಕಟ್ಟಡಗಳ ನಿರ್ಮಾಣಕ್ಕಾಗಿ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ. 11 ಅಂಗನವಾಡಿ ಕೇಂದ್ರಗಳಿಗೆ ನೂತನ ಕಟ್ಟಡ ನಿರ್ಮಿಸುವ ಕಾಮಗಾರಿ ಆರಂಭವಾಗಿದೆ ಎಂದರು.
ಅಪಾಯದ ಸ್ಥಿತಿಯಲ್ಲಿರುವ ಅಂಗನವಾಡಿ ಕಟ್ಟಡಗಳ ಬದಲಿಗೆ ಬೇರೆ ಕಟ್ಟಡಗಳಲ್ಲಿ ಮಕ್ಕಳ ಕಲಿಕೆಗೆ ಅವಕಾಶ ಮಾಡಲು ಅಧಿಕಾರಿಗಳಿಗೆ ಸೂಚಿಸಿದ್ದು, ಅದರಂತೆ ಕ್ರಮವಹಿಸಿ ವರದಿ ನೀಡಿದ್ದಾರೆ. ಇದಲ್ಲದೆ ಮಳೆಯಿಂದ ಸಾಕಷ್ಟು ಮನೆಗಳಿಗೆ ಹಾನಿಯಾಗಿದ್ದು, ಜಿಲ್ಲಾಧಿಕಾರಿ ಹಾಗೂ ತಹಸೀಲ್ದಾರರಿಗೆ ಪರಿಶೀಲನೆಗೆ ಸೂಚಿಸಲಾಗಿದೆ. ಅಧಿಕಾರಿಗಳು ಪರಿಶೀಲನೆ ನಡೆಸಿದ ಬಳಿಕ ಸರ್ಕಾರದಿಂದ ಪರಿಹಾರ ನೀಡಲಾಗುವುದು ಎಂದರು.