

ಕೊಪ್ಪಳ: ನಗರದ ಕುಷ್ಟಗಿ ರಸ್ತೆ ರೈಲ್ವೆ ಮೇಲ್ಸೇತುವೆ ಕಾಮಗಾರಿಗೆ ಹೆಚ್ಚುವರಿ 11 ಕೋಟಿ ರೂ. ಅನುದಾನ ಮಂಜೂರು ಮಾಡುವಂತೆ ಸಂಸದ ಸಂಗಣ್ಣ ಕರಡಿ ಮಂಗಳವಾರ ದೆಹಲಿಯಲ್ಲಿ ರೈಲ್ವೆ ಸಚಿವ ಅಶ್ವಿನ್ ವೈಷ್ಣವ್‌ಗೆ ಮನವಿ ಸಲ್ಲಿಸಿದರು.
ಕೇಂದ್ರ ಹಾಗೂ ರಾಜ್ಯ ಸರ್ಕಾರದ ಸಹಭಾಗಿತ್ವದಲ್ಲಿ ಕಾಮಗಾರಿ ನಡೆಯುತ್ತಿದೆ. ಬಿಡುಗಡೆಯಾದ ಅನುದಾನಕ್ಕೆ ತಕ್ಕಂತೆ ಕಾಮಗಾರಿ ನಡೆಯುತ್ತಿದೆ. ರಾಜ್ಯ ಸರ್ಕಾರದಿಂದ 13 ಕೋಟಿ ರೂ. ಹಾಗೂ ಕೇಂದ್ರ ಸರ್ಕಾರದಿಂದ 10.51 ಕೋಟಿ ರೂ. ಒಟ್ಟು 24 ಕೋಟಿ ರೂ.ವೆಚ್ಚದಲ್ಲಿ ಸೇತುವೆ ನಿರ್ಮಾಣಕ್ಕೆ ಯೋಜನೆ ರೂಪಿಸಲಾಗಿದೆ. ಸಾರ್ವಜನಿಕರ ಬೇಡಿಕೆಯಂತೆ ಕಾಮಗಾರಿ ನಕ್ಷೆ ಬದಲಾದ ಹಿನ್ನೆಲೆಯಲ್ಲಿ ಯೋಜನಾ ಮೊತ್ತ ಹೆಚ್ಚಳವಾಗಿದೆ. ಹೆಚ್ಚುವರಿ 11 ಕೋಟಿ ರೂ. ಅವಶ್ಯವಿದ್ದು, ಸಾರ್ವಜನಿಕ ದೃಷ್ಟಿಯಿಂದ ಬಿಡುಗಡೆ ಮಾಡಬೇಕು. ಇದರಿಂದ ಸಾರ್ವಜನಿಕರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಕಾಮಗಾರಿ ನಡೆಯಲಿದೆ. ಜನರ ಸುಗಮ ಓಡಾಟಕ್ಕೆ ಅನುಕೂಲವಾಗಲಿದೆ ಎಂದು ಮನವಿ ಮಾಡಿಕೊಂಡಿದ್ದಾರೆ. ಇಷ್ಟು ದಿನ ಸ್ಥಗಿತಗೊಂಡಿದ್ದ ಕಾಮಗಾರಿ ಮಂಗಳವಾರ ಆರಂಭವಾಗಿದ್ದು, ಆದಷ್ಟು ಬೇಗ ಮುಗಿವ ಭರವಸೆಯಲ್ಲಿ ಜನರಿದ್ದಾರೆ.